ಶಿವರಾತ್ರಿ ಪ್ರಯುಕ್ತ ಕಂಬಿಬಾಣೆ ಶ್ರೀರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಭಕ್ತರು. 
ಕೊಡಗು

ಸಾಮೂಹಿಕ ಸತ್ಯನಾರಾಯಣ ಪೂಜೆ

ಲಲಾಟಾಕ್ಷ ಎಸ್
ಸುಂಟಿಕೊಪ್ಪ: ಕಂಬಿಬಾಣೆ ಶ್ರೀರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆ ಏರ್ಪಡಿಸಲಾಗಿತ್ತು.
ದೇವಾಲಯದ ಪ್ರಧಾನ ಅರ್ಚಕ ಪ್ರಭಾಕರ್ ಕುದ್ದಣ್ಣಯ್ಯ, ಪ್ರಕಾಶ್ ಕುದ್ದಣ್ಣಯ್ಯ, ಪ್ರಜ್ವಲ್ ಕುದ್ದಣ್ಣಯ್ಯ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ, ಅಲಂಕಾರ, ನೈವೇದ್ಯ ಪೂಜೆ ಬಳಿಕ ಸತ್ಯನಾರಾಯಣ ಪೂಜೆ ನಡೆದವು. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು.
ದೇವಾಲಯ ಸಮಿತಿ ಅಧ್ಯಕ್ಷ ಡಾ.ಶಶಿಕಾಂತ್ ರೈ, ಕಾರ್ಯದರ್ಶಿ ಗಣೇಶ್, ಖಜಾಂಚಿ ಅಜಿತ್, ಪದಾಧಿಕಾರಿಗಳಾದ ಜಯಂತ್, ರವಿ, ಸುಬ್ರಯ, ಚಿದಾನಂದ, ಗಂಗಾಧರ, ಮಂಜುನಾಥ್ ರೈ ಹಾಜರಿದ್ದರು. ಸುಂಟಿಕೊಪ್ಪ, ಕೊಡಗರಹಳ್ಳಿ, ಪನ್ಯ, ಉಪ್ಪುತೋಡು, ಕಂಬಿಬಾಣೆ, ಕುಶಾಲನಗರ ಭಾಗದಿಂದ ಭಕ್ತರು ಆಗಮಿಸಿ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಭಾಗಿಯಾಗಿದ್ದರು.
ಕೊಡಗರಹಳ್ಳಿ, ಶ್ರೀ ಬೈತೂರಪ್ಪ ಪೊವ್ಚದಿ, ಬಸವೇಶ್ವರ ದೇವಾಲಯದಲ್ಲಿ ಭಾನುವಾರ ಮಧ್ಯಾಹ್ನ ವಿಶೇಷ ಪೂಜೆ, ಆರಾಧನೆ ನಡೆಯಿತು. ಸಂಜೆ ಬೈತೂರಪ್ಪ ಭಜನಾ ಮಂಡಳಿಯಿಂದ ಭಕ್ತಿಗೀತೆ ಮತ್ತು ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಪ್ರಧಾನ ಆರ್ಚಕ ರಾಘವೇಂದ್ರ ಭಟ್, ನರಸಿಂಹ ಭಟ್ ಪೂಜಾ ಕಾರ್ಯಗಳನ್ನು ನೆರವೇರಿಸಿದರು.
ಸಂಜೆ ಶ್ರೀ ಬೈತೂರಪ್ಪ ಭಜನಾ ಮಂಡಳಿ, ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಕಾಳರಾತ್ರಿ ನಾಟಕ ನಡೆಯಿತು.
ಕಂಬಿಬಾಣೆ ಮ್ಯಾಗಡೂರ್ ವಿಶ್ವನಾಥ ದೇವಾಲಯ, ನಾಕೂರು ಶಿವ ದೇವಾಲಯ, ಕೆದಕಲ್ ಭದ್ರಕಾಳಿ ದೇವಾಲಯಗಳಲ್ಲಿ ಪೂಜಾ ಕಾರ್ಯಗಳು ನಡೆದವು.