ಶ್ರೀರಾಮಮಂದಿರ 
ಕೊಡಗು

28ರ ವರೆಗೆ ಶ್ರೀರಾಮೋತ್ಸವ ಕಾರ್ಯಕ್ರಮ

ಎಂ.ರವಿ
ಶನಿವಾರಸಂತೆ: ಶ್ರೀರಾಮನವಮಿ ಪ್ರಯುಕ್ತ ಶನಿವಾರಸಂತೆಯ ಶ್ರೀರಾಮ ಮಂದಿರದಲ್ಲಿ ಗುರುವಾರ (ಮಾ.18)ದಿಂದ ಮಾ. 28ರವರೆಗೆ ಪ್ರತಿದಿನ ಬೆಳಗ್ಗೆ 8.30 ರಿಂದ 10.30 ಗಂಟೆವರೆಗೆ ಮತ್ತು ಸಂಜೆ 6.30 ರಿಂದ ರಾತ್ರಿ 8.30 ಗಂಟೆವರೆಗೆ ವಿಶೇಷ ಪೂಜಾ ಕಾರ್ಯಗಳು ಜರುಗುತ್ತವೆ ಮತ್ತು 28 ರಂದು ಹನುಮಂತುತ್ಸವವನ್ನು ನಡೆಸಲಾಗುತ್ತದೆ ಎಂದು ಶ್ರೀರಾಮಮಂದಿರ ಸಮಿತಿ ತಿಳಿಸಿದೆ.
ಯುಗಾದಿ ಹಬ್ಬದ ಪ್ರಯುಕ್ತ ಗುರುವಾರ ಶ್ರೀರಾಮಮಂದಿರದಲ್ಲಿ ದೇವರಿಗೆ ಹಳದಿ ವಸ್ತ್ರ ಅಲಂಕಾರ, ಸಂಜೆ ಹೊಸವರ್ಷದ ಪ್ರಯುಕ್ತ ಪಂಚಾಂಗ ಶ್ರವಣ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯುತ್ತದೆ. 20 ರಂದು ಶುಕ್ರವಾರ ಬಿಳಿ ವಸ್ತ್ರ ಅಲಂಕಾರ, ಸಂಜೆ ವಿಷ್ಣು ಸಹಸ್ರನಾಮ ಪಠಣ, 21 ರಂದು ಶನಿವಾರ ಕೇಸರಿ ವಸ್ತ್ರ ಅಲಂಕಾರ, ರಾಮ ಭಜನೆ, ಹುನುಮಾನ್ ಚಾಲಿಸ್ ನಡೆಯುತ್ತದೆ. 22ರಂದು ಭಾನುವಾರ ಗಂಧ ಅಲಂಕಾರ, ಭಗವದ್ಗೀತೆ ಪಾರಾಯಣ, ರಸಪ್ರಶ್ನೆ ಕಾರ್ಯಕ್ರಮ ನಡೆಯುತ್ತದೆ. 23 ರಂದು ಸೋಮವಾರ ಬಿಲ್ವ ಅರ್ಚನೆ, ಮುತ್ತಿನ ಅಲಂಕಾರ, ಭಗವದ್ಗೀತೆ ಪಾರಾಯಣ, 24 ರಂದು ಮಂಗಳವಾರ ವಿಳ್ಯೆದೆಲೆ ಅಲಂಕಾರ, ಲಲಿತಾ ಸಹಸ್ರನಾಮ ನಡೆಯುತ್ತದೆ. 25 ರಂದು ಬುಧವಾರ ತುಳಸಿ ಅಲಂಕಾರ, ವಿಷ್ಣು ಸಹಸ್ರನಾಮ, 26 ರಂದು ಗುರುವಾರ ಪುಷ್ಪ ಅಲಂಕಾರ ಮತ್ತು ಭಜನೆ ನಡೆಯುತ್ತದೆ.
27 ರಂದು ಶುಕ್ರವಾರ ಶ್ರೀರಾಮನವಮಿ ಪ್ರಯುಕ್ತವಾಗಿ ಬೆಳಗ್ಗೆ 8 ಗಂಟೆಗೆ ದೇವರಿಗೆ ಫಲಪಂಚಾಮೃತ ಅಭಿಷೇಕ, ಪೂಜೆ, ಅಲಂಕಾರ, ವಿಷ್ಣು ಸಹಸ್ರನಾಮ, ರಾಮತಾರಕ ಹೋಮ, ಪೂರ್ಣಾಹುತಿ ನಡೆಯುತ್ತದೆ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯುತ್ತದೆ. ಮಧ್ಯಾಹ್ನ 3.30 ಗಂಟೆಗೆ ಶ್ರೀ ಸೀತಾಲಕ್ಷ್ಮಣ ಆಂಜನೇಯ ಸಹಿತ ಶ್ರೀ ರಾಮ ದೇವರ ಉತ್ಸವ ಮೂರ್ತಿಗಳನ್ನು ಅಡ್ಡ ಪಲ್ಲಕ್ಕಿಯಲ್ಲಿ ಇರಿಸಿ ವಾದ್ಯಗೋಷ್ಠಿಯೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆಯನ್ನು ನಡೆಸಲಾಗುತ್ತದೆ. ಸಂಜೆ 7.30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆಯೊಂದಿಗೆ ಶ್ರೀರಾಮೋತ್ಸವ ಸಂಪನ್ನಗೊಳ್ಳುತ್ತದೆ ಎಂದು ಪ್ರಕಟಣೆ ತಿಳಿಸಿದೆ.