ಸೋಮವಾರಪೇಟೆ ತಾಲೂಕಿನ ಐಗೂರು ಶ್ರೀ ಮುತ್ತಪ್ಪ ದೇವಾಲಯದಲ್ಲಿ ಪರಿವಾರ ದೈವಗಳ ಕೋಲ ಜರುಗಿತು.  
ಕೊಡಗು

ಶ್ರೀಮುತ್ತಪ್ಪ ಪರಿವಾರ ದೈವಗಳ ಕೋಲ

ಪ್ರಮುಖ ಮುಖ್ಯಾಂಶಗಳು

  • ಐಗೂರು ಗ್ರಾಮದಲ್ಲಿ ವೆಳ್ಳಾಟಂ ಸೇವೆ
ಸೋಮವಾರಪೇಟೆ: ತಾಲೂಕಿನ ಐಗೂರು ಗ್ರಾಮದ ಶ್ರೀ ಮುತ್ತಪ್ಪ ದೇವರ ಹಾಗೂ ಪರಿವಾರ ದೈವಗಳ ಕೋಲ ಮತ್ತು ವೆಳ್ಳಾಟಂ ಸೇವೆಗಳನ್ನು ಭಾನುವಾರ ಮತ್ತು ಸೋಮವಾರ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಭಾನುವಾರ ಗುಳಿಗಪ್ಪ ದೇವಾಲಯದಿಂದ ಹೊರಟ ಮೆರವಣಿಗೆ ಚಂಡೆ ಸದ್ದಿನೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಾತ್ರಿ ಶ್ರೀ ಮುತ್ತಪ್ಪನ್, ತಿರುವಪ್ಪನ್, ಕುಟ್ಟಿಚಾತನ್ ಹಾಗೂ ಗುಳಿಗನ್ ವೆಳ್ಳಾಟಂ ಸೇವೆಗಳು ಭಕ್ತಿಪೂರ್ವಕವಾಗಿ ನಡೆದವು. ಅನ್ನದಾನ ಪ್ರಸಾದವನ್ನು ಸಾವಿರಾರು ಭಕ್ತರು ಸ್ವೀಕರಿಸಿದರು.
ಉತ್ಸವದ ಎರಡನೇ ದಿನವಾದ ಸೋಮವಾರ ಮುಂಜಾನೆಯಿಂದಲೇ ವಿವಿಧ ದೈವಗಳ ಕೋಲ ಸೇವೆಗಳು ನಡೆದವು. ಬೆಳಗ್ಗೆ 3 ಗಂಟೆಗೆ ಗುಳಿಗನ ಕೋಲ ನಡೆದರೆ, ಬಳಿಕ ಸೂರ್ಯೋದಯದ ವೇಳೆಗೆ ಶ್ರೀ ಮುತ್ತಪ್ಪ ದೇವರ ಕೋಲ, ತಿರುವಪ್ಪನ್ ಕೋಲ ಹಾಗೂ ಕುಟ್ಟಿಚಾತನ್ ಕೋಲಗಳು ಸಂಪ್ರದಾಯಬದ್ಧವಾಗಿ ನೆರವೇರಿದವು. ದೈವಗಳ ನರ್ತನ ಹಾಗೂ ಆಶೀರ್ವಾದ ಪಡೆಯಲು ಭಕ್ತರು ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂತು.
ನಂತರ ನಡೆದ ಪೋದಿ ಕೋಲ ಹಾಗೂ ಗುರು ಶ್ರೀ ತರ್ಪಣ ಕಾರ್ಯಕ್ರಮದೊಂದಿಗೆ ಉತ್ಸವ ಸಂಪನ್ನವಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಸಿ.ಎಸ್. ಮಹೇಶ್, ಕಾರ್ಯದರ್ಶಿ ಟಿ.ಆರ್. ವಿಜಯ್, ಉತ್ಸವ ಸಮಿತಿ ಅಧ್ಯಕ್ಷ ಎನ್.ಕೆ.ಮಣಿಕಂಠ ಇತರರು ಇದ್ದರು.