ಸೋಮವಾರಪೇಟೆ ತಾಲೂಕಿನ ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಹಪಠ್ಯ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ ಮಲ್ಲಪ್ಪ ಮಾತನಾಡಿದರು. ಹರ್ಷ, ಸುನಿತಾ, ಉಲ್ಲಾಸ್, ಸೋಮೇಶ್ ಇದ್ದರು.
ಸೋಮವಾರಪೇಟೆ: ವಿದ್ಯಾರ್ಥಿಗಳು ಪಠ್ಯ ಮತ್ತು ಅಂಕಗಳಿಗೆ ಮಾತ್ರ ಸೀಮಿತವಾಗದೆ, ಗೌರವ ಭಾವನೆ ಮತ್ತು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವಂತೆ ಸೋಮವಾರಪೇಟೆ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಮಲ್ಲಪ್ಪ ಕಿವಿಮಾತು ಹೇಳಿದರು.
ಯಡೂರು ಗ್ರಾಮ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸಹಪಠ್ಯ ಚಟುವಟಿಕೆ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ತಂತ್ರಜ್ಞಾನ ಮುಂದುವರಿದಿದ್ದು, ವಿವಿಧ ವಿಷಯಗಳ ಕಲಿಕೆ ಸುಗಮವಾಗಿದೆ. ಸಾಕಷ್ಟು ಅಧ್ಯಯನ ಸಾಮಗ್ರಿಗಳು ಅಂತರ್ಜಾಲದ ಮೂಲಕ ಲಭ್ಯವಾಗುತ್ತಿದೆ. ವಿದ್ಯಾರ್ಥಿಗಳು ಕೇವಲ ಮಾಹಿತಿ ಕ್ರೋಡೀಕರಣ, ಅಂಕಗಳಿಗೆ ಸೀಮಿತವಾಗದೆ, ಕೌಶಲಗಳನ್ನು ರೂಢಿಸಿಕೊಳ್ಳಬೇಕು. ಜತೆಗೆ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಟ್ಟು ಅರ್ಥಪೂರ್ಣವಾದ ಬದುಕು ನಡೆಸಲು ಮುಂದಾಗಬೇಕು ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಉಲ್ಲಾಸ್ ಕರಡಿ ಕೊಪ್ಪ ಮಾತನಾಡಿ, ಕಾಲೇಜಿನ ಹಿಂದಿನ ದಿನಗಳನ್ನು ನೆನಪಿಸಿಕೊಂಡು ಇಂದಿನ ಸೌಲಭ್ಯಗಳು ಅಂದು ಇರಲಿಲ್ಲ. ಸರ್ಕಾರ ಈಗ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಅನುಭವಿ ಉಪನ್ಯಾಸಕರಿದ್ದಾರೆ. ಎಲ್ಲ ರೀತಿಯ ಮೂಲಸೌಕರ್ಯಗಳು ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲ ಡಾ.ಬಿ.ಡಿ.ಹರ್ಷ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಮೂರನೇ ಬಾರಿಗೆ ನ್ಯಾಕ್ ಮೌಲ್ಯಮಾಪನಕ್ಕೆ ಒಳಗಾಗಿರುವ ಎರಡೇ ಕಾಲೇಜುಗಳಲ್ಲಿ ನಮ್ಮ ಕಾಲೇಜು ಸಹ ಒಂದು ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಇದು ಅನುದಾನಿತ ಕಾಲೇಜು ಸಹ ಆಗಿದ್ದು, ಕಾಲೇಜಿನಲ್ಲಿ ಲಭ್ಯವಿರುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಂ.ಎಂ ಸುನಿತಾ ಅವರು ಬಿಕಾಂ ವಿದ್ಯಾರ್ಥಿಗಳಿಗೆ ರಚಿಸಿರುವ ಪಠ್ಯಪುಸ್ತಕವನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಸುಶೀಲಾ ಹಾನಗಲ್, ಸುರೇಂದ್ರ ಬಳಗುಂದ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೋಮೇಶ್ ಮತ್ತು ಪದಾಧಿಕಾರಿಗಳು ಇದ್ದರು.