ಪತ್ರಿಕಾಗೋಷ್ಠಿಯಲ್ಲಿ ಇದ್ದ ಪ್ರಮುಖರು
ಪ್ರಸಕ್ತ ಸಾಲಿನ ಕೊಡವ ಕೌಟುಂಬಿಕ ಹಾಕಿ ಉತ್ಸವದ ಸಮಾಜಮುಖಿ ಕಾರ್ಯಕ್ರಮಗಳ ಭಾಗವಾಗಿ ಆಯೋಜಿಸಲಾಗಿರುವ ಕೊಡಗಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹಾಕಿ ಪಂದ್ಯಾಟದ ಸಮಾರೋಪ ಸಮಾರಂಭ ಭಾನುವಾರ (ಜ.4) ಮೂರ್ನಾಡು ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಚೇನಂಡ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಚೇನಂಡ ಕಂಬಣಿ ಕರುಂಬಯ್ಯ ತಿಳಿಸಿದ್ದಾರೆ.
ಚೇನಂಡ ಕಪ್ ಹಾಕಿ ಉತ್ಸವ ಏ.5ರಿಂದ ಮೇ 2ರ ತನಕ ನಡೆಯಲಿದ್ದು, ಇದರ ಭಾಗವಾಗಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾಡು ಬೆಳೆಸಿ, ಪರಿಸರ ಉಳಿಸಿ ಎನ್ನುವ ಕಾರ್ಯಕ್ರಮ ಈಗಾಗಲೇ ನಡೆಸಲಾಗಿದೆ. ಗೋಲಿಗೆ ಒಂದು ಸಸಿ ಬೆಳೆಸಿ ಎನ್ನುವುದು ಚೇನಂಡ ಕುಟುಂಬಸ್ಥರ ಘೋಷ ವಾಕ್ಯ ಆಗಿದೆ. ಇದೀಗ 2ನೇ ಕಾರ್ಯಕ್ರಮವಾಗಿ ಜಾತಿ, ಮತ ಬೇಧವಿಲ್ಲದೆ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಹಾಕಿ ಪಂದ್ಯಾವಳಿ ನಡೆಯುತ್ತಿದೆ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿಸುವ 30 ಆಟಗಾರರನ್ನು ಆಯ್ಕೆ ಮಾಡಿ ಕೊಡವ ಹಾಕಿ ಉತ್ಸವ ನಡೆಯುವ ಸಂದರ್ಭದಲ್ಲಿ ಒಂದು ತಿಂಗಳ ಕಾಲ ನಾಪೋಕ್ಲುವಿನಲ್ಲಿ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುವುದು.
ಭಾನುವಾರ ಫೈನಲ್ ಪಂದ್ಯ ನಡೆಯಲಿದೆ. ಇದರ ಜತೆಗೆ ಮಧ್ಯಾಹ್ನ 2 ಗಂಟೆಗೆ ಕೂಡಿಗೆ ಕ್ರೀಡಾ ಶಾಲೆ ಮತ್ತು ಪೊನ್ನಂಪೇಟೆ ಡಿವೈಇಎಸ್ ಕ್ರೀಡಾ ಹಾಸ್ಟೆಲ್ ತಂಡದ ಮಧ್ಯೆ ಪ್ರದರ್ಶನ ಪಂದ್ಯ ಏರ್ಪಡಿಸಲಾಗಿದೆ. ಇದಕ್ಕೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ವಿಸ್ಮಯ ಚಕ್ರವರ್ತಿ ಚಾಲನೆ ನೀಡಲಿದ್ದಾರೆ. ನಂತರ ಸಮಾರೋಪ ಸಮಾರಂಭ ನಡೆಯಲಿದ್ದು ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಎಂಎಲ್‌ಸಿ ಸುಜಾ ಕುಶಾಲಪ್ಪ, ಕಾಂತೂರು ಮೂರ್ನಾಡು ಗ್ರಾ.ಪಂ. ಅಧ್ಯಕ್ಷ ಕುಶನ್ ರೈ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ವಿಸ್ಮಯ ಚಕ್ರವರ್ತಿ, ಹಾಕಿ ಕೂರ್ಗ್ ಅಧ್ಯಕ್ಷ ಲವಕುಮಾರ್, ಮೂರ್ನಾಡು ಎಜುಕೇಷನ್ ಸೊಸೈಟಿ ಅಧ್ಯಕ್ಷ ಜಗತ್ ತಿಮ್ಮಯ್ಯ, ಮೂರ್ನಾಡು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ವಿಲ್ಮಾ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ಚೇನಂಡ ಹಾಕಿ ಉತ್ಸವ ಸಮಿತಿ ಕಾರ್ಯದರ್ಶಿ ಮಧುಮಾದಯ್ಯ, ಜಂಟಿ ಕಾರ್ಯದರ್ಶಿ ತಮ್ಮಿ ತಮ್ಮಯ್ಯ ಸುದ್ದಿಗೋಷ್ಠಿಯಲ್ಲಿ ಇದ್ದರು.