ಶ್ರೀ ಬಾಣಂತಮ್ಮ ದೇವಿ  
ಕೊಡಗು

ಶ್ರೀಬಾಣಂತಮ್ಮ ದೇವಿ ಜಾತ್ರಾ ಮಹೋತ್ಸವ ಇಂದಿನಿಂದ

ಶನಿವಾರಸಂತೆ: ಕೊಡ್ಲಿಪೇಟೆ ಹೋಬಳಿಗೆ ಸೇರಿದ ಬೆಂಬಳೂರು ಗ್ರಾಮದಲ್ಲಿರುವ ಐತಿಹಾಸಿಕ ಮತ್ತು ಜಾನಪದ ಹಿನ್ನೆಲೆಯ ಶ್ರೀ ಬಾಣಂತಮ್ಮ ದೇವಿ ಮತ್ತು ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಶುಕ್ರವಾರ ನಡೆಯಲಿದೆ. ಜಾತ್ರೋತ್ಸವಕ್ಕೆ ಬೆಂಬಳೂರು ಗ್ರಾಮದ ಶ್ರೀ ಕಲ್ಲೇಶ್ವರ ಸೇವಾ ಟ್ರಸ್ಟ್ ಸಿದ್ಧತೆ ಮಾಡಿಕೊಂಡಿದೆ.
ಬೆಂಬಳೂರು ಗ್ರಾಮಕ್ಕೆ ನಾನೂರು ವರ್ಷಗಳ ಇತಿಹಾಸ ಇದ್ದು, ಬೆಂಬಳೂರನ್ನು ಪಾಳೆಗಾರರು ಆಳ್ವಿಕೆ ಮಾಡಿರುವ ಬಗ್ಗೆ ಉಲ್ಲೇಖವಿದೆ. ಕೊಡಗಿನ ಕೊನೆಯ ರಾಜ ಚಿಕ್ಕವೀರ ರಾಜೇಂದ್ರ ಅವರ ಅಳ್ವಿಕೆ ಕಾಲದಲ್ಲಿ ಬೆಂಬಳೂರು ಗ್ರಾಮವನ್ನು ಪಾಳೆಗಾರರು ಆಳ್ವಿಕೆ ಮಾಡಲು ಬಿಟ್ಟುಕೊಟ್ಟಿರುವ ಬಗ್ಗೆಯೂ ಉಲ್ಲೇಖವಿದೆ. ನಾನೂರು ವರ್ಷಗಳ ಹಿಂದಿನಿಂದಲೂ ಗ್ರಾಮದ ಕುಲದೇವತೆ ಮತ್ತು ತಾಯಿ ಬಾಣಂತಮ್ಮದೇವಿ ಮತ್ತು ಆಕೆಯ ಕೊನೆಯ ಪುತ್ರ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರೆಯನ್ನು ಸಂಕ್ರಾಂತಿ ಹಬ್ಬದ ಮರುದಿನ ಅಂದರೆ ಜ.16 ರಂದು ನಡೆಸಿಕೊಂಡು ಬರುತ್ತಿದ್ದಾರೆ.
ಜಾನಪದ ಹಿನ್ನೆಲೆ: ಬೆಂಬಳೂರು ಬಾಣಂತಮ್ಮಳಿಗೆ ಒಟ್ಟು 7 ಮಂದಿ ಪುತ್ರರು ಕಾಲ ಕ್ರಮೇಣ 7 ಮಂದಿ ಪುತ್ರರಲ್ಲಿ 6 ಮಂದಿ ಪುತ್ರರು ಬೇರೆ ಬೇರೆ ಊರಿಗೆ ವಲಸೆ ಹೋಗುತ್ತಾರೆ. ಅಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪುತ್ರರ ಹೆಸರಿನಲ್ಲಿ ಈಗಲೂ ಜಾತ್ರೆಯನ್ನು ನಡೆಸುತ್ತಾರೆ. ಬಾಣಂತಮ್ಮಳ ಕೊನೆಯ ಪುತ್ರ ಕುಮಾರಲಿಂಗೇಶ್ವರನು ಉಳಿದ ಮಕ್ಕಳು ವಲಸೆ ಹೋದಂತೆ ಇವನು ಹೋಗಬಾರದು ತನ್ನ ಬಳಿಯಲ್ಲಿ ಇರಬೇಕೆಂಬ ಉದ್ದೇಶದಿಂದ ಪುತ್ರನ ಕಾಲು ಮುರಿದು ತನ್ನಲ್ಲಿ ಇರಿಸಿಕೊಳ್ಳುತ್ತಾಳೆ. ಹಾಗಾಗಿ ಕುಮಾರಲಿಂಗೇಶ್ವನಿಗೆ ಕುಂಟ ಕುಮಾರಲಿಂಗೇಶ್ವರ ಸ್ವಾಮಿ ಎಂದು ಕರೆಯುತ್ತಾರೆ. ಸಂಕ್ರಾಂತಿ ಹಬ್ಬದ ಮರುದಿನ ಬೆಳಗ್ಗೆ 7ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ತಾಯಿ ಬಾಣಂತಮ್ಮಳ ಜಾತ್ರೆಯನ್ನು ಬಾಣಂತಮ್ಮ ಜಾತ್ರಾ ಮೈದಾನದಲ್ಲೂ ಮತ್ತು ಮಧ್ಯಾಹ್ನ 1 ಗಂಟೆಯಿಂದ ಸಂಜೆ 5ರವರೆಗೂ ಕುಮಾರಲಿಂಗೇಶ್ವರ ಜಾತ್ರಾ ಮೈದಾನದಲ್ಲಿ ಪುತ್ರ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೆಯನ್ನು ನಡೆಸುತ್ತಾರೆ.
ಊರಿನಲ್ಲಿ ಬಾಣಂತಮ್ಮಳ ಹೆಸರಿನಲ್ಲಿ ಕೆರೆ ಇದ್ದು ಜಾತ್ರೆ ದಿನ ಈ ಕೆರೆಗೆ ಮಹಿಳೆಯರು ಬಾಗಿನ ಅರ್ಪಿಸುತ್ತಾರೆ. ಜಾತ್ರೆ ಪ್ರಯುಕ್ತ ಸಂಕ್ರಾಂತಿ ಹಬ್ಬದ ದಿನದಂದು ಕೆಲವು ಸಂಪ್ರದಾಯ ಕಾರ್ಯಗಳನ್ನು ನಡೆಸುತ್ತಾರೆ. ಜಾತ್ರೋತ್ಸವ ದಿನದಂದು ತಾಯಿ ಶ್ರೀ ಬಾಣಂತಮ್ಮ ಮತ್ತು ಪುತ್ರ ಶ್ರೀಕುಮಾರಲಿಂಗೇಶ್ವರ ದೇವರ ಮೂರ್ತಿಯನ್ನು ಸಾಂಪ್ರದಾಯಿಕ ವಾದ್ಯಗೋಷ್ಠಿಯೊಂದಿಗೆ ಜಾತ್ರಾ ಮೈದಾನಕ್ಕೆ ಅಡ್ಡ ಪಲ್ಲಕ್ಕಿಯೊಂದಿಗೆ ಮೆರವಣಿಗೆ ಸಾಗುತ್ತದೆ. ಜಾತ್ರೆಯಲ್ಲಿ ಶನಿವಾರಸಂತೆ, ಕೊಡ್ಲಿಪೇಟೆ, ಪಕ್ಕದ ಹಾಸನ ಜಿಲ್ಲೆಯ ಸಕಲೇಶಪುರ, ಯಸಳೂರು ಭಾಗದ ಭಕ್ತರು ಪಾಲ್ಗೊಳ್ಳುತ್ತಾರೆ.