ಬಾಣಂತಮ್ಮ ಜಾತ್ರೋತ್ಸವಕ್ಕೆ ಭೇಟಿ ನೀಡಿದ ಸಂಸದ ಯದುವೀರ್ ಒಡೆಯರ್ ಮಾತು. ಎಸ್‌ಎಸ್23ಕುಮಾರಲಿಂಗೇಶ್ವರ ಸ್ವಾಮಿ ಅಡ್ಡಪಲ್ಲಕಿ ಮೆರವಣಿಗೆ. 
ಕೊಡಗು

ಶ್ರೀ ಬಾಣಂತಮ್ಮ ಜಾತ್ರಾ ಮಹೋತ್ಸವ ಸಂಪನ್ನ

ಶನಿವಾರಸಂತೆ: ಸಮಿಪದ ಬ್ಯಾಡಗೊಟ್ಟ ಗ್ರಾ.ಪಂ.ಗೆ ಸೇರಿದ ಬೆಂಬಳೂರು ಗ್ರಾಮದ ಜಾನಪದ ಪ್ರಸಿದ್ಧ ಶ್ರೀ ಬಾಣಂತಮ್ಮ ಮತ್ತು ಪುತ್ರ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಶುಕ್ರವಾರ ಸಂಪನ್ನಗೊಂಡಿತ್ತು. ಬೆಂಬಳೂರು, ಶಿವರಳ್ಳಿ ಮತ್ತು ಊರುಗುತ್ತಿ ಗ್ರಾಮಸ್ಥರು ಸಂಕ್ರಾಂತಿ ಹಬ್ಬದ ಮರುದಿನ ಬೆಂಬಳೂರು ಬಾಣಂತಮ್ಮ ಮತ್ತು ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಬೆಳಗ್ಗೆ 7 ಗಂಟೆೆಗೆ 9 ಗಂಟೆವರೆಗೆ ಬೆಂಬಳೂರು ಗ್ರಾಮದ ಶ್ರೀ ಬಾಣಂತಮ್ಮ ದೇವಸ್ಥಾನದಲ್ಲಿ ಬಾಣಂತಮ್ಮ ತಾಯಿಗೆ ಮತ್ತು ಪುತ್ರ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜಾ ವಿಧಿ, ವಿಧಾನ ನೆರವೇರಿಸಲಾಯಿತು. ಬಳಿಕ ಶ್ರೀ ಬಾಣಂತಮ್ಮ ಮತ್ತು ಕುಮಾರಲಿಂಗೇಶ್ವರ ಸ್ವಾಮಿ ದೇವರನ್ನು ಅಡ್ಡಪಲ್ಲಕಿಯಲ್ಲಿ ಕೂರಿಸಿ ಗ್ರಾಮದ ಬೀದಿಗಳಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಲಾಯಿತು. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಗ್ರಾಮದ ಬಾಣಂತಮ್ಮ ಜಾತ್ರಾ ಮೈದಾನದಲ್ಲಿ ತಾಯಿ ಬಾಣಂತಮ್ಮ ಜಾತ್ರೆಯನ್ನು ನಡೆಸಲಾಯಿತು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ರವರೆಗೆ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮೈದಾನದಲ್ಲಿ ಪುತ್ರ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೆಯನ್ನು ನಡೆಸಲಾಯಿತು.
ಬಾಣಂತಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಹರಕೆ ಮಾಡಿಕೊಂಡಿದ್ದ ಮಹಿಳೆಯರು ಗ್ರಾಮದ ಬಾಣಂತಮ್ಮ ಕೆರೆಯಲ್ಲಿ ಬಾಗೀನ ಅರ್ಪಿಸಿದರು. ಜಾತ್ರಾ ಮಹೋತ್ಸವದಲ್ಲಿ ಅಕ್ಕಪಕ್ಕದ ಗ್ರಾಮಗಳು ಸೇರಿದಂತೆ ನೆರೆಯ ಜಿಲ್ಲೆಯ ವಿವಿಧ ಗ್ರಾಮಗಳಿಂದ ನೂರಾರು ಭಕ್ತರು ಬಂದು ಪಾಲ್ಗೊಂಡಿದ್ದರು.
ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್, ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಜಾತ್ರೆಯಲ್ಲಿ ಭಾಗವಹಿಸಿದ್ದರು. ಜಾತ್ರೋತ್ಸವ ಪ್ರಯುಕ್ತ ಮಹಿಳೆಯರಿಗೆ, ಮತ್ತು ಪುರಷರಿಗೆ ವಾಲಿಬಾಲ್, ಥ್ರೋಬಾಲ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು. ದೇವಸ್ಥಾನ ಸಮಿತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.