ಸಲಾಫಿ ಮಸೀದಿಯಲ್ಲಿ ರಂಜಾನ್ ಈದ್‌ಉಲ್ ಪಿತ್ತರ್ ಅಂಗವಾಗಿ ಅವರು ಧಾರ್ಮಿಕ ಪ್ರವಚನ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ಮುಸ್ಲಿಮರ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ವಿವಿಧ ಮಸೀದಿಗಳಲ್ಲಿ ಮುಸ್ಲಿಮರು ಶ್ರದ್ಧಾಭಕ್ತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿ, ಕ ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡು ಸಡಗರ, ಸಂಭ್ರಮದಿಂದ ರಂಜಾನ್ ಆಚರಿಸಿದರು.
ಶುಕ್ರವಾರ ರಂಜಾನ್ ಈದ್‌ಉಲ್ ಪಿತರ್ ಅಂಗವಾಗಿ ಪಟ್ಟಣದಲ್ಲಿ ಹೊಸ ಉಡುಪುಗಳನ್ನು ತೊಟ್ಟು ಒಬ್ಬರಿಗೊಬ್ಬರು ಈದ್‌ಉಲ್ ಪಿತರ್ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಮುಂಜಾನೆ ಕಂಡುಬಂದವು.
ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮಾ ಮಸ್ಜಿದ್‌ನಲ್ಲಿ ಇಬ್ರಾಹಿಂ ಅತನಿ, ಸುನ್ನಿ ಹನಫಿ ಮುಸ್ಲಿಂ ಜಮಾಅತ್ ಹಫೀಜ್ ಜುಬೇರ್, ಸುನ್ನಿ ಶಾಫಿ ಜುಮಾ ಮಸ್ಜಿದ್ ಧಾರ್ಮಿಕ ಮೌಲವಿ ಸಾಲಿಮ್, ಕೂಬ ಮಸ್ಜಿದ್ ಮೌಲನಾ ಇನಾಂ, ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್‌ನಲ್ಲಿ ಅಬ್ದುಲ್ ಅಜೀಜ್ ಸಖಾಫಿ ಅವರು ಹಬ್ಬದ ವಿಶೇಷ ಕುರ್‌ಆನ್ ಪಠಣ ಸೇರಿದಂತೆ ಪ್ರಾರ್ಥನೆ ಸಲ್ಲಿಸಿದರು.
ಕಳೆದ 30 ದಿನಗಳ ಉಪವಾಸದ ಅಂಗವಾಗಿ ಪ್ರತಿದಿನ ರಾತ್ರಿ ಮಸೀದಿಗಳಲ್ಲಿ ಧಾರ್ಮಿಕ ಪ್ರವಚನ ಹಾಗೂ ವಿಶೇಷ ಪ್ರಾರ್ಥನೆಯನ್ನು ಮೌಲ್ವಿಗಳು ನೀಡಿದ್ದರು. ನೂರಾರು ಸಂಖ್ಯೆಯಲ್ಲಿ ಮುಸ್ಲಿಮರು ಪಾಲ್ಗೊಳ್ಳುತ್ತಿದ್ದರು. ಈದ್‌ಉಲ್ ಪಿತ್ತರ್ ಅಂಗವಾಗಿ ಶುಕ್ರವಾರ ಎಲ್ಲ ಜುಮ್ಮಾ ಮಸೀದಿಗಳಲ್ಲಿ ಪ್ರಾರ್ಥನೆ ಧಾರ್ಮಿಕ ಪ್ರವಚನದ ನಂತರ ಮುಸ್ಲಿಮರು ಒಬ್ಬರನ್ನೊಬ್ಬರು ಆಲಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ನಂತರ ಮುಸ್ಲಿಮರು ಗದ್ದೆಹಳ್ಳದ ಈದ್ಗಾಗಳಿಗೆ ಕುಟುಂಬದಲ್ಲಿ ಮೃತರಿಗೆ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಮನೆಗಳಲ್ಲಿ ಕುಟುಂಬದವರೊಂದಿಗೆ ಹಬ್ಬ ಆಚರಣೆ ಸಡಗರದಲ್ಲಿ ತೊಡಗಿಸಿಕೊಂಡರು.
ಸಲಾಫಿ ಮಸೀದಿಯಲ್ಲಿ ರಂಜಾನ್ ಈದ್‌ಉಲ್ ಪಿತ್ತರ್ ಅಂಗವಾಗಿ ನಿಶಾದ್ ಸ್ವಲಾಹಿ ನೇತೃತ್ವದಲ್ಲಿ ಅವರು ಧಾರ್ಮಿಕ ಪ್ರವಚನ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪುರುಷರು, ಮಹಿಳೆಯರು, ಮಕ್ಕಳು ಒಗ್ಗೂಡಿ ಪ್ರಾರ್ಥನೆ ಸಲ್ಲಿಸಿದರು. ಸುಂಟಿಕೊಪ್ಪ ಠಾಣಾಧಿಕಾರಿ ಜಗದೀಶ್ ಹಾಗೂ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ವಹಿಸಿದ್ದರು.