ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಂಪ್ರದಾಯಕ ಉಡುಗೆಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮಹಿಳೆಯರು ಪೂರ್ಣ ಕುಂಭ ಕಳಶದೊಂದಿಗೆ ಭಗಧ್ವಜ ಹಿಡಿದು ಶೋಭಾಯಾತ್ರೆಯಲ್ಲಿ ಸಾಗುತ್ತಿರುವುದು.
ಸುಂಟಿಕೊಪ್ಪ: ಸಮಾಜ, ಕುಟುಂಬ ಸಾಮರಸ್ಯ, ಸ್ವದೇಶಿ ಬಳಕೆ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಸಾಮರಸ್ಯದೊಂದಿಗೆ ಭಾರತವನ್ನು ವಿಶ್ವಗುರುವಾಗಿಸುವ ಉದ್ದೇಶ, ಗುರಿಯನ್ನು ಹಿಂದೂ ಸಂಗಮ ಕಾರ್ಯಕ್ರಮ ಹೊಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಹಾಗೂ ಬೆಂಗಳೂರಿನ ಪ್ರಾಂತ ಸೇವಾ ಪ್ರಮುಖ್ ಗುರುರಾಜ್ ಕುಲಕರ್ಣಿ ತಿಳಿಸಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ಕುಶಾಲನಗರ ತಾಲೂಕು ಮತ್ತು ಸುಂಟಿಕೊಪ್ಪ ಮಂಡಲದ ಹಿಂದೂ ಸಂಗಮ ಸಮಿತಿ ವತಿಯಿಂದ ಭಾನುವಾರ ಸುಂಟಿಕೊಪ್ಪದಲ್ಲಿ ಹಿಂದೂ ಸಂಗಮ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಪ್ರತಿಯೊಬ್ಬ ಮನುಷ್ಯನಲ್ಲಿರುವ ದೋಷಗಳನ್ನು ಅಳಿಸಿ ಗುಣಸಂಪನ್ನಾಗಿಸಿ ಕುಟುಂಬ, ಸಮಾಜ ಮತ್ತು ದೇಶದ ಅತ್ಯುತ್ತಮ ಪ್ರಜೆಗಳನ್ನಾಗಿಸುವ ಧರ್ಮ ಮತ್ತು ಸಂಸ್ಕೃತಿ ನಮ್ಮ ದೇಶದ್ದು ಎಂದು ಬಣ್ಣಿಸಿದರು.
ಸಾವಿರ ವರ್ಷಗಳ ಗುಲಾಮಗಿರಿಯಿಂದ ನಾವು ಇತ್ತೀಚೆಗೆ ಹೊರಬಂದಿದ್ದು, ನಮ್ಮ ಧರ್ಮ, ಸಂಸ್ಕೃತಿ ಆಚರಣೆ ಮತ್ತು ಪದ್ಧತಿ ಪರಂಪರೆಗಳನ್ನು ಹಿಮಾಲಯದಿಂದ ಕನ್ಯಾಕುಮಾರಿವರೆಗಿನ ಭಾರತದಲ್ಲಿ ಮತ್ತೆ ಜಾಗೃತಿಯನ್ನು ಉಂಟುಮಾಡುವ ಕೆಲಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಶತಮಾನೋತ್ಸವ ವರ್ಷದಲ್ಲಿ ಹಮ್ಮಿಕೊಂಡಿದ್ದು ಇದನ್ನು ಹಿಂದೂ ಸಂಗಮ ಕಾರ್ಯಕ್ರಮಗಳ ಮೂಲಕ ಮಾಡುತ್ತಿದೆ ಎಂದರು.
ಇಂದು ವಿಶ್ವದ 190 ದೇಶಗಳಲ್ಲಿ ಯೋಗ ಜನಪ್ರಿಯವಾಗಿದೆ. ಗಣಿತದ ಮೂಲ ಶೂನ್ಯವನ್ನು ಜಗತ್ತಿಗೆ ಕೊಟ್ಟವರು ನಾವು, ಆಯುರ್ವೇದ ಜಗತ್ತಿಗೆ ನಮ್ಮ ಕೊಡುಗೆ, ಪರೋಪಕಾರ, ಸೇವೆ, ತ್ಯಾಗಗಳಿಗೆ ಹೆಸರಾದ ಧರ್ಮ ನಮ್ಮದ್ದು ಎಂದು ಭಾರತ ದೇಶದ ಹಿರಿಮೆ ಗರಿಮೆಗಳನ್ನು ಗುರುರಾಜ್ ಕುಲಕರ್ಣಿ ವಿಶ್ಲೇಷಿದರು.
ಅಜಿತ್ ಅಪ್ಪಚ್ಚು ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಧರ್ಮ ಜಾಗೃತಿ ನಮ್ಮ ಪದ್ಧತಿ ಪರಂಪರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯವಶ್ಯ. ಮಕ್ಕಳಲ್ಲಿ ಧರ್ಮ ಮತ್ತು ಸಂಸ್ಕೃತಿ ಬಗ್ಗೆ ಧರ್ಮ ಸಂಸ್ಕಾರ ನೀಡಬೇಕೆಂದು ಸಲಹೆ ನೀಡಿದ ಅವರು, ಹೊರಗಿನ ಬೆದರಿಕೆಗಳಿಗಾಗಿ ನಾವು ಒಗ್ಗಟಾಗದೆ, ನಮ್ಮ ಧರ್ಮ, ನಮ್ಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ನಾವು ಒಂದಾಗಿ ಕೆಲಸ ಮಾಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಸುಂಟಿಕೊಪ್ಪ ಮಂಡಲ ಹಿಂದೂ ಸಂಗಮ ಅಧ್ಯಕ್ಷ ಎಚ್.ಟಿ.ಬಸವರಾಜ್ ಮಾತನಾಡಿ, ಮಕ್ಕಳಿಗೆ ಮೊಬೈಲ್ ಬಳಕೆ ಕಡಿಮೆ ಮಾಡಿ ನಮ್ಮ ಸಂಸ್ಕಾರ ಕಲಿಯಲು ಕಿವಿಮಾತು ಹೇಳಿದರು. ಮಾತೆಯರು ಮತ್ತು ಮಹಿಳೆಯರು ಭಜನೆ ಮತ್ತು ಧರ್ಮ ಸಂಬಂಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಸುಂಟಿಕೊಪ್ಪ ವಿವಿಧ ದೇವಾಲಯಗಳಲ್ಲಿ ದಶಕಗಳ ಕಾಲ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಿದ ಹಿರಿಯರಾದ ಮಂಡುವಂಡ ಭೋಜಮ್ಮ, ಜವರಮ್ಮ ಮತ್ತು ಲಕ್ಷ್ಮೀಯಮ್ಮ ಅವರನ್ನು ಅತಿಥಿಗಳು ಸನ್ಮಾನಿಸಿದರು.
ಮೊದಲಿಗೆ ಸ್ಟೆಪ್‌ಡಾಟ್ ಕಾಂ ತಂಡದಿಂದ ಸ್ವಾಗತ ನೃತ್ಯ ನಡೆಯಿತು. ಸುಂಟಿಕೊಪ್ಪ ಮಹಿಳೆಯರು ಮತ್ತು ಮಕ್ಕಳಿಂದ ವಂದೇ ಮಾತರಂ ಗೀತೆಯನ್ನು ಹಾಡಿದರು. ಸುಂಟಿಕೊಪ್ಪ ಹಿಂದೂ ಸಂಗಮ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮ್‌ಗೌತಮ್ ಸ್ವಾಗತಿಸಿದರು, ಉಮೇಶ್ ಅವರು ದೇಶಭಕ್ತಿ ಗೀತೆ ಹಾಡಿದರು.
ಯಂಕನ ತ್ರಿಶೂಲ ಮತ್ತು ಎಂ.ಎಸ್.ಸುನಿಲ್ ಕಾರ್ಯಕ್ರಮ ನಿರೂಪಿಸಿ ಹಿಂದೂ ಸಂಗಮ ಸಮಿತಿಯ ಉಪಾಧ್ಯಕ್ಷ ಮನು ಅಚ್ಚಮಯ್ಯ ವಂದಿಸಿದರು.
ಇಲ್ಲಿನ ಶ್ರೀಕೋದಂಡ ರಾಮಚಂದ್ರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಂಪ್ರದಾಯಿಕ ಉಡುಗೆಯೊಂದಿಗೆ ಭವ್ಯವಾದ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಮಹಿಳೆಯರು ಪೂರ್ಣ ಕುಂಭ ಕಳಶದೊಂದಿಗೆ ಭಗಧ್ವಜ ಸಹಿತ ಭಜನಾ ತಂಡದ ನೃತ್ಯ ಕೇರಳದ ಚಂಡೆ ಭಾರತಾಂಬೆಯ ಭಾವಚಿತ್ರ ಅಲಂಕೃತ ತೆರೆದ ಜೀಪಿನಲ್ಲಿ ಇರಿಸಿ ಮೆರವಣಿಗೆಯು ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀಮುತ್ತಪ್ಪ ದೇವಸ್ಥಾನದ ಆವರಣದಲ್ಲಿ ಸಂಪನ್ನಗೊಂಡಿತು.
ಮೆರವಣಿಗೆಯಲ್ಲಿ ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್, ಕಾಫಿ ಬೆಳೆಗಾರರಾದ ಬೋಸ್‌ಮಂದಣ್ಣ, ಅಜಿತ್ ಅಪ್ಪಚ್ಚು, ಜಿಪಂ ಮಾಜಿ ಸದಸ್ಯ ಬಿ.ಬಿ.ಭಾರತೀಶ್, ರಾಮಸೇವಾ ಸಮಿತಿ ಕಾರ್ಯದರ್ಶಿ ಆಶೋಕ್‌ಶೇಟ್, ಪಿ.ಕೆ.ಮುತ್ತಣ್ಣ, ಎಂ.ಎ.ವಸಂತ, ವೈ.ಎಂ.ಕರುಂಬಯ್ಯ, ಡಿ.ನರಸಿಂಹ, ಶಾಂತರಾಂ ಕಾಮತ್, ಎಸ್.ಜಿ.ಶ್ರೀನಿವಾಸ್, ಶ್ರೀಚಾಮುಂಡೇಶ್ವರಿ ಮತ್ತು ಶ್ರೀಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಆರ್.ರಮೇಶ್‌ಪಿಳ್ಳೆ, ಗ್ರಾಮದೇವತೆ ಸಮಿತಿ ಅಧ್ಯಕ್ಷ ಎ.ಶ್ರೀಧರ, ಶ್ರೀಪುರಂ ಅಯ್ಯಪ್ಪಸ್ವಾಮಿ, ಕ್ಷೇತ್ರದ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್, ಶ್ರೀಗೌರಿ ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷ ವಿಘ್ನೇಶ್, ರಾಮ್‌ಗೌತಮ್, ಪಿ.ಆರ್.ಸುನಿಲ್‌ಕುಮಾರ್, ದೀನು ದೇವಯ್ಯ, ಧನುಕಾವೇರಪ್ಪ, ರಂಜಿತ್ ಕಾರ್ಯಪ್ಪ, ಬಿ.ಕೆ.ಮೋಹನ್, ರಾಕೇಶ್, ಎಂ.ಎಸ್.ಸುನಿಲ್, ವಿ.ಎ.ಸಂತೋಷ್, ಮಹಿಳಾ ಸಮಾಜದ ಅಧ್ಯಕ್ಷೆ ಲೀಲಾವತಿ ಮೇದಪ್ಪ, ಪ್ರಮುಖರಾದ ಶಿವಮ್ಮ ಮಹೇಶ್, ಶಾಂತಿ, ಗೀತಾ, ಮಂಜುಳಾ, ವಸಂತಿ ಸೇರಿದಂತೆ ಇದ್ದರು.
ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಸಾಮಾಜಿಕ ಕಾರ್ಯಕರ್ತ ಎಚ್.ಟಿ.ಬಸವರಾಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಫಿ ಬೆಳೆಗಾರರಾದ ಅಜಿತ್ ಅಪ್ಪಚ್ಚು ಪಾಲ್ಗೊಂಡಿದ್ದರು.