ಸಿದ್ದಾಪುರ: ಇಲ್ಲಿನ ಶ್ರೀ ಮುತ್ತಪ್ಪ ದೇವಾಲಯದ 51ನೇ ವರ್ಷದ ಹಾಗೂ ಶ್ರೀ ಭಗವತಿ ದೇವಾಲಯದ 25ನೇ ವಾರ್ಷಿಕೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಭಕ್ತಿಭಾವಪೂರ್ಣವಾಗಿ ನೆರವೇರಿತು.
ಐದು ದಿನಗಳ ಕಾಲ ಆಯೋಜಿಸಿದ್ದ ಮಹೋತ್ಸವದಲ್ಲಿ ಗಣಪತಿ ಹೋಮ, ಚಂಡಿಕಾ ಹೋಮ, ದುರ್ಗಾ ಪೂಜೆ, ಆಶ್ಲೇಷಾ ಬಲಿ, ನಾಗಹೋಮ ಸೇರಿದಂತೆ ಅನೇಕ ಪೂಜಾ ವಿಧಿಗಳು ಸಂಭ್ರಮದಿಂದ ನಡೆದವು.
ಮುತ್ತಪ್ಪನ್ ತೆರೆ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವರ ಆಶೀರ್ವಾದ ಪಡೆದು ಪುನೀತರಾದರು. ಈ ಬಾರಿ ಭಕ್ತರ ಹರಕೆಯ ಏಳು ವಸೂರಿ ಮಾಲ ಕೋಲವು ಕೊಡಗಿನ ಪುಣ್ಯನದಿ ಕಾವೇರಿಯಿಂದ ಪಟ್ಟಣ ಪ್ರವೇಶಿಸಿದ ವೇಳೆ ಭಕ್ತರು ನಡುರಾತ್ರಿವರೆಗೆ ಕಾದು ಭಕ್ತಿಭಾವದಿಂದ ಬರಮಾಡಿಕೊಂಡರು.
ವರ್ಷಂಪ್ರತಿ ನಡೆಯುವ ಮುತ್ತಪ್ಪನ, ತಿರುವಪ್ಪ, ಶಾಸ್ತಪ್ಪ, ಗುಳಿಗ, ಭಗವತಿ, ವಿಷ್ಣುಮೂರ್ತಿ ಹಾಗೂ ವಸೂರಿ ಮಾಲ ತೆರೆಗಳನ್ನು ಭಕ್ತರು ಕಣ್ತುಂಬಿಕೊಂಡರು. ವಾರ್ಷಿಕೋತ್ಸವದ ಅಂಗವಾಗಿ ನೆಲ್ಯಹುದಿಕೇರಿ ರಿಪ್ಲೆಕ್ಸನ್ ನೃತ್ಯಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಭರತನಾಟ್ಯ ಪ್ರದರ್ಶನ ಭಕ್ತರ ಗಮನ ಸೆಳೆಯಿತು.
ಒಟ್ಟಾರೆ ಧಾರ್ಮಿಕ ವೈಭವ, ಸಂಸ್ಕೃತಿ ಮತ್ತು ಭಕ್ತಿಭಾವದ ಸಂಯೋಜನೆಯಾಗಿ ವಾರ್ಷಿಕೋತ್ಸವ ಯಶಸ್ವಿಯಾಗಿ ಸಮಾಪ್ತಿಯಾಯಿತು.