ಸೋಮವಾರಪೇಟೆ ತಾಲೂಕಿನ ನೇರುಗಳಲೆ ಸರ್ಕಾರಿ ಪ್ರೌಢಶಾಲೆಗೆ ಎಐಗೆ ಸಂಬಂಧಿಸಿದ ಮೊಬೈಲ್ ಹಾಗೂ ವೆಬ್ ಆಪ್ ಅನ್ನು ದಾನಿಗಳಾದ ಗಿರೀಶ್ ಮಲ್ಲಪ್ಪ ಕೊಡುಗೆ ನೀಡಿದರು. ಎಸ್.ಎಂ.ಡಿಸಿಲ್ವಾ, ಬೋಜೇಗೌಡ, ರಾಜೇಶ್ವರಿ, ರತ್ನಕುಮಾರ್ ಇತರರು ಇದ್ದರು.  
ಕೊಡಗು

ವಿದ್ಯಾರ್ಥಿಗಳು ಎಐ ಮೂಲಕ ಗುಣಾತ್ಮಕ ಶಿಕ್ಷಣ ಪಡೆಯಿರಿ

ಸೋಮವಾರಪೇಟೆ: ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಮಕ್ಕಳು ತಮ್ಮ ಕಲಿಕಾ ಮಟ್ಟವನ್ನು ಸುಧಾರಿಸಿಕೊಳ್ಳುವುದರೊಂದಿಗೆ ವೃತ್ತಿ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದು ಉದ್ಯಮಿ ಗಿರೀಶ್ ಮಲ್ಲಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅನುಕೂಲಕ್ಕೆ ಎಐಗೆ ಸಂಬಂಧಿಸಿದ ಮೊಬೈಲ್ ಹಾಗೂ ವೆಬ್ ಆಪ್ ಕೊಡುಗೆ ನೀಡಿ ಮಾತನಾಡಿದ ಅವರು, ಶಾಲಾ ಮಕ್ಕಳು ಇನ್ನು ಮುಂದೆ ಎಐ ಮೂಲಕ ಗುಣಾತ್ಮಕ ಶಿಕ್ಷಣವನ್ನು ಪಡೆಯಬೇಕು. ವಿದ್ಯಾರ್ಥಿಗಳು ಪ್ರತಿ ವಿಷಯದ ಸಾಕಷ್ಟು ಅಂಶಗಳನ್ನು ಕಲಿಯಲು ಅವಕಾಶವಿದ್ದು, ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಕೆ.ಆರ್.ರತ್ನಕುಮಾರ್ ಮಾತನಾಡಿ, ಶಿಕ್ಷಕರು ಕೂಡ ಎಲ್‌ಬಿಎ ಹಾಗೂ ಘಟಕ ಪರೀಕ್ಷೆಗಳನ್ನು ತರಗತಿಗಳಲ್ಲಿ ಆಯೋಜಿಸಿ, ಅಲ್ಲೇ ಮೌಲ್ಯಮಾಪನ ಮಾಡಲು ಸಹಕಾರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ದಾನಿಗಳಾದ ಗಿರೀಶ್ ಮಲ್ಲಪ್ಪ, ಅಭಿಯಂತರ ಸೈಜನ್ ಕೆ.ಪೀಟರ್, ಗ್ರಾಮದ ಪ್ರಮುಖರಾದ ಕೆ.ಎನ್.ಪಾಪಯ್ಯ ಅವರನ್ನು ಸನ್ಮಾನಿಸಲಾಯಿತು. ಆಪ್ ಬಳಕೆ ಹಾಗೂ ಕಾರ್ಯನಿರ್ವಹಣೆ ಕುರಿತು ಉಪೇಂದ್ರ ಕುಮಾರ್ ಅವರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ.ಡಿಸಿಲ್ವಾ, ಅಂಕುರಂ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಬೋಜೇಗೌಡ, ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ ಮತ್ತಿತರರು ಇದ್ದರು.