ಕುಶಾಲನಗರಕ್ಕೆ ಶನಿವಾರ ಆಗಮಿಸಿದ ಸುತ್ತೂರು ಜಾತ್ರಾ ಪ್ರಚಾರ ರಥಕ್ಕೆ ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ಗೌರವ ಸಮರ್ಪಿಸಿದರು. ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ವಿ.ಶಿವಪ್ಪ, ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಅಕ್ಕನ ಬಳಗದ ಮನುದೇವಿ ಇತರರು ಹಾಜರಿದ್ದರು.
ಕುಶಾಲನಗರ : ಸುತ್ತೂರಿನಲ್ಲಿ ಜನವರಿ 15 ರಿಂದ 20 ರವರೆಗೆ ಜರುಗುವ ಜಾತ್ರೆಗೆ ಭಕ್ತರನ್ನು ಆಹ್ವಾನಿಸಲು ಸಂಚಾರ ಮಾಡುತ್ತಿರುವ ರಥ ಶನಿವಾರ ಕುಶಾಲನಗರಕ್ಕೆ ಆಗಮಿಸಿತು. ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ಅವರು ಪ್ರಚಾರ ರಥದ ಸುತ್ತೂರು ಶ್ರೀ ಶಿವರಾತ್ರೀಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಈ ಸಂದರ್ಭ ಮಾತನಾಡಿ, ಸುತ್ತೂರು ಜಾತ್ರೆಯಲ್ಲಿ ನಾಡಿನ ಪರಂಪರೆಗಳನ್ನು ಬಿಂಬಿಸುವ ದೇಸೀ ಕ್ರೀಡೆಗಳ ಪ್ರದರ್ಶನಗಳೊಂದಿಗೆ ಸಾಮೂಹಿಕ ವಿವಾಹ, ಕೃಷಿ ಮೇಳ, ವಸ್ತು ಪ್ರದರ್ಶನ, ರೈತರಿಗೆ ಕೃಷಿ ಮಾಹಿತಿ ಲಭ್ಯವಾಗಲಿದೆ ಎಂದರು. ಆಗಮಿಸುವ ಸಹಸ್ರ ಭಕ್ತ ಜನರಿಗೆ ಮೂರು ಹೊತ್ತೂ ಪ್ರಸಾದದ ವ್ಯವಸ್ಥೆಯೂ ಇರುತ್ತದೆ ಎಂದರು.
ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿ, ಪ್ರತೀ ವರ್ಷದಂತೆ ಈ ಬಾರಿಯೂ ಸುತ್ತೂರು ಜಾತ್ರೆಗೆ ಕೊಡಗಿನ ಭಕ್ತರು ಆಗಮಿಸಬೇಕೆಂದು ಕೋರಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾರ್ಯದರ್ಶಿ ನಟರಾಜು, ಕೋಶಾಧಿಕಾರಿ ಕೆ.ಪಿ ಪರಮೇಶ್, ಹಿರಿಯ ನಾಗರಿಕರಾದ ನಜೀರ್ ಆಹಮದ್, ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎನ್.ಕುಮಾರಸ್ವಾಮಿ, ಪ್ರಮುಖರಾದ ಪಿ. ಮಹದೇವಪ್ಪ, ಎಂ.ಎಸ್. ಶಿವಾನಂದ, ಎಂ.ಎಸ್.ಲೋಕೇಶ್, ಕೋಳೂರು ಚಂದ್ರಪ್ಪ, ಬಸವರಾಜು, ಅಕ್ಕನ ಬಳಗದ ಮನುದೇವಿ ಇದ್ದರು.