ಯಡವನಾಡು ಕಂದಾಯ ಗ್ರಾಮವನ್ನು ಸರ್ಕಾರ ರದ್ದು ಮಾಡಿರುವುದರಿಂದ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡಲು ಗ್ರಾಮಸ್ಥರು ಸಭೆ ನಡೆಸಿದರು. ಗ್ರಾಮ ದೇವಾಲಯ ಸಮಿತಿ ಅಧ್ಯಕ್ಷ ಗಣೇಶ್ ಮತ್ತಿತರರು ಇದ್ದರು. 
ಕೊಡಗು

ಕಂದಾಯ ಗ್ರಾಮ ರದ್ದಾಗಿದ್ದರ ವಿರುದ್ಧ ಹೋರಾಟ

ಕುಶಾಲನಗರ:
ಕುಶಾಲನಗರ ತಾಲೂಕು ಯಡವನಾಡು ಕಂದಾಯ ಗ್ರಾಮವನ್ನು ಸರ್ಕಾರ ರದ್ದು ಮಾಡಿದ್ದು, ಇಲ್ಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಹಾರಂಗಿ ಜಲಾಶಯ ನಿರ್ಮಾಣ ಸಂದರ್ಭ ಭೂಮಿ ಕಳೆದುಕೊಂಡವರಿಗೆ ಈ ಸ್ಥಳದಲ್ಲಿ ಪುನರ್ವಸತಿ ಒದಗಿಸಲಾಗಿತ್ತು. ಇದೀಗ ಮರಳಿ ಕಂದಾಯ ಗ್ರಾಮ ಪಡೆಯಲು ಸ್ಥಳೀಯರು ಹೋರಾಟಕ್ಕೆ ಇಳಿಯಲು ಸಜ್ಜಾಗಿದ್ದಾರೆ.
1978ರ ಅವಧಿಯಲ್ಲಿ ಹಾರಂಗಿ ಜಲಾಶಯ ನಿರ್ಮಾಣ ಕಾರ್ಯ ಆರಂಭವಾದಾಗ ಹಿನ್ನೀರು ಪ್ರದೇಶದಲ್ಲಿ ಅಪಾರ ಪ್ರಮಾಣದ ಆಸ್ತಿ - ಪಾಸ್ತಿ, ಮನೆ, ಮಠ ಗಳನ್ನು ಕಳೆದುಕೊಂಡು ನಿರಾಶ್ರಿತರಾದವರಿಗೆ ಹಾರಂಗಿ ಜಲಾಶಯದ ಎಡಬದಿಯಲ್ಲಿ 1,057 ಎಕರೆ ಅರಣ್ಯ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲು ಸರ್ಕಾರ ಯೋಜಿಸಿತ್ತು. ಅದರಂತೆಯೇ ಜಲಾಶಯಕ್ಕಾಗಿ ತಮ್ಮ ಸರ್ವಸ್ವ ತ್ಯಾಗ ಮಾಡಿದ ಪ್ರತಿ ಕುಟುಂಬಕ್ಕೆ ಅರಣ್ಯ ಕಾಯಿದೆ 1963 ರ ಸೆಕ್ಷನ್ 28 ರಡಿ ತಲಾ 4 ಎಕರೆ ಕೃಷಿ ಭೂಮಿ, ವಾಸಕ್ಕೆ ಮನೆದಳ, ಪೂರಕವಾದ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿತ್ತು.
1978ರಿಂದಲೂ ಕಂದಾಯ ಗ್ರಾಮಕ್ಕಾಗಿ ದಶಕಗಳ ಕಾಲ ನಿರಂತರ ಹೋರಾಟ ನಡೆಸಿದ ಫಲವಾಗಿ 2017ರ ಮೇ 17ಕ್ಕೆ ಯಡವನಾಡನ್ನು ಕಂದಾಯ ಗ್ರಾಮವಾಗಿ ಸರ್ಕಾರ ಘೋಷಣೆ ಮಾಡಿತ್ತು. ಇದಕ್ಕೂ ಮೊದಲು 2015ರಲ್ಲಿ ಸರ್ಕಾರ ಮಾಡಿದ ಡಿನೋಟಿಫಿಕೇಷನ್ ಪ್ರಶ್ನಿಸಿ ಕೆಲವು ಪರಿಸರವಾದಿಗಳು ಉಚ್ಚನ್ಯಾಯಾಲಯದಲ್ಲಿ ರಿಟ್ ಪಿಟೀಷನ್ ಸಲ್ಲಿಸಿದ ಪರಿಣಾಮ ನ್ಯಾಯಾಲಯ 2021ರ ಏಪ್ರಿಲ್ 14ರಂದು ಡಿನೋಟಿಫಿಕೇಷನ್ ರದ್ದು ಮಾಡಿ ಆದೇಶ ನೀಡಿತ್ತು. ಈ ಆದೇಶ ಪಾಲನೆಗಾಗಿ ಸರ್ಕಾರ ಹಾಲಿ ಘೋಷಣೆಯಾಗಿರುವ ಕಂದಾಯ ಗ್ರಾಮವನ್ನು ರದ್ದು ಮಾಡಿದೆ.
ಈ ಮಧ್ಯೆ ಸೋಮವಾರಪೇಟೆ ತಹಸೀಲ್ದಾರ್ ಅವರಿಗೆ ಪತ್ರ ಬರೆದಿರುವ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಾರಂಗಿ ಜಲಾಶಯದ ಎಡ ಹಾಗೂ ಬಲ ಬದಿಯ ಯಡವನಾಡು ಹಾಗೂ ಅತ್ತೂರು ಗ್ರಾಮಗಳ ಮೀಸಲು ಅರಣ್ಯದ ಅಧಿಸೂಚಿತ ವಿಸ್ತೀರ್ಣ 6870.92 ಎಕರೆ ಇದ್ದು ಈ ಜಾಗ ಮೀಸಲು ಅರಣ್ಯವಾಗಿ ಮುಂದುವರೆದಿರುವುದರಿAದ ಈ ಪ್ರದೇಶದಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಒತ್ತುವರಿದಾರರಿಗೆ ಮತ್ತು ಇತರೆ ಮಂಜೂರಾತಿ ಕೋರುವ ಅರ್ಜಿದಾರರಿಗೆ ಯಾವುದೇ ಭೂ ಮಂಜೂರಾತಿಗೆ ಅವಕಾಶ ಇರುವುದಿಲ್ಲ. ಹಾಗೂ ಈ ಎರಡೂ ಗ್ರಾಮಗಳ ಖಾಸಗಿ ಜಾಗವನ್ನು ಭೂ ಪರಿವರ್ತನೆ ಮಾಡಬಾರದು ಎಂದು ನಿರ್ದೇಶನ ನೀಡಲಾಗಿದೆ.
ಒಮ್ಮೆ ಕಂದಾಯ ಗ್ರಾಮ ಎಂದು ಘೋಷಣೆ ಆಗಿ ಮತ್ತೆ ಮೀಸಲು ಅರಣ್ಯ ಎಂದು ಸರ್ಕಾರ ಪ್ರಕಟಿಸಿರುವುದರಿಂದ ಯಡವನಾಡು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಹಾಗಾಗಿ ಗ್ರಾಮಸ್ಥರ ನಿಯೋಗ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಗ್ರಾಮಸ್ಥರಿಗೆ ಆಗಿರುವ ಅನಾನುಕೂಲದ ಬಗ್ಗೆ ಮಾಹಿತಿ ನೀಡಿ ಸಮಸ್ಯೆ ನಿವಾರಣೆಗೆ ಮನವಿ ಮಾಡಿದ್ದಾರೆ.
ಮತ್ತೊಂದು ಕಡೆ ಹೋರಾಟಕ್ಕೆ ಸಿದ್ಧವಾಗಿರುವ ಗ್ರಾಮಸ್ಥರು ಗ್ರಾಮದ ಶಿವಬಸವೇಶ್ವರ ದೇವಾಲಯದ ಆವರಣದಲ್ಲಿ ಗ್ರಾಮ ದೇವಾಲಯ ಟ್ರಸ್ಟ್ ಅಧ್ಯಕ್ಷ ಕೆ.ಎಂ. ಗಣೇಶ್ ನೇತೃತ್ವದಲ್ಲಿ ಸಭೆ ನಡೆಸಿ ಮುಂದಿನ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಿದ್ದಾರೆ. ಜಿಲ್ಲೆಯ ಜನರಿಗೆ ಮಾರಕವಾಗಿದ್ದು, ನೆರೆ ಜಿಲ್ಲೆಯ ಲಕ್ಷಾಂತರ ರೈತರಿಗೆ ಸಂಜೀವಿನಿಯಾಗಿರುವ ಹಾರಂಗಿ ಅಣೆಕಟ್ಟೆಯ ನೀರು ಸಂಗ್ರಹಕ್ಕೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಕಳೆದುಕೊಂಡ ನಮಗೆ ಸರ್ಕಾರ ಮಾಡುತ್ತಿರುವ ಅನ್ಯಾಯವನ್ನು ಖಂಡಿಸಿ ರಸ್ತೆಗಿಳಿದು ಉಗ್ರ ಹೋರಾಟ ರೂಪಿಸಲೇ ಬೇಕೆಂದು ಗ್ರಾಮಸ್ಥರು ಈ ಸಂದರ್ಭ ಒಕ್ಕೊರಲ ತೀರ್ಮಾನ ಕೈಗೊಂಡಿದ್ದಾರೆ.
ಪುನರ್ವಸತಿ ಪ್ರದೇಶ ಯಡವನಾಡು ಗ್ರಾಮಸ್ಥರಿಗೆ ಸರ್ಕಾರದಿಂದ ಘೋರ ಅನ್ಯಾಯ ಆಗಿದೆ ಎಂದು ಆರೋಪಿಸಿದರುವ ಗ್ರಾಮಸ್ಥರು ಗ್ರಾಮ ದೇವಾಲಯ ಸಮಿತಿ ಅಧ್ಯಕ್ಷ ಗಣೇಶ್ ನೇತೃತ್ವದಲ್ಲಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಧುಮುಕುವುದಾಗಿ ಪ್ರಕಟಿಸಿದ್ದಾರೆ. ಜಿಲ್ಲಾಧಿಕಾರಿ ಮತ್ತು ಸರ್ಕಾರದ ಪ್ರತಿನಿಧಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಬೇಕು. ಇಲ್ಲಿನ ಸ್ಥಿತಿ ಗತಿಗಳನ್ನು ಪರಿಶೀಲಿಸಿ ಸರ್ಕಾರ ಹಾಗೂ ನ್ಯಾಯಾಲಯಕ್ಕೆ ವಾಸ್ತವ ವರದಿ ಸಲ್ಲಿಸುವ ಮೂಲಕ ಗ್ರಾಮಸ್ಥರಿಗೆ ಎದುರಾಗಿರುವ ಸಂಕಷ್ಟಗಳನ್ನು ಪರಿಹರಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.