ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯ ವೇಷಭೂಷಣಗಳಲ್ಲಿ ಕಂಗೊಳಿಸಿದರು.
ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ಪ್ಲೇಹೋಮ್, ಕಿಂಡರ್‌ಗಾರ್ಟನ್ ಹಾಗೂ 1ನೇ ತರಗತಿಯ ಪುಟಾಣಿ ಮಕ್ಕಳು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬುಧವಾರ ಸಡಗರದಿಂದ ಆಚರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತ ಮುಖ್ಯಸ್ಥರಾದ ಪಿ. ರವಿ ಹಾಗೂ ಸಂಯೋಜಕಿ ಕೆ.ಕೆ. ಭಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ಲೇಹೋಮ್‌ನಿಂದ 1ನೇ ತರಗತಿಯವರೆಗಿನ ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯ ವೇಷಭೂಷಣಗಳಲ್ಲಿ ಕಂಗೊಳಿಸಿ, ನೃತ್ಯ, ರ‍್ಯಾಂಪ್ ವಾಕ್ ಹಾಗೂ ಶ್ರೀಕೃಷ್ಣನ ಕುರಿತಾದ ಸುಮಧುರ ಗೀತೆಗಳ ಮೂಲಕ ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಕಾಳಿಂಗ ಮರ್ಧನದ ನೃತ್ಯ ಹಾಗೂ ಭಕ್ತ ಕನಕದಾಸರ ಕನಕನ ಕಿಂಡಿ ಕುರಿತ ನಾಟಕವನ್ನು ಮಕ್ಕಳು ಮನೋಜ್ಞವಾಗಿ ಪ್ರದರ್ಶಿಸಿದರು. ಮುಖ್ಯ ಅತಿಥಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಮಕ್ಕಳ ಪ್ರತಿಭೆಯನ್ನು ಶ್ಲಾಘಿಸಿ, ಶ್ರೀಕೃಷ್ಣ ಜನ್ಮಾಷ್ಟಮಿಯ ಮಹತ್ವ ಹಾಗೂ ಶ್ರೀಕೃಷ್ಣನ ಜೀವನ ಸಂದೇಶಗಳನ್ನು ವಿವರಿಸಿದರು.
ವಿದ್ಯಾರ್ಥಿಗಳಾದ ಗ್ರಹಿತ್, ಯುಧ್ವಿತಾ ಹಾಗೂ ಮೋಕ್ಷ್, ಶ್ಲೋಕ ಪಠಣದ ಮೂಲಕ ಗಮನ ಸೆಳೆದರು. ವಿದ್ಯಾರ್ಥಿಗಳಾದ ಸಿ. ಜಾನ್ವಿ, ಕೆ.ಎಸ್. ಸಮವೇದ್, ರಿಯಾ ಜೈನ್ ಶ್ರೀಕೃಷ್ಣ ಜನ್ಮಾಷ್ಟಮಿಯ ಮಹತ್ವ ಕುರಿತು ಮಾತನಾಡಿದರು. ಶಮಿಕ್ ಇಬ್ರಾಹಿಂ, ರಾಜೇಶ್ವರಿ ಎಂ. ಬಿನಿಷಾ ಬೋಪಣ್ಣ ಮತ್ತಿತರರು ಇದ್ದರು.