ಅರ್ವತೋಕ್ಲು ಸರ್ವದೈವತಾ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಾಲಿಬಾಲ್ ಪಂದ್ಯಾಟ ಗಮನ ಸೆಳೆಯಿತು. 
ಕೊಡಗು

ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಿಂದೆದ್ದ ವಿದ್ಯಾರ್ಥಿಗಳು

ಪ್ರಮುಖ ಮುಖ್ಯಾಂಶಗಳು

  • ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಿಂದೆದ್ದ ವಿದ್ಯಾರ್ಥಿಗಳು

ಗೋಣಿಕೊಪ್ಪ: ಅರ್ವತೋಕ್ಲು ಸರ್ವದೈವತಾ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ನಲಿವು ಎಂಬ ಆಶಯದೊಂದಿಗೆ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ೬ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಸತ್ಯ, ಧರ್ಮ, ಶಾಂತಿ ಹಾಗೂ ಪ್ರೇಮ ಎಂಬ ನಾಲ್ಕು ತಂಡಗಳನ್ನು ರಚಿಸಿ ವಾಲಿಬಾಲ್, ಥ್ರೋಬಾಲ್, ಓಟ, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ತುಂತುರು ಮಳೆ, ನಡುವೆ ಕಾಣಿಸಿಕೊಂಡ ಬಿಸಿಲು ಹಾಗೂ ಕೆಸರುಗದ್ದೆಯ ವಾತಾವರಣ ವಿದ್ಯಾರ್ಥಿಗಳ ಕ್ರೀಡಾ ಉತ್ಸಾಹಕ್ಕೆ ಮತ್ತಷ್ಟು ಮೆರುಗು ನೀಡಿತು. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು, ಸಿಬ್ಬಂದಿ ಹಾಗೂ ಚಾಲಕರು ಕೂಡ ಕೆಸರುಗದ್ದೆಗೆ ಇಳಿದು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಕೆಸರುಗದ್ದೆ ಕ್ರೀಡಾಕೂಟಕ್ಕೆ ಸರ್ವದೈವತಾ ವಿದ್ಯಾಸಂಸ್ಥೆಯ ಮುಖ್ಯಸ್ಥ ಕಾಡ್ಯಮಾಡ ಪ್ರಕಾಶ್ ಮೊಣ್ಣಪ್ಪ ಅವರು ವಾಲಿಬಾಲ್ ಚೆಂಡನ್ನು ಮಕ್ಕಳತ್ತ ಎಸೆಯುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವುದರ ಜತೆಗೆ ಪರಿಸರ ಮತ್ತು ನಮ್ಮ ಸುತ್ತಮುತ್ತಲಿನ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವೂ ನಡೆಯಬೇಕು. ವಿದ್ಯಾರ್ಥಿಗಳು ಪಠ್ಯದ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಸಮಾಜದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪರಿಸರವನ್ನು ಪ್ರೀತಿಸುವ ಮನಸ್ಥಿತಿಯನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.
ಸಂಸ್ಥೆಯ ಸ್ಥಾಪಕಿ ಲಲಿತಾ ಮೊಣ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹಾಗೂ ಉತ್ಸಾಹವನ್ನು ಹೆಚ್ಚಿಸುವ ಉದ್ದೇಶದಿಂದ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಜಾಗೃತಿಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ವದೈವತಾ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಮನೆಯಪಂಡ ಶೀಲಾ ಬೋಪಣ್ಣ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ತರಗತಿಯ ಕಲಿಕೆಗೆ ಪೂರಕವಾಗಿ ಇಂತಹ ಚಟುವಟಿಕೆಗಳು ಮಕ್ಕಳಲ್ಲಿ ಹೊಸ ಅನುಭವ ಹಾಗೂ ಆತ್ಮವಿಶ್ವಾಸ ಮೂಡಿಸುತ್ತವೆ ಎಂದು ಹೇಳಿದರು.
ದೈಹಿಕ ಶಿಕ್ಷಣ ಶಿಕ್ಷಕ ಪ್ರಮೋದ್, ಶಿಕ್ಷಕರುಗಳಾದ ಲೀನಾ ರಾಘವೇಂದ್ರ, ಶೀಲಾ, ಸೌಮ್ಯ ಹಾಗೂ ಸ್ವಪ್ನಾ ಅವರು ಕ್ರೀಡಾಕೂಟದ ಪ್ರಯೋಜನ ಹಾಗೂ ಮಕ್ಕಳ ಆರೋಗ್ಯದ ಮೇಲೆ ಕ್ರೀಡಾ ಚಟುವಟಿಕೆಗಳಿಂದಾಗುವ ಸಕಾರಾತ್ಮಕ ಪರಿಣಾಮಗಳ ಕುರಿತು ತಿಳಿಸಿದರು.
ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿಭಾಗದ ಶಿಕ್ಷಕರು, ಸಿಬ್ಬಂದಿ ಮತ್ತು ಚಾಲಕರು ವಿದ್ಯಾರ್ಥಿಗಳೊಂದಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಕ್ಕಳ ಉತ್ಸಾಹವನ್ನು ಹೆಚ್ಚಿಸಿದರು.