ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ವತಿಯಿಂದ ನಡೆದ 10ನೇ ವರ್ಷದ ರಾಜ್ಯಮಟ್ಟದ ಮೊಗೇರ ಕ್ರೀಡಾಕೂಟದ ಕ್ರಿಕೆಟ್‌ನ ಫೈನಲ್ ಪಂದ್ಯಾಟ ಉದ್ಘಾಟಿಸಿದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಆಟಗಾರರನ್ನು ಪರಿಚಯಿಸಿಕೊಂಡರು. ಸೂರಜ್ ಹೊಸೂರು, ಅಪ್ರುರವೀಂದ್ರ ಮತ್ತಿತರರು ಇದ್ದರು. 
ಕೊಡಗು

ಮಡಿಕೇರಿಯಲ್ಲಿ ರಾಜ್ಯಮಟ್ಟದ ಮೊಗೇರ ಕ್ರೀಡಾಕೂಟ

ಮಡಿಕೇರಿ:
ಈ ನಾಡು, ದೇಶ ಕಟ್ಟಲು ಕೊಡುಗೆ ನೀಡಿರುವ ಮೊಗೇರ ಸಮುದಾಯವನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ವತಿಯಿಂದ ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 10ನೇ ವರ್ಷದ ರಾಜ್ಯಮಟ್ಟದ ಮೊಗೇರ ಕ್ರೀಡಾಕೂಟದ ಕ್ರಿಕೆಟ್‌ನ ಫೈನಲ್ ಪಂದ್ಯಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಮೊಗೇರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು. ಈಗಾಗಲೇ ಹಲವು ಸಣ್ಣ ಸಣ್ಣ ಸಮುದಾಯಗಳ ಭವನ ನಿರ್ಮಾಣಕ್ಕೆ ಸಹಕಾರ ನೀಡಲಾಗಿದೆ. ಆದರೆ, ಕೇವಲ ಮಾತಿನಿಂದ ಏನೂ ಆಗುವುದಿಲ್ಲ. ಸಮಾಜದ ಪ್ರಮುಖರು ವ್ಯವಸ್ಥಿತವಾದ ಯೋಜನೆ ರೂಪಿಸಿದಲ್ಲಿ ಭವನ ನಿರ್ಮಾಣಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದರು.
ಮೊಗೇರ ಸಮಾಜದವರಿಗೆ ನಿವೇಶನ ನೀಡಬೇಕು ಎಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಎ.ಎಸ್. ಪೊನ್ನಣ್ಣ, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ಎರಡರಿಂದ ಎರಡೂವರೆ ಸಾವಿರ ನಿವೇಶನವನ್ನು ಬಡವರಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಮೇ ಅಂತ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವತಃ ಇಲ್ಲಿಗೆ ಬಂದು ವಿತರಣೆ ಮಾಡಲಿದ್ದಾರೆ. ಅಷ್ಟರ ಒಳಗೆ ಮೊಗೇರ ಸಮಾಜದವರ ಹೆಸರುಗಳು ನಿವೇಶನರಹಿತರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದರೆ ಸಮಾಜದ ಮುಖಂಡರು ಸೇರ್ಪಡೆ ಮಾಡಿ ಎಂದು ಸಲಹೆ ನೀಡಿದರು.
ಬೇಸಿಗೆ ಬಂತೆAದರೆ ಕೊಡಗಿನಲ್ಲಿ ಎಲ್ಲೆಡೆ ಕ್ರೀಡಾ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಎಲ್ಲ ಮೈದಾನಗಳಲ್ಲೂ ಕ್ರೀಡಾ ಚಟುವಟಿಕೆಗಳು ನಡೆಯುತ್ತವೆ. ಅಬಾಲವೃದ್ಧರಾಗಿ ಎಲ್ಲರೂ ಇದರಲ್ಲಿ ಭಾಗಿಯಾಗುತ್ತಾರೆ. ಮೊಗೇರ ಸಮಾಜದವರೂ ಕ್ರೀಡಾಕೂಟ ನಡೆಸುತ್ತಿರುವುದು ಖುಷಿ ತಂದಿದೆ.
ಒAದು ಸಂಘಟನೆ ಕಟ್ಟಿ ಬೆಳೆಸಿ, ಕಾರ್ಯಕ್ರಮ ಆಯೋಜಿಸುವುದು ಅಷ್ಟು ಸುಲಭದ ಮಾತಲ್ಲ. ಇದರ ಹಿಂದೆ ಅನೇಕರ ಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನ ಇದೆ. ಅವರನ್ನೆಲ್ಲ ಈ ವೇಳೆ ಸ್ಮರಿಸಬೇಕು ಎಂದರು.
ಇದಕ್ಕೂ ಮುನ್ನ ಕ್ರಿಕೆಟ್ ಪಂದ್ಯದ ಫೈನಲ್ ಪಂದ್ಯವನ್ನು ಬ್ಯಾಟ್ ಬೀಸುವ ಮೂಲಕ ಉದ್ಘಾಟಿಸಿದರು. ಮುಖಂಡರಾದ ಅಪ್ರು ರವೀಂದ್ರ, ಎಡಿಕೇರಿ ಪ್ರಸನ್ನ, ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಪಿ.ಬಿ. ಜನಾರ್ದನ, ಸಮಾಜದ ಕ್ರೀಡಾಧ್ಯಕ್ಷ ಎಂ.ಜಿ. ಚಂದ್ರ, ಸಂಘದ ಜಿಲ್ಲಾ ಗೌರವ ಸಲಹೆಗಾರ ಪಿ.ಎಂ. ರವಿ ಇದ್ದರು.
ಕೊಡಗು, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಈ ಕ್ರೀಡಾಕುಟದಲ್ಲಿ ಭಾಗವಹಿಸಿದ್ದರು. ಮೊದಲ ದಿನ ನಡೆದ ಕ್ರಿಕೆಟ್ ಪಂದ್ಯಗಳಲ್ಲಿ 40ಕ್ಕೂ ಅಧಿಕ ತಂಡಗಳು ಸೆಣೆಸಾಡಿದವು. ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ 17 ತಂಡಗಳು ಭಾಗವಹಿಸಿದ್ದವು. ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ ಹಾಗೂ ಇತರೆ ಕ್ರೀಡೆಗಳು ನಡೆದವು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.