ಕೂಡಿಗೆ ಡಯಟ್ ಸಂಸ್ಥೆಯಲ್ಲಿ ಏರ್ಪಡಿಸಿದ್ದ ವೃತ್ತಿಪರ ಹಾಗೂ ವೃತ್ತಿ ಮಾರ್ಗದರ್ಶನ ಮೇಳವನ್ನು ಕೊಡಗು ಜಿಲ್ಲಾ ಪಂಚಾಯಿತಿ ಸಿಇಓ ಆನಂದ ಪ್ರಕಾಶ್ ಮೀನಾ ಉದ್ಘಾಟಿಸಿದರು. ರಾಮಚಂದ್ರರಾಜೇ ಅರಸ್, ಪಿ.ಆರ್. ವಿಜಯ್, ಆರ್.ಕೆ. ಬಾಲಚಂದ್ರ, ಎಚ್.ಎಚ್. ಸತೀಶ್, ಎನ್.ವಿ. ಸ್ವಾಮಿ, ಪುಷ್ಪ, ಸೌಮ್ಯ, ಟಿ.ಜಿ.ಪ್ರೇಮಕುಮಾರ್, ಡಾ ಪ್ರವೀಣ್ ಮತ್ತಿತರರು ಇದ್ದರು. 
ಕೊಡಗು

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು

ಸುನಿಲ್ ಪೊನ್ನೇಟಿ
ಕುಶಾಲನಗರ:
ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣದ ಆಯ್ಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನ ಹೇಳಿದರು. ಸಮಗ್ರ ಶಿಕ್ಷಣ-ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ವೃತ್ತಿ ಶಿಕ್ಷಣ ಪ್ರದರ್ಶನ ಮತ್ತು ಕೆರಿಯರ್ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಿಕ್ಷಣದ ನಂತರದ ಸರಿಯಾದ ವೃತ್ತಿ ಮಾರ್ಗ ಆರಿಸಿಕೊಳ್ಳಲು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಉದ್ಯೋಗ ಕಂಡುಕೊಳ್ಳಲು ವೃತ್ತಿ ಶಿಕ್ಷಣ ಮತ್ತು ಪ್ರದರ್ಶನ ಮೇಳ ಆಯೋಜನೆ ಮಾಡಿ ಮಾಹಿತಿ ನೀಡುತ್ತಿರುವುದು ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ತಜ್ಞರಿಂದ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಸೂಕ್ತ ತಿಳುವಳಿಕೆ ಮತ್ತು ವಿವಿಧ ಇಲಾಖೆಗಳಿಂದ ಸಿಗುವ ಮಾಹಿತಿಗಳು, ಬ್ಯಾಂಕ್ ಗಳಿಂದ ಲಭ್ಯವಾಗುವ ಶಿಕ್ಷಣ ಸಾಲ ಸೌಲಭ್ಯಗಳು ಇತ್ಯಾದಿ ಬಗ್ಗೆ ಸಂಪೂರ್ಣ ವಿವರ ಲಭ್ಯವಾಗುವುದರ ಜತೆಗೆ ವಿದ್ಯಾರ್ಥಿಗಳಿಗೆ ಈ ಕುರಿತ ತರಬೇತಿಗಳು ಸಿಗಲಿವೆ. ಪೋಷಕರು ಕೂಡ ತಮ್ಮ ಮಕ್ಕಳ ಅಭಿರುಚಿಗೆ ತಕ್ಕಂತಹ ಓದಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಡಯಟ್ ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಮಾತನಾಡಿ ವಿದ್ಯಾರ್ಥಿಗಳು 10ನೇ ತರಗತಿ ಮತ್ತು ಪಿಯುಸಿ ನಂತರ ಮುಂದೇನು ಹಾಗೂ ವೃತ್ತಿಪರ ಕೋರ್ಸ್ ಗಳ ಆಯ್ಕೆಗೆ ಸಂಬAಧಿಸಿದAತೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಲು ಸರ್ಕಾರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಘಟಕವನ್ನು ಆರಂಭಿಸಿದ್ದು ಈ ಘಟಕದ ವತಿಯಿಂದ ವೃತ್ತಿ ಮಾರ್ಗದರ್ಶನ ಮಾಹಿತಿ ನೀಡಲಾಗುತ್ತಿದೆ.
ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ಹಾಗೂ ಹೆಚ್ಚಿನ ಅವಕಾಶ ಕಲ್ಪಿಸಲು ಪ್ರೌಢಶಾಲೆ ಹಾಗೂ ಪದವಿಪೂರ್ವ ಹಂತದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ, ವಿದ್ಯಾರ್ಥಿ ವೇತನ ಮತ್ತು ಉದ್ಯೋಗ ಅವಕಾಶಗಳ ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನವನ್ನು ಈ ಮೇಳದಲ್ಲಿ ನೀಡಲಾಗುವುದು ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಆರ್. ವಿಜಯ್ ಮಾತನಾಡಿ, ಇಂತಹ ವೃತ್ತಿಪರ ಮೇಳಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ ಹಾಗೂ ಬ್ಯಾಂಕ್ ಉದ್ಯೋಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಜಿಲ್ಲಾ ಲೀಡ್ ಬ್ಯಾಂಕ್ ನಿವೃತ್ತ ಪ್ರಬಂಧಕ ಆರ್.ಕೆ. ಬಾಲಚಂದ್ರ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಸರ್ಕಾರಿ ನೌಕರಿ ಸಿಗುವ ಕೋರ್ಸ್ಗಳು ಮಾತ್ರವಲ್ಲದೆ ಸ್ವಯಂ ಉದ್ಯೋಗ ಸ್ಥಾಪಿಸಿ ಇತರರಿಗೆ ನೌಕರಿ ಕೊಡುವಂತಹ ವೃತ್ತಿಪರ ಕೋರ್ಸ್ಗಳನ್ನೂ ಓದಬೇಕು ಎಂದರು.
ಕುಶಾಲನಗರ ಸರ್ಕಾರಿ ಎಂಜಿನಿಯರಿAಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ ಎನ್.ಎಸ್. ಸತೀಶ್ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಹಾಗೂ ಜೆಇಇ ಪರೀಕ್ಷೆಯ ಪ್ರವೇಶ ಹಾಗೂ ವೃತ್ತಿ ಮಾರ್ಗದರ್ಶನದ ಬಗ್ಗೆ ಮಾಹಿತಿ ನೀಡಿದರು.
ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಎಚ್.ಎಚ್. ಸತೀಶ್ ವೃತ್ತಿ ಮೇಳದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.
ಭಾರತ್ ಸ್ಕೌಟ್ಸ್, ಗೈಡ್ಸ್ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ, ಡಿವೈಪಿಸಿಗಳಾದ ಸೌಮ್ಯ ಪೊನ್ನಪ್ಪ, ಎಂ. ಕೃಷ್ಣಪ್ಪ, ಬಿಇಓಗಳಾದ ಎಂ.ಕೃಷ್ಣಪ್ಪ, ಆರ್.ಪಿ.ಮಹೇಶ್, ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಎನ್.ವಿ.ಸ್ವಾಮಿ, ಬಿ.ಎನ್.ಪುಷ್ಪ, ಆರ್. ಹೇಮಂತರಾಜ್, ಜಿಲ್ಲಾ ಉದ್ಯೋಗಾಧಿಕಾರಿ ಸಿ.ಆರ್.ಮಂಜುನಾಥ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಇದ್ದರು.