ಆದಿ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಿ.ಜಿ.ಅನಂತಶಯನ, ಚಿ.ನಾ.ಸೋಮೇಶ್, ಬಿ.ಕೆ.ಜಗದೀಶ್ ಇತರರಿದ್ದರು. 
ಕೊಡಗು

ಶಂಕರಾಚಾರ್ಯರ ತತ್ವಗಳು ಸಮಾಜಕ್ಕೆ ಮಾರ್ಗದರ್ಶನ

ಆದರ್ಶ್. ಎಂ.ಕೆ.

ಪ್ರಮುಖ ಮುಖ್ಯಾಂಶಗಳು

  • ಶಂಕರಾಚಾರ್ಯರ ತತ್ವಗಳು ಸಮಾಜಕ್ಕೆ ಮಾರ್ಗದರ್ಶನ
  • ಶ್ರೀ ಆದಿ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅನಂತ ಶಯನ
ಮಡಿಕೇರಿ: ಆದಿ ಶಂಕರಾಚಾರ್ಯರು ೮ನೇ ಶತಮಾನದಲ್ಲಿ ಜನಿಸಿ ರಾಷ್ಟ್ರದಲ್ಲಿ ಅದ್ವೈತ ವೇದಾಂತ ಸಿದ್ಧಾಂತದ ಪ್ರವರ್ತಕರಾಗಿ ಬೆಳಕು ಚೆಲ್ಲಿದ್ದಾರೆ ಎಂದು ಕೊಡಗು ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಶ್ರೀ ಆದಿ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇರಳದ ಕಾಲಡಿಯಲ್ಲಿ ಶಿವಗುರು-ಆರ್ಯಾಂಬಾ ದಂಪತಿಯ ಪುತ್ರರಾಗಿ ಜನಿಸಿದ ಶಂಕರಾಚಾರ್ಯ ಅವರು, ಕೇವಲ ೩೨ ವರ್ಷಗಳ ಅಲ್ಪಾಯುಷ್ಯದಲ್ಲಿ ವೇದ ಉಪ ನಿಷತ್ತುಗಳಿಗೆ ಭಾಷ್ಯ ಬರೆದು ರಾಷ್ಟ್ರದದ್ಯಾಂತ ಸಂಚರಿಸಿ ಅದ್ವೈತ ತತ್ವವನ್ನು ಪ್ರಚಾರ ಮಾಡಿದ್ದಾರೆ ಎಂದು ಹೇಳಿದರು.
ಶಂಕರಾಚಾರ್ಯರು ೮ನೇ ವಯಸ್ಸಿನಲ್ಲಿಯೇ ವೇದಗಳನ್ನು ಅಧ್ಯಯನ ಮಾಡಿ ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದರು. ೮ನೇ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆ ಪಡೆದು ಗೋವಿಂದ ಭಗವತ್ಪಾದರ ಬಳಿ ಶಿಷ್ಯರಾಗಿ ಬೆಳೆದರು. ಅದ್ವೈತ ಸಿದ್ಧಾಂತದಲ್ಲಿ ಬ್ರಹ್ಮವೇ ಸತ್ಯ, ಆತ್ಮ ಮತ್ತು ಪರಮಾತ್ಮ ಬೇರೆಯಲ್ಲ ಎಂಬುದನ್ನು ಸಾರುತ್ತದೆ. ಭಗವತ್ ಗೀತೆ, ಉಪನಿಷತ್ತು ಮತ್ತು ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ಶಂಕರಾಚಾರ್ಯರು ಬರೆದಿದ್ದಾರೆ. ವಿವೇಕಚೂಡಾಮಣಿ, ಭಜಗೋವಿಂದಂ, ಸೌಂದರ್ಯ ಲಹರಿ ಮತ್ತು ಆತ್ಮಬೋಧ ಮತ್ತಿತರ ಕೃತಿಗಳನ್ನು ಶಂಕರಾಚಾರ್ಯರು ರಚಿಸಿದ್ದಾರೆ ಎಂದು ತಿಳಿಸಿದರು.
ಸನಾತನ ಧರ್ಮದ ಪ್ರಚಾರಕ್ಕಾಗಿ ಭಾರತದ ಪೂರ್ವಭಾಗದಲ್ಲಿ ಪುರಿ(ಗೋವರ್ಧನ ಪೀಠ), ಪಶ್ಚಿಮದಲ್ಲಿ ದ್ವಾರಕ(ಶಾರದ ಪೀಠ), ಉತ್ತರದಲ್ಲಿ ಬದರಿನಾಥ(ಜ್ಯೋರ್ತಿಪೀಠ), ದಕ್ಷಿಣದಲ್ಲಿ ಶೃಂಗೇರಿ(ಶಾರದ ಪೀಠ) ಸ್ಥಾಪಿಸಿದ್ದಾರೆ. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ ಷಣ್ಮತ ಸ್ಥಾಪಕರಾದರು ಎಂದು ಕೊಡಗು ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರು ವಿವರಿಸಿದರು.
ತಾಯಿ ಆರ್ಯಾಂಬಾ ಮತ್ತು ತಂದೆ ಶಿವಗುರುಗಳ ಪುತ್ರರಾದ ಶಂಕರರು ಬಾಲ್ಯದಲ್ಲೇ ಅದ್ಭುತ ಪ್ರತಿಭೆ ತೋರಿದರು. ಅವರು ಗುರುಕುಲದಲ್ಲಿದ್ದು ವಿದ್ಯಾಭ್ಯಾಸ ಮಾಡುವಾಗ ಭಿಕ್ಷಾಟನೆಯ ಸಂದರ್ಭದಲ್ಲಿ ಒಣಗಿದ ನೆಲ್ಲಿಕಾಯಿಯನ್ನು ಭಿಕ್ಷೆಯಾಗಿ ನೀಡಿದ ಬಡಗೃಹಿಣಿಯ ದಾರಿದ್ರ್ಯವನ್ನು ನೋಡಿ, ಆ ಸ್ಥಿತಿಯನ್ನು ಸಹಿಸಲಾಗದೇ ಮಹಾಲಕ್ಷ್ಮಿಯನ್ನು ಕನಕಧಾರಾಸ್ತ್ರೋತ್ರದ ಮೂಲಕ ಸ್ತುತಿಸಿ ನೆಲ್ಲಿಕಾಯಿಯ ಸುವರ್ಣ ವೃಷ್ಟಿಯಿಂದ ಆ ದಾರಿದ್ರ್ಯವನ್ನು ನಿವಾರಿಸಿದ ಮಹಿಮಾನ್ವಿತರು ಶ್ರೀಶಂಕರರು ಎಂದು ನುಡಿದರು.
ಶಂಕರಾಚಾರ್ಯರು ಸಮಾಜಕ್ಕೆ ನೀಡಿರುವ ಸಂದೇಶಗಳು ಮತ್ತು ತತ್ವಗಳನ್ನು ತಿಳಿದುಕೊಳ್ಳಬೇಕು. ಸಮಾಜ ನಿಂತಿರುವುದೇ ನಂಬಿಕೆ ಮತ್ತು ವಿಶ್ವಾಸದ ಮೇಲೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚಿಂತಕರಾದ ಚಿ.ನಾ.ಸೋಮೇಶ್ ಮಾತನಾಡಿ, ಶ್ರೀ ಶಂಕರಾಚಾರ್ಯರು ಸಂತ ಪರಂಪರೆಯ ಮೌಲ್ಯಗಳನ್ನು ಪುನರುತ್ಥಾನಗೊಳಿಸುವಲ್ಲಿ ಮತ್ತು ಅದ್ವೈತ ವೇದಾಂತದ ಮೂಲಕ ಸನಾತನ ಧರ್ಮದ ಮಹತ್ವ ಸಾರುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಕೊಡುಗೆಗಳು ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಇತಿಹಾಸದಲ್ಲಿ ಧ್ರುವನಕ್ಷತ್ರದಂತೆ ಎಂದು ವರ್ಣಿಸಿದರು.
ಶ್ರೀ ಶಂಕರಾಚಾರ್ಯರು ಅಕ್ಷರ ಜ್ಞಾನದಿಂದ ಎಲ್ಲವನ್ನು ಉಣಬಡಿಸಿದ್ದಾರೆ. ಅವರೊಬ್ಬ ದಾರ್ಶನಿಕರು, ತಮ್ಮ ಹಿರಿಮೆ, ಗರಿಮೆ, ಶ್ರೇ?್ಠತೆಯನ್ನು ಒಂದು ಚೌಕಟ್ಟಿನಲ್ಲಿ ನಿಲ್ಲಿಸಿದವರು, ತಮ್ಮ ಅದ್ವೈತ ಸಿದ್ಧಾಂತವನ್ನು ಪ್ರಸಾರ ಮಾಡಲು ಮತ್ತು ಸನಾತನ ಧರ್ಮವನ್ನು ರಕ್ಷಿಸಲು ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪ್ರಮುಖ ಮಠಗಳನ್ನು(ಆಶ್ರಮ) ಸ್ಥಾಪಿಸಿದರು. ಇವರ ಜ್ಞಾನ ಸುಧೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಶಂಕರಾಚಾರ್ಯರ ಜಯಂತಿ ಆಚರಣೆ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕಾರ್ಯದರ್ಶಿ ಬಿ.ಕೆ.ಜಗದೀಶ್, ಎಸ್.ಎಸ್.ಸಂಪತ್ ಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಎಂ.ಕೃ?್ಣಪ್ಪ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ವ್ಯವಸ್ಥಾಪಕರಾದ ಆಶಾ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸುನೀತ ಇತರರು ಇದ್ದರು.