ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸಾಹಿತಿ ಡಾ. ಸಿದ್ದಯ್ಯ ಪುರಾಣಿಕ್ ಅವರ ಕುರಿತು ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ವಿಚಾರ ಸಂಕಿರಣ ನಡೆಯಿತು. ಬಿ.ಆರ್. ನಾರಾಯಣ, ಪ್ರೊ. ಹೆಚ್.ಬಿ. ಲಿಂಗಮೂರ್ತಿ, ಕೆ.ಎಸ್. ಮೂರ್ತಿ, ಲೀಲಾಕುಮಾರಿ ತೊಡಿಕಾನ ಮತ್ತಿತರರು ಇದ್ದರು.
ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸಾಹಿತಿ ಡಾ. ಸಿದ್ದಯ್ಯ ಪುರಾಣಿಕ್ ಅವರ ಕುರಿತು ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ಬುಧವಾರ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಕುಶಾಲನಗರದ ಅನುಗ್ರಹ ಪದವಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಸಿದ್ದಯ್ಯ ಪುರಾಣಿಕ್ ಭಾವಚಿತ್ರಕ್ಕೆ ದ್ವಿಭಾಷಾ ಸಾಹಿತಿ ಬಿ.ಆರ್. ನಾರಾಯಣ್ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, 1967 ರ ದಶಕದಲ್ಲಿ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಡಾ. ಸಿದ್ಧಯ್ಯ ಪುರಾಣಿಕ್ ಅತ್ಯಂತ ಸರಳ, ಸಜ್ಜನ, ಸಭ್ಯ, ಸಾತ್ವಿಕ, ಸೌಮ್ಯ ಸ್ವಭಾವದವರಾಗಿದ್ದರು. ದೀನ ದಲಿತರು, ಶೋಷಿತರಿಗೆ, ನೊಂದವರಿಗೆ ತಮ್ಮ ಕಚೇರಿ ಹಾಗೂ ತಮ್ಮನ್ನು ಮುಕ್ತಗೊಳಿಸಿದ್ದ ಬಹುಶಃ ಪ್ರಥಮ
ಸಾಹಿತ್ಯ ಕ್ಷೇತ್ರದ ಬಗ್ಗೆ ಉತ್ಕಟ ಒಲವು ಹೊಂದಿದ್ದ ಪುರಾಣಿಕರು ಬಸವ ಚಿಂತನೆಯ ಛಾಯೆಯೊಂದಿಗೆ ಹಲವಾರು ಕೃತಿಗಳನ್ನು ಹೊರತಂದಿದ್ದರು.
ಶಿಕ್ಷಕನೇ ಇರಲಿ, ಅಥವಾ ಇನ್ನಾವುದೇ ಕೆಳಸ್ತರದ ಉದ್ಯೋಗಿಯೇ ಇರಲಿ ನಿಸ್ಪೃಹತೆ ಹಾಗೂ ಶ್ರದ್ದೆಯಿಂದ ತನ್ನ ಕಾರ್ಯವನ್ನು ನಿರ್ವಹಿಸಿದಲ್ಲಿ ಅದರ ಮೂಲಕ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಬಹುದೆಂದು ಡಾ. ಪುರಾಣಿಕ್ ಭಾವಿಸಿದ್ದರು ಎಂದು ಹೇಳಿದರು.
ಅನುಗ್ರಹ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಹೆಚ್.ಬಿ. ಲಿಂಗಮೂರ್ತಿ ಮಾತನಾಡಿ, ಕಾವ್ಯಾನಂದ ಎಂಬ ಕಾವ್ಯನಾಮದೊಂದಿಗೆ ಹೆಸರಾಗಿದ್ದ ಪುರಾಣಿಕರು ಏನಾದರೂ ಆಗು ನೀ ಬಯಸಿದಂತಾಗು ಎಂದು ಕರೆ ನೀಡಿದ್ದರು. ಹೊತ್ತಿತೋ ಹೊತ್ತಿತು ಕನ್ನಡದ ದೀಪ. ಕಳೆಯಿತು ಶತಮಾನಗಳ ತಾಪ ಎಂದು ಸಂಭ್ರಮಿಸಿದ್ದ ದಿಟ್ಟ ಕವಿ ಅವರು ಎಂದು ಸ್ಮರಿಸಿದರು.
ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಂಚಾಲಕ ಕೆ.ಎಸ್. ಮೂರ್ತಿ ಮಾತನಾಡಿ, ಕೊಡಗು ಜಿಲ್ಲೆಯ ದಕ್ಷ ಅಧಿಕಾರಿಯಾಗಿದ್ದ ಡಾ. ಸಿದ್ದಯ್ಯಪುರಾಣಿಕರ ಹೆಸರಿನಲ್ಲಿ ಕುಶಾಲನಗರದಲ್ಲಿ ಬಡಾವಣೆಯೊಂದಿದ್ದು ಸದಾ ಸ್ಮರಣೀಯ ಎಂದರು.
ಸಾಹಿತಿ ಲೀಲಾಕುಮಾರಿ ತೊಡಿಕಾನ ಮಾತನಾಡಿ, ಸಾಹಿತ್ಯ ರಂಗದ ಸಾಹಿತ್ಯ ಸಾಧಕರನ್ನು ಸ್ಮರಿಸುವ ಮೂಲಕ ವಿದ್ಯಾರ್ಥಿಗಳು ಸಾಹಿತ್ಯದ ಅಭಿರುಚಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಉಪನ್ಯಾಸಕರಾದ ನುಸ್ರತ್, ರೇಷ್ಮಾ, ಸೀಮಾ, ಮೇಘನಾ, ಅಶ್ವಿನಿ, ಪವನ್, ಹೇಮಂತ್ ಇದ್ದರು.
ಇದೇ ಸಂದರ್ಭ ವಿದ್ಯಾರ್ಥಿಗಳಿಂದ ಭಾವಗೀತೆ ಕಾರ್ಯಕ್ರಮ ಗಮನ ಸೆಳೆಯಿತು.