ಬಲ್ಲಮಾವಟಿ ಭಗವತಿ ದೇವಾಲಯದ ಶ್ರೀ ದೇವಿಯ ಮರು ಪ್ರತಿಷ್ಠಾಪನೆ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಅಂಗವಾಗಿ ದೇವರ ನೃತ್ಯಬಲಿ ಜರುಗಿತು.
ನಾಪೋಕ್ಲು: ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮದ ಭಗವತಿ ದೇವಾಲಯದ ಶ್ರೀ ದೇವಿಯ ಮರುಪ್ರತಿಷ್ಠಾಪನೆ, ಅಷ್ಟಬಂಧಬ್ರಹ್ಮ ಕಲಶ ಹಾಗೂ ವಾರ್ಷಿಕೋತ್ಸವ ದಿವಾಕರ ಭಟ್ ತಂತ್ರಿಗಳ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.
ಪ್ರತಿಷ್ಠಾಪನಾ ಅಂಗವಾಗಿ ವಿವಿಧ ದೇವತಾ ಕಾರ್ಯ ಶುಕ್ರವಾರದಿಂದ ಆರಂಭಗೊಂಡಿದ್ದು, ದೇವಿಯ ಪ್ರತಿಷ್ಠಾಪನೆ, ಎತ್ತುಪೋರಾಟ, ದೇವರ ನೃತ್ಯ ಬಲಿ ಹಾಗೂ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಅಧಿಕ ಸಂಖ್ಯೆಯ ಭಕ್ತರು ವಾರ್ಷಿಕ ಉತ್ಸವದಲ್ಲಿ ಪಾಲ್ಗೊಂಡಿದ್ದರು. ದಾನಿ ಸರೋಜಮ್ಮ ಅವರಿಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಶನಿವಾರ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ದೇವಿಯ ಅವಬೃತ ಸ್ನಾನ, ನೃತ್ಯ ಬಲಿ ಹಾಗೂ ಮಹಾಪೂಜೆ ದೇವತಾ ಕಾರ್ಯ ನಡೆದವು.
ಈ ಸಂದರ್ಭ ಕಾಫಿ ಬೆಳೆಗಾರ ಬೊಟ್ಟೋಳಂಡ ದೇವಿ ದೇವಯ್ಯ ಅವರಿಂದ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಭಾನುವಾರ ದೇವಿಯ ಶುದ್ಧ ಕಲಶದೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.
ದೇವಾಲಯದ ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು, ಪ್ರತಿಷ್ಠಾಪನ ಕಾರ್ಯಕ್ರಮಗಳನ್ನು ನೆರವೇರಿಸಿದರು. ಉತ್ಸವದಲ್ಲಿ ಊರಿನ ಹಾಗೂ ಪರ ಊರಿನ ಭಕ್ತರು ಭಾಗವಹಿಸಿದ್ದರು.