ಐಗೂರಿನಲ್ಲಿ ನಡೆದ ಹಿಂದೂ ಸಂಗಮ ಸಮಾರಂಭದಲ್ಲಿ ಉದ್ಯಮಿ ನವೀನ ಸುಬ್ರಮಣ್ಯ, ತೋಟಂದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ, ಮಾಜಿ ಸೈನಿಕ ಎಂ.ಎಸ್.ಕಾಳಪ್ಪ ಇತರರು ಇದ್ದರು.
ಸುಂಟಿಕೊಪ್ಪ : ವಾಸಿಸುವ ನೆಲವನ್ನು ತಾಯಿಯೆಂದು ನಂಬಿ ಕ್ಷಾತ್ರ ಪರಂಪರೆ ಮತ್ತು ಸಂಸ್ಕೃತಿ ಸಂರಕ್ಷಣೆಗೆ ಹಿಂದೂಗಳೆಲ್ಲರೂ ಒಗ್ಗಟ್ಟಾಗಿರುವುದರಿಂದ ಭಾರತವು ಬಲಿಷ್ಠ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿದೆ ಎಂದು ಸುಳ್ಯದ ಉದ್ಯಮಿ ನವೀನ ಸುಬ್ರಮಣ್ಯ ಹೇಳಿದರು.
ಐಗೂರು ಮಂಡಲದ ಹಿಂದೂ ಸಂಗವ ಆಯೋಜನಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಹಿಂದೂ ಸಮಾಜೋತ್ಸವದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಕೃಷಿ ಪರಂಪರೆಯನ್ನು ಹೊಂದಿರುವ ಭಾರತ ದೇಶದ ಮೇಲೆ ಒಂದು ಸಾವಿರ
ವರ್ಷಗಳಿಗೂ ಹಿಂದಿನಿಂದ ಹಲವು ಪರಕೀಯರು ದಂಡೆತ್ತಿ ಬಂದಿದ್ದರು. ಇಲ್ಲಿನ ದೇವಾಲಯಗಳನ್ನು ಧ್ವಂಸಗೊಳಿಸಿ, ವಜ್ರ ವೈಢೂರ್ಯಗಳನ್ನು ಅಪಹರಿಸಿದರು. ಆಯಾ ಕಾಲದಲ್ಲಿ ಹುಟ್ಟಿ ಬಂದ ರಾಜವಂಶಸ್ಥರು, ಸಮಾಜ ಸುಧಾರಕರು, ಸಾಧು ಸಂತರು ನಮ್ಮ ದೇಶವನ್ನು ಪುನರುತ್ಥಾನ ಮಾಡಿ ಸಂಸ್ಕೃತಿ, ಪರಂಪರೆ ಮತ್ತು ಕೌಟುಂಬಿಕ ಮೌಲ್ಯಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದರು. ಸಮಾಜದ ಒಳಗಿನ ಕೊರತೆಯನ್ನು ನೀಗಿಸಿ ಆಯಾ ಕಾಲಘಟ್ಟದಲ್ಲಿ ಶಿವಾಜಿ ಮಹಾರಾಜರು, ರಾಣಾ ಪ್ರತಾಪ ಸಿಂಹ, ಶ್ರೀ ನಾರಾಯಣ ಗುರುಗಳು, ರಾಮಕೃಷ್ಣ ಪರಮಹಂಸರು ಈ ನೆಲದ ಸಂಸ್ಕೃತಿಯನ್ನು ಉಳಿಸಿದ್ದಾರೆ. ಹಿಂದೂಗಳಲ್ಲಿನ ಜಾತಿ ವ್ಯವಸ್ಥೆ, ಕೀಳು ಮತ್ತು ಮೇಲು ಎಂಬ ಭಾವನೆಯನ್ನು ತೊರೆದು ಎಲ್ಲರೂ ಒಗ್ಗಟ್ಟಾಗಿ ಕೌಟುಂಬಿಕ ಮೌಲ್ಯಗಳನ್ನು ಕಟ್ಟಿಕೊಂಡು ಬದುಕಿದರೆ ಭಾರತ ಇನ್ನಷ್ಟು ಸದೃಢವಾಗಲಿದೆ ಎಂದು ನವೀನ ಸುಬ್ರಮಣ್ಯ ಹೇಳಿದರು.
ಆಶೀರ್ವಚನ ನೀಡಿದ ಅರಕಲಗೂಡು ಬಸವಾಪಟ್ಟಣ ತೋಟಂದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ, ಸನಾತನ ಪರಂಪರೆ ಉಳಿವಿಗಾಗಿ 100 ವರ್ಷಗಳ ಹಿಂದೆ ಸ್ಥಾಪನೆಯಾದ ಆರ್‌ಎಸ್‌ಎಸ್, ಮಹೋನ್ನತ ಸೇವೆ ಸಲ್ಲಿಸಿದೆ. ಕೌಟುಂಬಿಕ ಮೌಲ್ಯಗಳ ಪ್ರಬೋಧನೆ, ಸಾಮರಸ್ಯ ಬದುಕು, ಸ್ವದೇಶಿ ಕಲ್ಪನೆಗಳಿಂದ ಹಿಂದೂ ಸಮಾಜವು ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಮಕ್ಕಳಿಗೆ ಸಂಸ್ಕಾರ ಕಲಿಸಿ: ಭಾರತ ಮಾತೆಯನ್ನು ಪೂಜಿಸುವ ಹಿಂದೂಗಳು ಮನೆಯಲ್ಲಿ ಮಕ್ಕಳಿಗೆ ಕೌಟುಂಬಿಕ ಮೌಲ್ಯಗಳನ್ನು ಕಲಿಸಿಕೊಡಬೇಕು. ಮಕ್ಕಳಲ್ಲಿ ಮಾತೃವಾತ್ಸಲ್ಯ ಕಲಿಸದಿದ್ದರೆ ವೃದ್ಯಾಪದಲ್ಲಿ ಆಶ್ರಯ ರಹಿತ ರಾಗಬೇಕಾಗುತ್ತದೆ ಎಂದರು. ವೈಚಾರಿಕ ಸೋಗಲಾಡಿತನದಿಂದ ಹಿಂದೂಗಳಲ್ಲೇ ಕೆಲವು ರಾಜಕಾರಣಿಗಳು ವಿದೇಶದ ನೆಲೆಗಳಲ್ಲಿ ಭಾರತ ದೇಶದ ಬಗ್ಗೆ ಅವಹೇಳನಕಾರಿಯಾಗಿ ಮಾತುಗಳನ್ನು ಆಡುವುದು ಖಂಡನೀಯ ಎಂದು ಶಿವಯೋಗಿ ಸ್ವಾಮೀಜಿ ಹೇಳಿದರು. ಮಾಜಿ ಸೈನಿಕ ಎಂ.ಎಸ್.ಕಾಳಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮ ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ. ಹಾಗಾಗಿ ಭಗವದ್ಗೀತೆ ಶ್ಲೋಕಗಳನ್ನು ಪ್ರತಿಯೊಬ್ಬರೂ ಮನೆಗಳಲ್ಲಿ ಪಠಿಸಬೇಕೆಂದು ಅವರು ಹೇಳಿದರು.
ಶೋಭಾಯಾತ್ರೆ: ಹೊಸತೋಟದಿಂದ ವೇದಿಕೆಯವರೆಗೆ ಶೋಭಾಯಾತ್ರೆ ನಡೆಯಿತು. ಮಹಿಳೆಯರು ಪೂರ್ಣಕುಂಭದೊಂದಿಗೆ, ಮಕ್ಕಳು ಮತ್ತು ಪುರುಷರು ಭಗವಾಧ್ವಜದೊಂದಿಗೆ ಮೆರವಣಿಗೆಯಲ್ಲಿ ಕಾಜೂರು ಯಡವಾರೆ ಜಂಕ್ಷನ್‌ವರೆಗೆ ಸಾಗಿದರು. ಆ ನಂತರ ಕುಂಭ ಹೊತ್ತ ಮಹಿಳೆಯರು, ರಾಮ, ಆಂಜನೇಯ, ಭಾರತಾಂಬೆ, ಶಿವಾಜಿ ಮಹಾರಾಜರ ಭಾವಚಿತ್ರವನ್ನು ಹಿಡಿದು ಭಾರತ ಮಾತಾಕೀ ಜೈ, ಜೈ ಶ್ರೀರಾಮ್, ಜೈ ಹನುಮಾನ್ ಮತ್ತಿತರ ಘೋಷಣೆ ಕೂಗಿದರು. ಚಂಡೆ ವಾದ್ಯ ಗಮನ ಸೆಳೆಯಿತು. ಪುಟಾಣಿ ಮಕ್ಕಳ ನೃತ್ಯ ಜನಮನ ಸೂರೆಗೊಂಡಿತು.
2: ಹಿಂದೂ ಸಂಗಮ ಸಮಾರಂಭದಲ್ಲಿ ಹಿಂದೂ ಭಾಂಧವರು.
3: ಮಹಿಳೆಯರು ಪೂರ್ಣಕುಂಭದೊಂದಿಗೆ ಮಕ್ಕಳು ಪುರುಷರು ಭಗವತ್‌ಧ್ವಜವನ್ನು ಹಿಡಿದುಕೊಂಡು ಶೋಭಾಯಾತ್ರೆ