ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವವನ್ನು ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಉದ್ಘಾಟಿಸಿದರು. ಪ್ರೊ. ಸರಸ್ವತಿ, ಪ್ರೊ.ದಯಾನಂದ, ಪ್ರೊ.ಬಸವರಾಜು, ಕೆ.ಜೆ.ದಿವಾಕರ ಕುಂದಲ್ಪಾಡಿ ಇದ್ದರು.
- ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಸಲಹೆ
- ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ
ವಿರಾಜಪೇಟೆ: ವಿದ್ಯಾರ್ಥಿಗಳು ಓದಿನ ಜತೆಗೆ ಕೌಶಲವನ್ನು ಬೆಳೆಸಿಕೊಳ್ಳಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಹೇಳಿದರು.
ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯ ರೂವಾರಿಗಳು. ಮೂರು ವರ್ಷಗಳ ಪದವಿ ಶಿಕ್ಷಣವನ್ನು ಪಡೆದು ತೆರಳುವ ನೀವು ಸಮಾಜ ನೀಡುವ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ತಿಳಿಸಿದರು.
ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ. ಜೆ.ದಿವಾಕರ ಕುಂದಲ್ಪಾಡಿ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವುದರ ಮೂಲಕ ಉತ್ತಮ ಉದ್ಯೋಗವನ್ನು ಪಡೆದು ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ಸರಸ್ವತಿ ಮಾತನಾಡಿ, ವಿದ್ಯಾರ್ಥಿಗಳು ಜೀವನದ ಮೌಲ್ಯಗಳಾದ ನಿಷ್ಠೆ, ಪ್ರಾಮಾಣಿಕತೆಗಳನ್ನು ರೂಢಿಸಿಕೊಳ್ಳಿ. ಸಮಾಜಕ್ಕೆ ಉತ್ತಮ ವ್ಯಕ್ತಿಗಳಾಗಿ. ಮುಂಬರುವ ಪರೀಕ್ಷೆಗಳನ್ನು ದೈರ್ಯದಿಂದ ಎದುರಿಸಿರಿ ಎಂದು ಹೇಳಿದರು.
ಕಾಲೇಜಿನ ವಾರ್ಷಿಕ ಸಂಚಿಕೆ ವಿರಾಜಮಾರ್ಗವನ್ನು ಬಿಡುಗಡೆ ಮಾಡಲಾಯಿತು.
ವರ್ಷದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ತೃತೀಯ ಬಿಎ ವಿದ್ಯಾರ್ಥಿನಿ ಕೀರ್ತನಾ ಪಡೆದರು. ಅತ್ಯುತ್ತಮ ವಿದ್ಯಾರ್ಥಿ ನಾಯಕ ಪ್ರಶಸ್ತಿಯನ್ನು ತೃತೀಯ ಬಿಎ ವಿದ್ಯಾರ್ಥಿ ನಿಶಾನ್ ಜೋಸೆಫ್, ಅತ್ಯುತ್ತಮ ಶ್ರದ್ಧಾ ವಿದ್ಯಾರ್ಥಿ ಪ್ರಶಸ್ತಿಯನ್ನು ದರ್ಶನ್, ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ರಸೀನ , ಅತ್ಯುತ್ತಮ ಸಾಂಸ್ಕೃತಿಕ ಪ್ರತಿಭೆ ಪ್ರಶಸ್ತಿಯನ್ನು ಸುಹೈರಾ ಅವರಿಗೆ ವಿತರಿಸಲಾಯಿತು.
ಎನ್‌ಎಸ್‌ಎಸ್ ಘಟಕದ ಅತ್ಯುತ್ತಮ ಸ್ವಯಂ ಸೇವಕರಾದ ತೃತೀಯ ಬಿಎ ವಿದ್ಯಾರ್ಥಿಗಳಾದ ಮಂಜು, ಚಂದ್ರಶೇಖರ, ಪುನೀತ್, ಕುಮಾರ್, ಸೋನಾ, ನಿವಿತಾ ಅವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ. ಬಸವರಾಜು ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಸಂಚಾಲಕ ಡಾ.ಕೆ.ಸಿ.ದಯಾನಂದ, ಕ್ರೀಡಾ ಸಮಿತಿ ಸಂಚಾಲಕ ಪ್ರೊ.ಗುರುಪ್ರಸಾದ್ ಇತರರು ಇದ್ದರು.