ಮಡಿಕೇರಿ ಚೈನ್‌ಗೇಟ್ ಬಳಿ ಕಾಮಗಾರಿ ಬಹುತೇಕ ಪೂರ್ಣಗೊಂಡಿರುವ ಕರ್ನಾಟಕ ಸುವರ್ಣ ಸಾಂಸ್ಕೃತಿಕ ಭವನ ಕಟ್ಟಡ
- ಗಜಗರ್ಭದಂತಾಗಿರುವ ಕಾಮಗಾರಿ
- ಸುದೀರ್ಘ 20 ವರ್ಷಗಳ ಯೋಜನೆ
- ಮಾರ್ಚ್ ಅಂತ್ಯಕ್ಕೆ ಮುಗಿಯುವ ನಿರೀಕ್ಷೆ
ಗಜ ಗರ್ಭದಂತಾಗಿರುವ ಮಡಿಕೇರಿಯ ಕರ್ನಾಟಕ ಸುವರ್ಣ ಸಾಂಸ್ಕೃತಿಕ ಭವನ ಕಾಮಗಾರಿ ಕೊನೆಗೂ ಅಂತಿಮ ಘಟ್ಟ ತಲುಪಿದೆ. ಎಲ್ಲವೂ ಅಂದುಕೊAಡAತೆ ಆದರೆ ಮಾರ್ಚ್ ಅಂತ್ಯಕ್ಕೆ ಈ ಕಟ್ಟಡದ ನಿರ್ಮಾಣ ಮುಗಿಯುವ ನಿರೀಕ್ಷೆ ಇದೆ. 2006ಲ್ಲೇ ಘೋಷಣೆ ಆಗಿದ್ದ ಈ ಯೋಜನೆ ಸುಧೀರ್ಘ 20 ವರ್ಷಗಳ ಬಳಿಕ ಅನುಷ್ಠಾನಕ್ಕೆ ಬರಲಿದ್ದು, ಆರಂಭದಲ್ಲಿ 1.60 ಕೋಟಿ ರೂ. ಮೊತ್ತದಲ್ಲಿ ಆಗಬೇಕಿದ್ದ ಭವನ ನಿರ್ಮಾಣ ಕಾಮಗಾರಿಯ ಒಟ್ಟು ಖರ್ಚು ಈಗ 5 ಕೋಟಿ ರೂ. ತಲುಪಿದೆ.
ಸರ್ಕಾರಗಳ ವಿಳಂಬ ನೀತಿ, ಅಧಿಕಾರಿಗಳ ನಿರ್ಲಕ್ಷö್ಯ, ಜನಪ್ರತಿನಿಧಿಗಳ ತಾತ್ಸಾರಕ್ಕೆ ಸ್ಪಷ್ಟ ಉದಾಹರಣೆಯಂತಿದ್ದ ಜಿಲ್ಲಾ ಕೇಂದ್ರ ಮಡಿಕೇರಿಯ ಕರ್ನಾಟಕ ಸುವರ್ಣ ಸಾಂಸ್ಕೃತಿಕ ಭವನಕ್ಕೆ ಅಂತಿಮವಾಗಿ ಮುಕ್ತಿ ಸಿಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಭವನದ ಶೇ. 90ರಷ್ಟು ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು ಉಳಿದ ಕೆಲಸ ಈಗ ಭರದಿಂದ ನಡೆಯುತ್ತಿದೆ. ಸಭಾಂಗಣದಲ್ಲಿ ಕುರ್ಚಿಗಳ ಅಳವಡಿಕೆ, ಸೌಂಡ್‌ಸಿಸ್ಟಮ್, ಪ್ರತಿಧ್ವನಿ ನಿರೋಧಕ ವ್ಯವಸ್ಥೆ ಅಳವಡಿಕೆ ಸೇರಿದಂತೆ ಅಂತಿಮ ಹಂತದ ಕೆಲಸಗಳು ಉಳಿದುಕೊಂಡಿದ್ದು, ಮಾರ್ಚ್ ಅಂತ್ಯಕ್ಕೆ ಸಂಪೂರ್ಣ ಕಾಮಗಾರಿ ಮುಗಿಯುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕೊಡಗಿಗೆ ಮೈಸೂರು ಕಲಾಮಂದಿರ ಮಾದರಿಯಲ್ಲಿ ಒಂದು ಸುಸಜ್ಜಿತ ಕನ್ನಡ ಸಮುಚ್ಛಯ ಭವನ ಬೇಕು ಎನ್ನುವುದು ಇಲ್ಲಿಯ ಸಾಹಿತ್ಯಾಸಕ್ತರ ಬಹಳ ಹಳೆಯ ಬೇಡಿಕೆ. ಇದಕ್ಕೆ ಸ್ಪಂದಿಸಿದ ಸರ್ಕಾರ 2006ನೇ ಸಾಲಿನಲ್ಲಿ ಮಡಿಕೇರಿ, ಶಿವಮೊಗ್ಗ ಹಾಗೂ ಉಡುಪಿಗೆ ಕರ್ನಾಟಕ ಸುವರ್ಣ ಸಾಂಸ್ಕೃತಿಕ ಭವನ ಯೋಜನೆಯನ್ನು ಘೋಷಣೆ ಮಾಡಿತ್ತು. ಆಗ ಉಪಮುಖ್ಯಮಂತ್ರಿಯಾಗಿದ್ದ ಎಂ.ಪಿ. ಪ್ರಕಾಶ್ 1.60 ಕೋಟಿ ರೂ. ಮೊತ್ತದ ಈ ಯೋಜನೆಯನ್ನು ಪ್ರಕಟಿಸಿದ್ದರು. ಆದರೆ ಇದಕ್ಕೆ 7 ವರ್ಷಗಳ ನಂತರ 2013ರಲ್ಲಿ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿತ್ತು.
ಹೀಗೆ ಆರಂಭದಲ್ಲೇ ವಿಳಂಬ ರಾಕ್ಷಸನ ಹಾವಳಿಗೆ ಸಿಲುಕಿದ ಯೋಜನೆಯ ಜಾರಿಗಾಗಿ ಭವನ ನಿರ್ಮಾಣಕ್ಕೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸ್ಥಳದ ಸಮಸ್ಯೆ ಕಾಣಿಸಿಕೊಂಡಿತು. ಕಾಮಗಾರಿಗೆ ಎರಡು ಕಡೆ ಭೂಮಿ ಪೂಜೆ ಮಾಡಿದ ದಾಖಲೆಯೂ ನಿರ್ಮಾಣ ಆಯಿತು. ನಂತರ ಮಡಿಕೇರಿ ಚೈನ್‌ಗೇಟ್ ಬಳಿ 80 ಸೆಂಟ್ ಜಾಗ ಇದಕ್ಕಾಗಿ ಅಂತಿಮಗೊಳಿಸಿ ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಭೂಮಿ ಪೂಜೆ ನೆರವೇರಿಸಿದ್ದರು. ಜಾಗ ನಿಗದಿಯಾಗಿ ಭೂಮಿ ಪೂಜೆಯ ವೇಳೆಗೆ ಯೋಜನೆಯ ಮೊತ್ತ ನಾಲ್ಕು ಕೋಟಿ ಮೂವತ್ತು ಲಕ್ಷ ರೂ. ಗೆ ಏರಿತ್ತು.
ಸುಸಜ್ಜಿತ ಸಭಾಂಗಣ, ಗ್ರಂಥಾಲಯ, ವಸ್ತು ಸಂಗ್ರಾಹಲಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಚೇರಿ ಒಳಗೊಂಡಿರುವ ಕರ್ನಾಟಕ ಸುವರ್ಣ ಸಾಂಸ್ಕೃತಿಕ ಭವನಕ್ಕೆ ಆರಂಭದಿAದಲೇ ಒಂದಿಲ್ಲೊAದು ವಿಘ್ನಗಳು ಎದುರಾಗುತ್ತಾ ಬರುತ್ತಿದೆ. ಸರ್ಕಾರಗಳ ವಿಳಂಬ ನೀತಿ, ಅಧಿಕಾರಿಗಳ ನಿರ್ಲಕ್ಷö್ಯ, ಜನಪ್ರತಿನಿಧಿಗಳ ತಾತ್ಸಾರ ಒಂದು ಕಡೆಯಾದರೆ, ಸಕಾಲಕ್ಕೆ ಬಿಲ್ ಪಾವತಿ ಆಗದ ಕಾರಣ ಗುತ್ತಿಗೆದಾರರೂ ಒಂದಿಷ್ಟು ನಿಧಾನಿಸಿದರು. 2018,19 ಹಾಗೂ 2020ರ ಪ್ರಾಕೃತಿಕ ವಿಕೋಪ ನಂತರ ಕೋವಿಡ್-19 ಕೂಡ ಯೋಜನೆ ನೆನೆಗುದಿಗೆ ಬೀಳುವಲ್ಲಿ ಕಾರಣವಾದವು.
ಯೋಜನೆಯ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಆರಂಭದಲ್ಲಿ ಯೋಜನೆ ಪ್ರಕಟವಾಗಿದ್ದಾಗ 2006ರಲ್ಲಿ 1.6 ಕೋಟಿ ರೂ.ಗೆ ನಿಗದಿಯಾಗಿದ್ದ ಭವನದ ಕಾಮಗಾರಿಯ ನಿರ್ಮಾಣ ವೆಚ್ಚ 2013ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಾಗ 4.30 ಕೋಟಿ ರೂ.ಗೆ ಏರಿಕೆ ಆಗಿತ್ತು. ಇದೀಗ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ 5 ಕೋಟಿ ರೂ.ಗೆ ತಲುಪಿದೆ. ಇಲ್ಲಿಯ ತನಕ ಈ ಕಾಮಗಾರಿಗಾಗಿ 3.7 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನೂ ಅಗತ್ಯವಿರುವ 1.5 ಕೋಟಿ ರೂ. ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಬರಬೇಕಿದೆ. ಈ ಮೊತ್ತ ಮೊದಲೇ ಮಡಿಕೇರಿಗೆ ನಿಗದಿಯಾಗಿತ್ತಾದರೂ ಯೋಜನೆ ವಿಳಂಬAದಿAದಾಗಿ ಬೇರೆ ಕಾರ್ಯಕ್ಕೆ ಬಳಕೆ ಆಗಿತ್ತು. ಇದೀಗ ಆ 1.5 ಕೋಟಿ ರೂ. ಪಡೆದುಕೊಳ್ಳಲು ಪತ್ರವ್ಯವಹಾರ ನಡೆದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2 ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಬಹು ನಿರೀಕ್ಷಿತÀ ಕರ್ನಾಟಕ ಸುವರ್ಣ ಸಾಂಸ್ಕೃತಿಕ ಭವನ ಕಾಮಗಾರಿ ಆದಷ್ಟು ಬೇಗ ಮುಗಿದು ಇಲ್ಲಿಯ ಸುಸಜ್ಜಿತ ಸಭಾಂಗಣ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿಗುವಂತಾಗಲಿ ಎನ್ನುವುದು ಸ್ಥಳೀಯ ಕಲಾಭಿಮಾನಿಗಳ ಆಶಯ. ಅತೀ ಹೆಚ್ಚು ಮಳೆ ಮತ್ತು ಚಳಿಯಿಂದ ಕೂಡಿರುವ ಮಡಿಕೇರಿಯಲ್ಲಿ ನಾಟಕ, ಯಕ್ಷಗಾನ, ಸಂಗೀತ ಸೇರಿದಂತೆ ದೊಡ್ಡ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ಕಲಾ ಮಂದಿರ ಮಾದರಿಯ ಸಭಾಂಗಣದ ಕೊರತೆ ಬಹಳ ಹಿಂದಿನಿAದಲೂ ಕಾಡುತ್ತಿದೆ. ಇಂಥ ಚಿಕ್ಕಪುಟ್ಟ ಕಾರ್ಯಕ್ರಮಗಳಿಗೆ ಈ ಮೊದಲು ಪುರಸಭೆ ಆವರಣದ ಕಾವೇರಿ ಕಲಾ ಕ್ಷೇತ್ರ ಬಳಕೆ ಆಗುತ್ತಿದ್ದಾರೂ ಅದೀಗ ಜೀರ್ಣಾವಸ್ಥೆ ತಲುಪಿದೆ. ಕಾವೇರಿ ಕಲಾಕ್ಷೇತ್ರ ಕೆಡವಿ ನೂತನ ಸಭಾಂಗಣ ನಿರ್ಮಾಣದ ಯೋಜನೆ ನೆನೆಗುದಿಗೆ ಬಿದ್ದಿದೆ. ಹಾಗಾಗಿ ಕರ್ನಾಟಕ ಸುವರ್ಣ ಸಾಂಸ್ಕೃತಿಕ ಭವನದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಸುವರ್ಣ ಸಾಂಸ್ಕೃತಿಕ ಭವನ ಕಾಮಗಾರಿ ಭರದಿಂದ ನಡೆಯುತ್ತಿದೆ. ಸಭಾಂಗಣ ಕೆಲಸಗಳು ಪ್ರಗತಿಯಲ್ಲಿವೆ. ಇನ್ನೂ 1.5 ಕೋಟಿ ರೂ. ಅನುದಾನ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಬರಬೇಕಿದೆ. ಒಟ್ಟು 5 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಮಾರ್ಚ್ ಅಂತ್ಯದೊಳಗೆ ಎಲ್ಲಾ ಕೆಲಸಗಳು ಮುಗಿಯುವ ನಿರೀಕ್ಷೆ ಇದೆ.
ಜಿಲ್ಲಾ ಕೇಂದ್ರ ಮಡಿಕೇರಿಯ ಚೈನ್ ಗೇಟ್ ಬಳಿ ನಿರ್ಮಾಣ ಹಂತದಲ್ಲಿ ಇರುವ ಸುವರ್ಣ ಕರ್ನಾಟಕ ಸಾಂಸ್ಕೃತಿಕ ಭವನದ ಕಾಮಗಾರಿ ಮಾರ್ಚ್ ಒಳಗೆ ಪೂರ್ಣಗೊಳಿಸುವುದಾಗಿ ಪಿಡ್ಲೂö್ಯಡಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜನಪ್ರತಿನಿಧಿಗಳೂ ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ಕೊಡುತ್ತಿದ್ದಾರೆ. ಇದರ ಜತೆಗೆ ಜಿಲ್ಲಾಡಳಿತದ ಸಹಕಾರದಿಂದ ಸರ್ಕಾರದ ಆಶಯದಂತೆ ಸಾರ್ವಜನಿಕರ ಬಳಕೆಗೆ ಭವನ ಬೇಗನೇ ಸಿಗುವ ವಿಶ್ವಾಸವಿದೆ.