ವಿರಾಜಪೇಟೆ ಕಾವೇರಿ ಕಾಲೇಜಿನಿಂದ ಆಯೋಜಿಸಿರುವ ರಾಜ್ಯ ಮಟ್ಟದ 5 ಎ ಸೈಡ್ ರಿಂಕ್ ಹಾಕಿ ಪಂದ್ಯಾವಳಿಯ ಪೋಸ್ಟರ್ ಅನ್ನು ಬೆನೆಡಿಕ್ಟ್ ಆರ್.ಸಲ್ಡಾನ ಬಿಡುಗಡೆ ಮಾಡಿದರು. ತಮ್ಮಯ್ಯ, ನಿರೂಪ್ ನಾಣಯ್ಯ , ನಾಚಪ್ಪ ಇದ್ದರು.
ವಿರಾಜಪೇಟೆ: ವಿರಾಜಪೇಟೆ ಕಾವೇರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ವತಿಯಿಂದ ಇದೇ ಮೊದಲ ಬಾರಿಗೆ ರಿಂಕ್ 5 ಎ ಸೈಡ್ ರಾಜ್ಯ ಮಟ್ಟದ ಅಂತರ ಕಾಲೇಜು ಹಾಕಿ ಪಂದ್ಯಾವಳಿಯನ್ನು ಫೆ.20 ಮತ್ತು 21 ರಂದು ಆಯೋಜಿಸಲಾಗಿದೆ ಎಂದು ಕಾವೇರಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ಡಾನ ಮಾಹಿತಿ ನೀಡಿದರು.
ಪದವಿ ಮಟ್ಟದ ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ ಅಂತರ ಕಾಲೇಜು 5 ಎ ಸೈಡ್ ರಿಂಕ್ ಹಾಕಿ ಪಂದ್ಯಾವಳಿಯನ್ನು ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ತಮ್ಮಯ್ಯ ಮಾತನಾಡಿ, ಸುಮಾರು 20ರಿಂದ 25 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ವಿಜೇತ ತಂಡಗಳಿಗೆ ಆಕರ್ಷಕ ಪಾರಿತೋಷಕ ಹಾಗೂ ನಗದು ಬಹುಮಾನ ನೀಡಲಾಗುತ್ತದೆ. ಇದರೊಂದಿಗೆ ಶಿಸ್ತು ಬದ್ಧ ತಂಡ, ವಿವಿಧ ವೈಯಕ್ತಿಕ ಬಹುಮಾನ ನೀಡಲಾಗುತ್ತದೆ ಎಂದರು. ಕಾಲೇಜಿನ ವಿದ್ಯಾರ್ಥಿ ಪರಿಷತ್ತಿನ ಉಪಾಧ್ಯಕ್ಷ ನಿರೂಪ್ ನಾಣಯ್ಯ, ಕ್ರೀಡಾ ಕಾರ್ಯದರ್ಶಿ ನಾಚಪ್ಪ ಉಪಸ್ಥಿತರಿದ್ದರು.