ದುಬಾರೆಯಲ್ಲಿ ಕಾಲ್ನಡಿಗೆ ಮೂಲಕ ನದಿ ದಾಟುತ್ತಿರುವ ಪ್ರವಾಸಿಗರು 
ಕೊಡಗು

ದುಬಾರೆ ದ್ವೀಪಕ್ಕೆ ತೂಗು ಸೇತುವೆ ಕೊಡುಗೆ

ಮಡಿಕೇರಿ:
ದುಬಾರೆ ದ್ವೀಪಕ್ಕೆ ಸಂಪರ್ಕ ಕಲ್ಪಿಸಲು ತೂಗು ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವುದರೊಂದಿಗೆ ಬಹುಕಾಲದ ಬೇಡಿಕೆಯೊಂದು ಈಡೇರುವ ಹಂತಕ್ಕೆ ಬಂದಿದೆ. ಲೋಕೋಪಯೋಗಿ ಇಲಾಖೆಗೆ ಕಾಮಗಾರಿಯ ನಿರ್ವಹಣೆ ಹೊಣೆ ವಹಿಸಲಾಗಿದ್ದು ಆದಷ್ಟು ಶೀಘ್ರ ಕೆಲಸ ಶುರುವಾಗುವ ನಿರೀಕ್ಷೆಯಲ್ಲಿ ಸ್ಥಳೀಯರು ಇದ್ದಾರೆ. ಮಳೆ ಶುರುವಾಗುವುದರೊಳಗೆ ಪೂರ್ವಭಾವಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಶಾಸಕ ಡಾ. ಮಂತರ್ ಗೌಡ ಕೂಡ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.
ಕುಶಾಲನಗರ ತಾಲೂಕು, ಕುಶಾಲನಗರ ಅರಣ್ಯ ವಲಯದ ವಲಯದ ನಂಜರಾಯಪಟ್ಟಣ ಗ್ರಾಮದಲ್ಲಿ ಇರುವ ದುಬಾರೆ ಸಾಕಾನೆ ಶಿಬಿರ ಅತ್ಯಂತ ಹಳೆಯ ಆನೆ ಶಿಬಿರ ಎನ್ನುವ ಹೆಗ್ಗಳಿಕೆ ಹೊಂದಿದೆ. ಈ ಶಿಬಿರಕ್ಕೆ ಶತಮಾನದ ಇತಿಹಾಸವಿದೆ. ಬ್ರಿಟಿಷರ ಆಳ್ವಿಕೆ ಸಂದರ್ಭ ಸೆರೆ ಹಿಡಿಯಲಾಗುತ್ತಿದ್ದ ಕಾಡಾನೆಗಳನ್ನು ಇಲ್ಲಿ ಪಳಗಿಸಿದ ನಂತರ ಬೇರೆ ಕಡೆಗೆ ವಿವಿಧ ಕೆಲಸಗಳಿಗಾಗಿ ಆನೆಗಳನ್ನು ರವಾನೆ ಮಾಡಲಾಗುತ್ತಿತ್ತು. ಕಾವೇರಿ ನದಿ ದಂಡೆಯಲ್ಲಿ ಈ ಸ್ಥಳ ಇರುವುದರಿಂದ ಪ್ರಾಕೃತಿಕವಾಗಿಯೂ ಆಕರ್ಷಣೀಯ ತಾಣವಾಗಿದೆ.
ದುಬಾರೆ ಸಾಕಾನೆ ಶಿಬಿರಕ್ಕೆ ಹೋಗಬೇಕಾದರೆ ಕಾವೇರಿ ನದಿಯನ್ನು ದಾಟುವುದು ಅನಿವಾರ್ಯ. ಜೂನ್ ನಂತರ ಮಳೆಗಾಲದಲ್ಲಿ ಕಾವೇರಿ ತುಂಬಿ ಹರಿಯುವುದರಿಂದ ನದಿ ದಾಟಲು ಕಷ್ಟಪಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಯಾಂತ್ರಿಕೃತ ದೋಣಿಗಳನ್ನು ಉಪಯೋಗಿಸಲಾಗುತ್ತದೆ. ದುಬಾರೆ ದ್ವೀಪದಲ್ಲಿರುವ ಗಿರಿಜನರ ಓಡಾಟಕ್ಕೆ, ಪ್ರವಾಸಿಗರನ್ನು ಕರೆದೊಯ್ಯಲು ಈ ದೋಣಿಗಳನ್ನು ಬಳಸಲಾಗುತ್ತದೆ. ಒಂದು ದೋಣಿ ದಿನಕ್ಕೆ ಕನಿಷ್ಠ 10 ಬಾರಿಯಾದರೂ ನದಿಯ ಎರಡೂ ದಂಡೆಗಳÀ ಮಧ್ಯೆ ಓಡಾಡುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ರಜಾ ದಿನಗಳಲ್ಲಂತೂ ದೋಣಿಗಳ ಟ್ರಿಪ್ ಸಂಖ್ಯೆ ಇನ್ನೂ ಹೆಚ್ಚಿರುತ್ತದೆ. ಇದರಿಂದಾಗಿ ಇಲ್ಲಿಯ ಸೂಕ್ಷö್ಮ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಆಗುತ್ತಿದೆ.
ಮಾರ್ಚ್, ಏಪ್ರಿಲ್, ಮೇ ತಿಂಗಳುಗಳ ಬೇಸಿಗೆ ಅವಧಿಯಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ ಅಲ್ಲಿರುವ ಒಂದರಿAದ ಒಂದು ಕಲ್ಲುಗಳ ಮೇಲೆ ಕಾಲಿಡುತ್ತಾ ನದಿಯ ಮೂಲಕ ಆನೆ ಕ್ಯಾಂಪ್ ತಲುಪಬಹುದು. ಈ ಸಂದರ್ಭ ಎಚ್ಚರ ತಪ್ಪಿದರೆ ನೀರಿಗೆ ಬೀಳುವ ಅಪಾಯವು ಇದೆ. ಈ ಹಿಂದಿನ ವರ್ಷಗಳಲ್ಲಿ ಈ ರೀತಿ ನದಿ ದಾಟಲು ಹೋಗಿ 12ಕ್ಕೂ ಅಧಿಕ ಪ್ರವಾಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸಾಕಾನೆ ಶಿಬಿರವಾಗಿ ದುಬಾರೆ ಗುರುತಿಸಿಕೊಂಡಿದ್ದರೂ ಈ ಪ್ರದೇಶದಲ್ಲಿ ತಲೆತಲಾಂತರದಿAದ ವಾಸ ಮಾಡುತ್ತಿರುವ ಜೇನು ಕುರುಬ ಸಮುದಾಯದ ಕುಟುಂಬಗಳು ಸಾಕಷ್ಟಿವೆ. ಬಹುತೇಕರು ಆನೆಗಳ ಮಾವುತ, ಕಾವಾಡಿ, ಸಹಾಯಕ ಹೀಗೆ ಆನೆಗಳ ಚಾಕರಿಯಲ್ಲೇ ಗುರುತಿಸಿಕೊಂಡಿದ್ದಾರೆ. ಕೆಲವರಷ್ಟೇ ಸರ್ಕಾರದ ಕಾಯಂ ನೌಕರರಾಗಿದ್ದು, ಹೆಚ್ಚಿನವರು ಇನ್ನೂ ಬಡತನದ ರೇಖೆಗಿಂತ ಕೆಳಗೆ ವಾಸ ಮಾಡುತ್ತಿದ್ದಾರೆ. ಅಕ್ಕಪಕ್ಕದ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿಯೂ ಕೆಲಸ ಮಾಡುವವರು ಇದ್ದಾರೆ. ಇವರು ಕೂಡ ಮಳೆಗಾಲದ ಸುಮಾರು 6 ತಿಂಗಳು ದ್ವೀಪದಂಥ ವಾತಾವರಣದಲ್ಲಿ ಸಂಕಷ್ಟದ ಬದುಕು ಸಾಗಿಸಬೇಕಾಗುತ್ತದೆ.
ಈ ಎಲ್ಲಾ ಕಾರಣಗಳಿಂದ ದುಬಾರೆಗೆ ತೂಗು ಸೇತುವೆ ಬೇಕು ಎನ್ನುವುದು ಬಹಳ ಹಳೆಯ ಬೇಡಿಕೆ. ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣ ಆದರೆ ನದಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ಸಂಪರ್ಕ ಸುಲಭ ಆಗಲಿದೆ. ನದಿಯಲ್ಲಿರುವ ದ್ವೀಪಗಳ ರಕ್ಷಣೆ, ದುಬಾರೆ ಹಾಡಿಯಲ್ಲಿರುವ ಗಿರಿಜನರಿಗೆ ಹೊರ ಜಗತ್ತಿನ ಸಂಪರ್ಕಕ್ಕೆ, ದೋಣಿಗಳ ಇಂಧನ ಸೋರಿಕೆಯಿಂದ ಆಗುತ್ತಿರುವ ಕಾವೇರಿ ನದಿ ಮಾಲಿನ್ಯಕ್ಕೆ ಕಡಿವಾಣ ಹಾಕಲು, ದುಬಾರೆ ಸಾಕಾನೆ ಶಿಬಿರವನ್ನು ಪ್ರವಾಸಿಗರ ಪಾಲಿಗೆ ಮತ್ತಷ್ಟು ಆಕರ್ಷಣೀಯಗೊಳಿಸಲು ಕೂಡ ತೂಗು ಸೇತುವೆಯಿಂದ ಸಾಧ್ಯವಾಗುತ್ತದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಆರಂಭದಿAದಲೇ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ದುಬಾರೆಯಲ್ಲಿ ಕಾವೇರಿ ನದಿಗೆ ಸೇತುವೆ ನಿರ್ಮಾಣಕ್ಕೆ ಅರಣ್ಯ ಸಚಿವರಲ್ಲಿ ಮೊದಲು ಬೇಡಿಕೆ ಇಡಲಾಗಿತ್ತು. ಆದರೆ ಈ ಸ್ಥಳ ಪರಿಸರದ ಸೂಕ್ಷö್ಮ ವಲಯದಲ್ಲಿ ಬರುವುದರಿಂದ ಇಲ್ಲಿ ದೊಡ್ಡ ಮಟ್ಟದ ಕಾಂಕ್ರಿಟ್ ಸೇತುವೆ ನಿರ್ಮಾಣ ಸರಿಯಲ್ಲ ಎನ್ನುವ ಅಭಿಪ್ರಾಯಗಳು ತಜ್ಞರಿಂದ ವ್ಯಕ್ತವಾಗಿದ್ದವು. ಹಾಗಾಗಿ ಸತತ ಪ್ರಯತ್ನಗಳ ನಂತರ ಕೊನೆಗೂ ತೂಗು ಸೇತುವೆ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ತೂಗು ಸೇತುವೆ ನಿರ್ಮಾಣ ಯೋಜನೆಗೆ ಒಟ್ಟು 7.30 ಕೋಟಿ ರೂ. ವೆಚ್ಚ ತಗುಲಲಿದ್ದು, ಕೊಡಗು ಫೌಂಡೇಶನ್ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಅನುದಾನ ಒದಗಿಸಲಾಗಿದೆ.
"

ದುಬಾರೆ ಗಿರಿಜನ ಹಾಡಿಗೆ ತೂಗು ಸೇತುವೆ ಬೇಕು ಎನ್ನುವುದು ಬಹಳ ಹಳೆಯ ಬೇಡಿಕೆ. ಕೊನೆಗೂ ಸರ್ಕಾರ ಈ ಯೋಜನೆಗೆ ಭೂಮಿ ಪೂಜೆ ನೆರವೇರಿಸಿದೆ. ಆದಷ್ಟು ಶೀಘ್ರ ಇಲ್ಲಿ ತೂಗುಸೇತುವೆ ಕಾಮಗಾರಿ ಪೂರ್ಣಗೊಂಡು ಬಳಕೆಗೆ ಸಿಗುವಂತಾಗಲಿ. ಇದರಿಂದ ಸ್ಥಳೀಯ ಪ್ರವಾಸಿ ಆಕರ್ಷಣೆ ಜಾಸ್ತಿ ಆಗುವುದಕ್ಕಿಂತ ಹೆಚ್ಚಾಗಿ ಇಲ್ಲಿನ ಹಾಡಿಗಳಲ್ಲಿ ವಾಸವಿರುವ ಗಿರಿಜನರಿಗೆ ಪ್ರಯೋಜನ ಆಗಲಿದೆ. ಅಪಾಯಕಾರಿ ಪರಿಸ್ಥಿತಿಯಲ್ಲಿ ನದಿ ದಾಟುವುದು ತಪ್ಪಲಿದೆ.

— ಆರ್.ಕೆ. ಚಂದ್ರ, ಅಧ್ಯಕ್ಷ, ಬುಡಕಟ್ಟು ಕೃಷಿಕರ ಸಂಘ, ಕೊಡಗು

"

ದುಬಾರೆಯಲ್ಲಿ ತೂಗುಸೇತುವೆ ಬರುವುದರಿಂದ ಇಲ್ಲಿನ ಪರಿಸರಕ್ಕೆ ಹೆಚ್ಚು ಪೂರಕ ಆಗಲಿದೆ. ನದಿಯಲ್ಲಿ ಯಾಂತ್ರಿಕೃತ ಬೋಟ್‌ಗಳ ಓಡಾಟ ಹೆಚ್ಚಾದಂತೆ ನದಿ ಮಾಲಿನ್ಯಕ್ಕೆ ಕಾರಣವಾಗುತ್ತಿತ್ತು. ನದಿ ದಂಡೆಯ ಸವಕಳಿ ಮತ್ತು ಮರಗಳ ನಾಶಕ್ಕೂ ಕಾರಣವಾಗುತ್ತಿತ್ತು. ತೂಗು ಸೇತುವೆ ನಿರ್ಮಾಣ ಆದ ನಂತರÀ ಅಪಾಯಕಾರಿ ಹಾದಿಯಲ್ಲಿ ನದಿ ದಾಟುವುದಕ್ಕೆ ಕಡಿವಾಣ ಬೀಳಲಿದೆ. ದುಬಾರೆ ಹಾಡಿಯ ಗಿರಿಜನರು ಆಸ್ಪತ್ರೆ, ಶಾಲೆಗಳಿಗೆ ಯಾವಗ ಬೇಕಾದರೂ ಸುಲಭವಾಗಿ ತೆರಳಲು ಸಾಧ್ಯವಾಗಲಿದೆ.

— ರತೀಶ್, ಪ್ರವಾಸೋದ್ಯಮಿ, ದುಬಾರೆ

"

ನಾನು ಚಿಕ್ಕವನಿದ್ದಾಗ ತಾಯಿ ಜತೆ ದುಬಾರೆ ಸಾಕಾನೆ ಶಿಬಿರಕ್ಕೆ ಬಂದಿದ್ದೆ. ಆ ಸಂದರ್ಭದಲ್ಲಿ ನಾವು ದೋಣಿ ಮೂಲಕ ನದಿ ದಾಟಿ ನದಿಯ ಅತ್ತ ಕಡೆಗೆ ಹೋಗಿದ್ದೆವು. ಮಳೆಗಾಲದಲ್ಲಿ ನದಿಯ ನೀರು ಇಲ್ಲಿ ತುಂಬಾ ರಭಸವಾಗಿ ಹರಿಯುತ್ತದೆ. ಇಂಥ ಸ್ಥಿತಿಯಲ್ಲಿ ಇಲ್ಲಿ ದೋಣಿ ಮೂಲಕ ಸಾಗುವುದು ಅಪಾಯಕಾರಿ ಆಗಿದೆ. ಹಾಗಾಗಿ ಸಚಿವರ ಮೇಲೆ ಒತ್ತಡ ತಂದು ಇಲ್ಲಿಗೆ ತೂಗು ಸೇತುವೆ ಮಂಜೂರು ಮಾಡಿಸಿಕೊಳ್ಳಲಾಗಿದೆ. ನನ್ನ ಅವಧಿಯಲ್ಲೇ ದುಬಾರೆಯಲ್ಲಿ ನೂತನ ತೂಗು ಸೇತುವೆ ಆಗುತ್ತಿರುವುದು ಖುಷಿ ಕೊಟ್ಟಿದೆ.

— ಡಾ. ಮಂತರ್ ಗೌಡ, ಮಡಿಕೇರಿ ಶಾಸಕ


"

ನಾವು ಆಸ್ಪತ್ರೆ, ಶಾಲೆ, ಅಂಗಡಿಗಳಿಗೆ ಹೋಗಬೇಕಾದರೆ ಕಾವೇರಿ ನದಿ ದಾಟಬೇಕು ಅಥವಾ ದಟ್ಟ ಕಾಡಿನೊಳಗೆ 15 ಕಿಮೀ ನಡೆಯಬೇಕು. ಎರಡು ಕೂಡ ಅಪಾಯಕಾರಿ ದಾರಿಯಾಗಿದೆ. ಮಳೆಗಾಲದಲ್ಲಿ ನಮಗೆ ಎಲ್ಲಿಗೂ ಹೋಗಲು ಆಗುವುದಿಲ್ಲ. ಈಗ ಸರ್ಕಾರ ಇಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಮುಂದಾಗಿರುವುದು ಖುಷಿ ಕೊಟ್ಟಿದೆ. ನಮಗಂತೂ ಈ ಸೇತುವೆಯಿಂದ ತುಂಬಾ ಅನುಕೂಲ ಆಗಲಿದೆ.

— ಡೋಬಿ, ಹಿರಿಯ ಆನೆ ಮಾವುತ, ದುಬಾರೆ