ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಾಂಸ್ಕೃತಿಕ, ಕ್ರೀಡಾ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು. ಡಾ. ರಾಮಚಂದ್ರ ಕಾಮತ್, ಸಿ.ಜಿ. ಮಂದಪ್ಪ, ಕೂಡಕಂಡಿ ಓಂಶ್ರೀ ದಯಾನಂದ, ಎಚ್.ಪಿ. ನಿರ್ಮಲಾ ಮತ್ತಿತರರು ಇದ್ದರು. 
ಕೊಡಗು

ಪ್ರತಿಭೆಯನ್ನು ಸರಿಯಾದ ಸಮಯಕ್ಕೆ ಬಳಸಿಕೊಳ್ಳಬೇಕು

ಸುನಿಲ್ ಪೊನ್ನೇಟಿ
ಮಡಿಕೇರಿ:
ವಿದ್ಯಾರ್ಥಿಗಳು ಪ್ರತಿಭೆಯನ್ನು ಸರಿಯಾದ ಸಮಯಕ್ಕೆ ಬಳಸಿಕೊಳ್ಳುವುದು ಒಂದು ಆಶಯವಾಗಿದೆ ಎಂದು ವೈದ್ಯಕೀಯ ಸಮುದಾಯ ಸಂಸ್ಥೆಯ ಮುಖ್ಯಸ್ಥ ಡಾ. ರಾಮಚಂದ್ರ ಕಾಮತ್ ಹೇಳಿದರು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ಕಾಲೇಜು ಆವರಣದಲ್ಲಿಶುಕ್ರವಾರ ನಡೆದ ಸಾಂಸ್ಕೃತಿಕ, ಕ್ರೀಡಾ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ಕೊಡಬೇಕು. ವಿದ್ಯಾರ್ಥಿಗಳು ನಾಯಕತ್ವದ ಗುಣ ಬೆಳೆಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.
ಮಾದಾಪುರ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಿ.ಜಿ. ಮಂದಪ್ಪ ಮಾತನಾಡಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವ್ಯಕ್ತಿತ್ವದ ವಿಕಾಸವನ್ನು ಬೆಳೆಸಿಕೊಳ್ಳುವುದು ಮಹತ್ವವಾಗಿದೆ. ಬಡತನ ಎಂಬುದು ಶಿಕ್ಷಣಕ್ಕೆ ಎಂದಿಗೂ ಅಡ್ಡಿಯಾಗಬಾರದು ಹಾಗೂ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ದೇಶಕ್ಕೆ ಕೊಡುಗೆ ನೀಡಬೇಕು ಎಂದರು.
2025ನೇ ಸಾಲಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೂಡಕಂಡಿ ಓಂಶ್ರೀ ದಯಾನಂದ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ತನ್ನದೇ ಆದ ಪ್ರತಿಭೆ ಎಂಬುವುದು ಅಡಗಿದೆ. ಆ ಪ್ರತಿಭೆಯನ್ನು ಹೊರಹಾಕಲು ಒಳ್ಳೆಯ ಶಿಕ್ಷಣ, ಒಳ್ಳೆಯ ವಿದ್ಯೆ ಅತಿ ಮುಖ್ಯ. ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ವಿದ್ಯಾರ್ಥಿಗಳು ಪ್ರತಿಯೊಂದು ಹಂತದಲ್ಲಿ ಕಲಿಕೆಯ ಒಂದು ಅಧ್ಯಯನದಲ್ಲಿ ತೊಡಗಿಸಿಕೊಂಡಿರಬೇಕು. ವಿದ್ಯಾರ್ಥಿಗಳಲ್ಲಿ ಗೌರವ ಅತಿ ಮುಖ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಶೈಕ್ಷಣಿಕ ಜ್ಞಾನ, ಕ್ರಿಯಾಶೀಲತೆ, ಸೃಜನಶೀಲತೆ ಬೆಳೆಸಿಕೊಳ್ಳಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಎಚ್.ಪಿ. ನಿರ್ಮಲಾ ಮಾತನಾಡಿ ವಿದ್ಯಾರ್ಥಿಗಳಲ್ಲಿ ಉತ್ತಮ ಮನೋಭಾವನೆ ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪತ್ರಾಂಕಿತ ವ್ಯವಸ್ಥಾಪಕ ಕೆ.ಪಿ. ರವಿಕಿರಣ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಉದಯ ಕುಮಾರ್, ಯು.ಸಿ.ಎಂ.ಎಸ್. ಕೆ.ಎಂ ಮುದ್ದಪ್ಪ, ಎನ್.ಎಸ್.ಎಸ್. ಘಟಕ ಸಂಚಾಲಕ ಡಾ. ಹೆಚ್.ಎಸ್. ವೇಣುಗೋಪಾಲ್, ಐ.ಕ್ಯೂ.ಎ.ಸಿ. ಕ್ರೀಡಾ ಮತ್ತು ರೇಂಜರ್ ಅಧಿಕಾರಿ ಸಂಚಾಲಕ ರಾಖಿ ಪೂವಣ್ಣ, ವಿದ್ಯಾರ್ಥಿಗಳು, ಪೋಷಕರು, ಸಿಬ್ಬಂದಿ ವರ್ಗದವರು ಇತರರು ಇದ್ದರು.