ಸುಂಟಿಕೊಪ್ಪ ಪೊಂಗಲ್ ಸಮಿತಿ ವತಿಯಿಂದ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಾಲಿನ ಕಳಶದೊಂದಿಗೆ ಗುರುವಾರ ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. 2.ಶ್ರೀಚಾಮುಂಡೇಶ್ವರಿ, ಮುತ್ತಪ್ಪ ದೇವಸ್ಥಾನದಲ್ಲಿ ಕಳಸವನ್ನಿಟ್ಟು ಪೂಜೆ ಸಲ್ಲಿಸಲಾಯಿತು. 
ಕೊಡಗು

ಶ್ರೀಚಾಮುಂಡೇಶ್ವರಿ ದೇಗುಲದಲ್ಲಿ ಸಂಕ್ರಾಂತಿ ಆಚರಣೆ

ಸುಂಟಿಕೊಪ್ಪ: ಸುಂಟಿಕೊಪ್ಪ ಪೊಂಗಲ್ ಸಮಿತಿ ವತಿಯಿಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸಡಗರದಿಂದ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.
ಗುರುವಾರ 26ನೇ ವರ್ಷದ ಆಚರಣೆಯ ಅಂಗವಾಗಿ ಬೆಳಗ್ಗೆ ಮಧುರಮ್ಮ ಬಡಾವಣೆಯಲ್ಲಿರುವ ವೃಕ್ಷೋದ್ಭವ ಗಣಪತಿ ದೇವಾಲಯದಲ್ಲಿ ಮಹಿಳೆಯರು, ಯುವತಿಯರು ಕಳಸವನ್ನು ಇರಿಸಿ ವಿಶೇಷ ಪೂಜೆ ನೆರವೇರಿಸಿದರು. ನಂತರ ದೇವಾಲಯ ಸಮಿತಿ ಕಾರ್ಯದರ್ಶಿ ಎ.ಲೋಕೇಶ್ ಕುಮಾರ್ ಮೆರವಣಿಗೆಗೆ ಚಾಲನೆ ನೀಡಿದರು.
ಮಧುರಮ್ಮ ಬಡಾವಣೆಯ ವೃಕ್ಷೋದ್ಭವ ದೇವಾಲಯದಿಂದ ನಾದಸ್ವರದೊಂದಿಗೆ ಶ್ರೀಚಾಮುಂಡೇಶ್ವರಿ ದೇವಿ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿರಿಸಿ ಮುಖ್ಯಬೀದಿಗಳ ಮೂಲಕ ಮೆರವಣಿಗೆ ನಡೆಸಿ ರಾಮ ಮಂದಿರ, ಅಯ್ಯಪ್ಪ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ನಂತರ ಶ್ರೀಚಾಮುಂಡೇಶ್ವರಿ, ಶ್ರೀಮುತ್ತಪ್ಪ ದೇವಾಲಯದಲ್ಲಿ ಕಳಸಗಳನಿಟ್ಟು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಭಕ್ತರು ದೇವಾಲಯದ ಆವರಣದಲ್ಲಿ ಪೊಂಗಲ್ ತಯಾರಿಸಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಮಧ್ಯಾಹ್ನ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಪೊಂಗಲ್ ಆಚರಣೆಯಲ್ಲಿ ಸದಸ್ಯರಾದ ಅಯ್ಯಪ್ಪ, ಎಸ್.ಸುರೇಶ, ಎಸ್.ಸುಂದರೇಶ, ಎಂ.ರಾಜಾ, ಎಂ.ಗಣೇಶ, ರಾಜ, ಜಗದೀಶ, ವೆಂಕಟೇಶ, ಗಣೇಶ, ವಿಘ್ನೇಶ್, ನಿಖಿಲ್, ಏಳುಮಲೈ ಇತರರು ಹಾಜರಿದ್ದರು.