ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸೋಮವಾರಪೇಟೆ ತಾಲೂಕಿನ ಕೂಡಿಗೆ ವಲಯ ಮತ್ತು ತೊರೆನೂರು ಸರ್ಕಾರಿ ಪ್ರೌಢ ಶಾಲೆ ಸಂಯುಕ್ತಾಶ್ರಯದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೃಷ್ಣೇಗೌಡ ಉದ್ಘಾಟಿಸಿದರು. ಡಾ. ಜಮೀರ್ ಅಹಮದ್, ಸತ್ಯನಾರಾಯಣ, ಯತೀಶ್ ಮತ್ತಿತರರು ಇದ್ದರು.
ದುಶ್ಚಟಗಳಿಂದ ದೂರವಿದ್ದರೆ ಸಮಾಜದಲ್ಲಿ ಗೌರವಯುತವಾಗಿ ಜೀವಿಸಲು ಸಾಧ್ಯ ಎಂಬುದನ್ನು ಇಂದಿನ ಯುವ ಪೀಳಿಗೆ ಅರಿತುಕೊಳ್ಳಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸೋಮವಾರಪೇಟೆ ತಾಲೂಕಿನ ಕೂಡಿಗೆ ವಲಯ ಮತ್ತು ತೊರೆನೂರು ಸರ್ಕಾರಿ ಪ್ರೌಢ ಶಾಲೆ ಸಂಯುಕ್ತಾಶ್ರಯದಲ್ಲಿ ಶಾಲೆಯಲ್ಲಿ ಶುಕ್ರವಾರ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಭಾರತೀಯ ಪರಂಪರೆ, ಸಂಸ್ಕೃತಿಯ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದ್ದು, ಉತ್ತಮ ಆರೋಗ್ಯ, ಉತ್ತಮ ಪರಿಸರ, ಮಾನವೀಯ ಮೌಲ್ಯಗಳನ್ನು ಹೊಂದುವುದು ಸ್ವಸ್ಥ ಸಮಾಜದ ಬಹುಮುಖ್ಯ ಭಾಗವಾಗಿದೆ. ನಮ್ಮ ಕುಟುಂಬ ಮತ್ತು ಸಮಾಜಕ್ಕೆ ಹಾನಿ ಮಾಡುವ ಅಭ್ಯಾಸಗಳ ಬಗ್ಗೆ ಅರಿವು ಇರಬೇಕು. ಮಾದಕ ವಸ್ತುಗಳ ವ್ಯಸನ ನಮ್ಮನ್ನು ದಾಸ್ಯರನ್ನಾಗಿ ಮಾಡುವುದಷ್ಟೇ ಅಲ್ಲದೇ ನಮ್ಮ ಅಮೂಲ್ಯವಾದ ಬದುಕನ್ನು ಕಸಿದುಕೊಳ್ಳುತ್ತದೆ. ದುಶ್ಚಟಗಳಿಂದ ಮುಕ್ತರಾಗಿ ಸಮಾಜದಲ್ಲಿ ಗೌರವಯುತ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೃಷ್ಣೇಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದು, ಶಾಲಾ ಮಕ್ಕಳಿಗೆ ದುಶ್ಚಟಗಳ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. ಮಕ್ಕಳಿಗೆ ತಮ್ಮ ಕುಟುಂಬದ ವಾತಾವರಣದಿಂದಲೇ ಉತ್ತಮ ಪರಿಸರ, ಒಳ್ಳೆಯ ಗುಣ ನಡತೆಯನ್ನು ನೀಡಲಾಗುತ್ತದೆ. ಸಮಾಜದ ಉತ್ತಮ ಪ್ರಜೆಗಳಾಗಬೇಕಾದರೆ ಮಾದಕ ವಸ್ತುಗಳಿಗೆ ಒಳಗಾಗಬಾರದು ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಲಯದ ಮೇಲ್ವಿಚಾರಕ ಯತೀಶ್ , ಶಿಕ್ಷಕರುಗಳಾದ ಟಿ.ಬಿ. ಮಂಜುನಾಥ, ಶ್ರೀಹರ್ಷ, ಸೇವಾಪ್ರತಿನಿಧಿಗಳಾದ ನಾಗವೇಣಿ ಮತ್ತು ಸುಮಲತಾ, ಒಕ್ಕೂಟದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.