ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀಧರ್, ಗೋವಿಂದರಾಜು, ನವೀನ್ ಕುಶಾಲಪ್ಪ ಇದ್ದರು. 
ಕೊಡಗು

ಭಗೀರಥ ಪ್ರಯತ್ನ ಇದ್ದಲ್ಲಿ ಯಶಸ್ಸು ಸಾಧ್ಯ

ಪ್ರಮುಖ ಮುಖ್ಯಾಂಶಗಳು

  • ಭಗೀರಥ ಪ್ರಯತ್ನ ಇದ್ದಲ್ಲಿ ಯಶಸ್ಸು ಸಾಧ್ಯ
ಮಡಿಕೇರಿ: ಕಠಿಣ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಬಹುದು ಎಂದು ತೋರಿಸಿಕೊಟ್ಟ ಭಗೀರಥ ಅವರ ಪ್ರಯತ್ನ ಮನುಕುಲಕ್ಕೆ ಮಾದರಿಯಾಗಿದೆ ಎಂದು ಚಿಂತಕರು ಹಾಗೂ ಸಾಹಿತಿಗಳಾದ ಚಿ.ನಾ.ಸೋಮೇಶ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗಂಗೆಯನ್ನು ಧರೆಗಿಳಿಸಿ ಗಂಗಾ ನದಿಯನ್ನಾಗಿಸಿ ಜನರ ನೀರಿನ ದಾಹ ತೀರಿಸಿದ ಭಗೀರಥರು ಪ್ರಯತ್ನ ಶೀಲತೆಯ ರೂಪಕವಾಗಿ ನಿಲ್ಲುತ್ತಾರೆ. ಅತ್ಯಂತ ಕಠಿಣವಾದ ಅಥವಾ ಅಸಾಧ್ಯವೆನಿಸುವ ಕಾರ್ಯವನ್ನು ಅಚಲವಾದ ಛಲ ಮತ್ತು ನಿರಂತರ ಪರಿಶ್ರಮದಿಂದ ಸಾಧಿಸುವ ಭಗೀರಥ ಅವರ ಪ್ರಯತ್ನದ ಮೂಲಕ ಯುವ ಸಮೂಹ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕುಶಾಲನಗರದ ಬಿ.ಸಿ.ಶಂಕರಯ್ಯ ಅವರು ಉಪನ್ಯಾಸ ನೀಡಿ, ಭಗೀರಥ ಪ್ರಯತ್ನ ಎಂಬುದು ಇಂದಿಗೂ ಮುಂದೆಯೂ ಪ್ರಸ್ತುತ. ಪ್ರತಿಯೊಬ್ಬರು ತಮ್ಮ ಇತಿಹಾಸ, ಪುರಾಣ, ಹಿಂದು ಧರ್ಮಕ್ಕೆ ಗೌರವ ನೀಡಬೇಕು ಎಂದು ಹೇಳಿದರು.
ಭಗೀರಥ ಉಪ್ಪಾರ ಸಮಾಜದ ಗೌರವಾಧ್ಯಕ್ಷ ಬಿ.ಸಿ.ಗೋವಿಂದರಾಜು ಮಾತನಾಡಿ, ಪ್ರಯತ್ನ ಎಂಬುದು ಬಸವಣ್ಣನವರ ತತ್ವ ಕಾಯಕವೇ ಕೈಲಾಸ ಎಂಬಂತೆ. ಪ್ರಯತ್ನ ಎನ್ನುವುದು ಪ್ರತಿಯೊಬ್ಬ ಮನುಷ್ಯನಿಗೆ ದೇವರು ಕೊಟ್ಟ ಉಡುಗೊರೆ. ಅದರಿಂದ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು. ಆದ್ದರಿಂದ ಯುವ ಪೀಳಿಗೆ ಪ್ರಯತ್ನಪಟ್ಟರೆ ದೇಶದ ಮುತ್ತುಗಳಾಗಬಹುದು ಎಂದು ಸಲಹೆ ನೀಡಿದರು.
ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೇಕಲ್ ನವೀನ್ ಕುಶಾಲಪ್ಪ ಮಾತನಾಡಿ, ಎಲ್ಲಾ ಮಹಾತ್ಮರೂ ಮನುಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ವಿಶ್ವ ಮಾನವರಾಗಿದ್ದಾರೆ. ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲರೂ ಸೇರಿ ಜಯಂತಿ ಆಚರಿಸಿದರೆ ಅರ್ಥಪೂರ್ಣವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ತಹಶೀಲ್ದಾರ ಶ್ರೀಧರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಪ್ಪಾರ ಸಮಾಜದ ಸದಸ್ಯರಾದ ಪೃಥ್ವಿರಾಜ್, ಸಮಾಜದ ಕಾರ್ಯದರ್ಶಿ ಬಿ.ಎನ್.ಜಗದೀಶ್, ಭಗೀರಥ ಉಪ್ಪಾರ ಸಮಾಜದ ಅಧ್ಯಕ್ಷ ವಿ.ಗಿರೀಶ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ಮಡಿಕೇರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಇತರರು ಇದ್ದರು. ಸಭಾಕಾರ್ಯಕ್ರಮಕ್ಕೂ ಮುನ್ನ ಅತಿಥಿಗಣ್ಯರು ಶ್ರೀ ಮಹರ್ಷಿ ಭಗೀರಥ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.