ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮವನ್ನು ಕೆ.ತಿಮ್ಮಪ್ಪ ಉದ್ಘಾಟಿಸಿದರು. ಟಿ.ಪಿ.ರಮೇಶ್, ಸಂಪತ್ ಕುಮಾರ್, ಕೇಶವ ಕಾಮತ್ ಇತರರಿದ್ದರು.
- ಓದುವ ಆಸಕ್ತಿ ಬೆಳೆಸಲು ಮುಂದಾಗಿ
- ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಟಿ.ಪಿ.ರಮೇಶ್
ಮಡಿಕೇರಿ: ಜಿಲ್ಲೆಯಲ್ಲಿರುವ ವಿದ್ಯಾ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್‌ಗಳು ತಮ್ಮಲ್ಲಿರುವ ಗ್ರಂಥಾಲಯಗಳನ್ನು ಮುಂದಿಟ್ಟುಕೊಂಡು ಪ್ರತೀವರ್ಷ ವಿಶ್ವ ಪುಸ್ತಕ ದಿನವನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಬೆಳೆಸಲು ಮುಂದಾಗಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಟಿ.ಪಿ.ರಮೇಶ್ ಅವರು ಕರೆ ನೀಡಿದರು.
ಕನ್ನಡ ಪುಸ್ತಕ ಪ್ರಾಧಿಕಾರ, ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಗುರುವಾರ ನಗರದ ಕೊಡಗು ಪತ್ರಿಕ್ಭಾವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ದಿನದ ಮಹತ್ವ ಕುರಿತು ಮಾತನಾಡಿದರು.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮೊಬೈಲ್, ಅಂತರ್ಜಾಲ, ಕಂಪ್ಯೂಟರ್ ಯುಗದಲ್ಲಿ ನಾವು ಮುಂದಿದ್ದರೂ, ಓದುವ ಹವ್ಯಾಸದಲ್ಲಿ ಹಿಂದುಳಿದಿದ್ದೇವೆ. ಪುಸ್ತಕ ಓದುವುದರಿಂದ ಸಿಗುವ ಜ್ಞಾನ, ಸಂತೋಷ ಮತ್ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಪುಸ್ತಕಗಳನ್ನು ಓದುವುದರಿಂದ ನಮ್ಮ ಜೀವನವನ್ನೇ ಬದಲಾಯಿಸಿಕೊಳ್ಳಬಹುದಾಗಿದೆ ಎಂದು ನುಡಿದರು.
ಪುಸ್ತಕಗಳು ಪ್ರಪಂಚದ ಇತಿಹಾಸ ಮತ್ತು ಭವಿಷ್ಯದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಪ್ರಥಮ ಬಾರಿಗೆ ವಿಶ್ವ ಪುಸ್ತಕ ದಿನವನ್ನು ಆಚರಿಸುವುದರೊಂದಿಗೆ ಮನೆಗೊಂದು ಗ್ರಂಥಾಲಯ ಅನುಷ್ಠಾನಕ್ಕೆ ಮುನ್ನುಡಿ ಬರೆಯಲಾಗಿದೆ. ಪುಸ್ತಕಗಳು ಆಕಾರದಲ್ಲಿ ಚಿಕ್ಕದಾದರೂ, ವಾಸ್ತವಕ್ಕೆ ತೀರಾ ಹತ್ತಿರವಾಗಿರುವುದರಿಂದ ಪ್ರತಿಯೊಬ್ಬರೂ ಅವರವರ ಮನೆಗಳಲ್ಲಿ ಪುಸ್ತಕ ಭಂಡಾರ ಸ್ಥಾಪಿಸಲು ಮುಂದಾಗಬೇಕು. ಶಾಲಾ, ಕಾಲೇಜುಗಳಲ್ಲಿರುವ ಗ್ರಂಥಾಲಯಗಳಲ್ಲಿ ಪ್ರತೀವರ್ಷ ವಿಶ್ವ ಪುಸ್ತಕ ದಿನವನ್ನು ಆಚರಿಸುವಂತಾಗಬೇಕು. ಹಾಗಾದಾಗ ಮಾತ್ರ ಯುವಜನರಲ್ಲಿ ಓದುವ ಹವ್ಯಾಸ ಬೆಳೆಯಲು ಸಾಧ್ಯ ಎಂದು ಟಿ.ಪಿ.ರಮೇಶ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಪತ್ರಿಕಾಭವನ ಟ್ರಸ್ಟ್‌ನ ಕೋಶಾಧಿಕಾರಿ ಕೆ.ತಿಮ್ಮಪ್ಪ ಮಾತನಾಡಿ, ಪುಸ್ತಕಗಳು ಜ್ಞಾನದ ಕಿಟಕಿಗಳಿದ್ದಂತೆ. ಅವು ಸಂಸ್ಕೃತಿ ಮತ್ತು ತಲೆಮಾರುಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಪುಸ್ತಕಗಳು ಬದುಕಿನ ಕೈಗನ್ನಡಿ ಮತ್ತು ಸಮಾಜದ ಪ್ರತಿಬಿಂಬ. ಪುಸ್ತಕಗಳು ಮಾನವ ಮಿತ್ರ ಮಾತ್ರವಲ್ಲದೆ, ಜ್ಞಾನ ನೀಡುವ ಕಲ್ಪವೃಕ್ಷವಿದ್ದಂತೆ ಎಂದು ವಿಶ್ಲೇಷಿಸಿದರು.
ಜಿಲ್ಲಾ ಕ.ಸಾ.ಪ. ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್ ಮಾತನಾಡಿ, ವಿಶ್ವ ಪುಸ್ತಕ ದಿನಾಚರಣೆಯ ಸಂದರ್ಭದಲ್ಲಿ ಪ್ರತಿ ಶಾಲೆಗಳು, ಗ್ರಂಥಾಲಯಗಳಲ್ಲಿ ಪುಸ್ತಕ ಓದುವ ಕಾರ್ಯಕ್ರಮ, ಪುಸ್ತಕ ಪ್ರದರ್ಶನ, ಸಾಹಿತ್ಯಿಕ ಚರ್ಚೆಗಳು ನಡೆಯಬೇಕಾಗಿದೆ. ಮನುಷ್ಯನಿಗೆ ಪುಸ್ತಕದಷ್ಟು ನಿಷ್ಠಾವಂತ ಸ್ನೇಹಿತ ಮತ್ತೊಬ್ಬನಿಲ್ಲ. ಆದರೆ, ಇಂದು ಮೊಬೈಲ್ನಂತಹ ಸ್ನೇಹಿತ ಬೇರೊಬ್ಬನಿಲ್ಲ ಎನ್ನುವಂತಾಗಿದೆ. ಜಗವನ್ನು ಬೆಳಗಲು ಸೂರ್ಯ ಹೇಗೆ ಅವಶ್ಯವೋ ಅದೇರೀತಿ ಬದುಕು ಬೆಳಗಲು ಪುಸ್ತಕಗಳು ಅಗತ್ಯ ಎಂದು ಪುಸ್ತಕದ ಮಹತ್ವವನ್ನು ಒತ್ತಿ ಹೇಳಿದರು.
ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಂಚಾಲಕ ಎಂ.ಪಿ.ಕೇಶವ ಕಾಮತ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ನೆರೆದಿದ್ದವರಿಗೆ ಉಚಿತವಾಗಿ ಪುಸ್ತಕ ವಿತರಿಸಿ ಮಾತನಾಡಿ, ಮನಸ್ಸಿಗೆ ನೆಮ್ಮದಿ ಸಿಗಬೇಕೆಂದರೆ ಮನೆಯಲ್ಲಿ ಸಣ್ಣ ಗ್ರಂಥಾಲಯವಿರಬೇಕು. ಗ್ರಂಥಾಲಯವೆಂದರೆ ಕೇವಲ ಪುಸ್ತಕಗಳ ತರಕಲ್ಲ. ಅದು ನಮ್ಮ ದೇಹದೊಳಗಿನ ಆತ್ಮದಂತೆ. ನಮ್ಮ ಮನೆಯ ದೇವಾಲಯದ ಜ್ಞಾನ ಸಂಸ್ಕೃತಿಯ ಕಲಶ ಎಂದರು.
ಮನೆಯಲ್ಲಿ ಒಂದು ಪುಟ್ಟ ಗ್ರಂಥಾಲಯವಿದೆ ಎಂದರೆ ಸ್ನೇಹಿತರಲ್ಲಿ ನಮ್ಮ ಪ್ರತಿಷ್ಠೆ ಹೆಚ್ಚುತ್ತದೆ. ಪುಸ್ತಕ ಕೇವಲ ಸರಕಾಗದೆ ನಮ್ಮ ಜ್ಞಾನ ಹೆಚ್ಚಿಸಿಕೊಳ್ಳುವ ಸಂಸ್ಕೃತಿಯಾಗಿ ಮನೆ ಮನೆಯಲ್ಲಿ ಸ್ಥಾನ ಪಡೆದುಕೊಂಡರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆ ಕಾರಣದಿಂದಲೇ ಮನೆಗೊಂದು ಗ್ರಂಥಾಲಯ ಯೋಜನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಬಿ.ಎನ್.ಪ್ರಕಾಶ್, ಹೆಚ್.ಎಲ್.ದಿವಾಕರ್, ಪ್ರತಿಮಾ ಹರೀಶ್ ರೈ, ಹಿರಿಯ ಸಾಹಿತಿ ಬೈತಡ್ಕ ಜಾನಕಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಮಹಾಲಕ್ಷ್ಮಿ, ವಿದ್ಯಾರ್ಥಿಗಳು ಹಾಜರಿದ್ದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿನಿಯರಾದ ಅರ್ಪಿತಾ ಹಾಗೂ ಶಿಲ್ಪಾ ಪ್ರಾರ್ಥಿಸಿದರೆ, ಕನ್ನಡ ಜಾಗೃತಿ ಸಮಿತಿ ಸದಸ್ಯ ರಂಜಿತ್ ಕವಲಪಾರ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಸದಸ್ಯ ಕೆ.ವಿ.ಉಮೇಶ್ ವಂದಿಸಿದರು.