ಕುಡಿಯಡ ಸಾಂಸ್ಕೃತಿಕ ನಮ್ಮೆ ಕಾರ್ಯಕ್ರಮವನ್ನು ಕುಯಿನಾಲಮಲೆ ಸೀತಮ್ಮ ಕರುಂಬಯ್ಯ ಅವರು ಉದ್ಘಾಟಿಸಿದರು. ಸಿ.ಮಹೇಶ್ ನಾಚಯ್ಯ, ಪಡಿಞಾರಂಡ ಜಿ.ಅಯ್ಯಪ್ಪ ಇತರರಿದ್ದರು.
- ಕುಡಿಯ ಜನಾಂಗದ ಆಚಾರ, ವಿಚಾರ ಪಸರಿಸಿ
- ಕುಡಿಯಡ ಸಾಂಸ್ಕೃತಿಕ ನಮ್ಮೆ ಕಾರ್ಯಕ್ರಮದಲ್ಲಿ ಮಹೇಶ್ ನಾಚಯ್ಯ
ಮಡಿಕೇರಿ: ಸಂಸ್ಕೃತಿ ಮತ್ತು ಸಂಸ್ಕಾರ ಮಿಳಿತಗೊಂಡಲ್ಲಿ ಮಾತ್ರ ಯಾವುದೇ ಒಂದು ಜನಾಂಗ ಬೌದ್ಧಿಕ ಪ್ರಗತಿ ಕಾಣಲು ಸಾಧ್ಯ. ಇಂತಿರುವಾಗ ಶೈಕ್ಷಣಿಕವಾಗಿ ಮುಂದುವರಿಯಬೇಕಾದದ್ದು ಪ್ರತಿಯೊಬ್ಬರ ಜೀವನ ಧರ್ಮ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ನಾಲ್‌ನಾಡ್ ಪೂಮಲೆ ಕುಡಿಯ ಸಾಂಸ್ಕೃತಿಕ ಸಮಿತಿಯ ಸಹಯೋಗದೊಂದಿಗೆ ಯವಕಪಾಡಿ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕುಡಿಯಡ ಸಾಂಸ್ಕೃತಿಕ ನಮ್ಮೆ-೨೦೨೬ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ದೇಶದಲ್ಲೇ ಕೊಡವ ಸಂಸ್ಕೃತಿ ವಿಶೇಷ-ವಿಭಿನ್ನವಾಗಿರುವುದಕ್ಕೆ ಈ ಜನಾಂಗವು ಸರ್ವ ಕ್ಷೇತ್ರಗಳಲ್ಲಿ ಮುಂದುವರೆದಿರುವುದು ಕಾರಣವಾಗಿದೆ. ಕೊಡವ ಭಾಷೆ-ಸಾಹಿತ್ಯ, ಸಂಸ್ಕೃತಿಯನ್ನು ಪರಿಪಾಲಿಸುತ್ತಿರುವ ಎಲ್ಲಾ ೨೩ ಜನಾಂಗಗಳು ಪ್ರಸ್ತುತ ಮುಂದುವರೆದಿರುವುದಕ್ಕೆ ಕೊಡವ ಸಂಸ್ಕೃತಿಯನ್ನು ಬಾಳಿನ ಬೆಳಕಾಗಿ ಕಾಣುತ್ತಿರುವುದು ಮುಖ್ಯ ಕಾರಣವಾಗಿದ್ದು, ಎಲ್ಲರೂ ಉತ್ತಮವಾದ ಸಂಸ್ಕಾರವನ್ನು ಹೊಂದಿರುವುದು ಮೂಲವಾಗಿದೆ ಎಂದರು.
ಕೊಡವ ಸಂಸ್ಕೃತಿಯು ಕೇವಲ ಒಂದು ಆಚರಣೆ ಮಾತ್ರ ಅಲ್ಲ. ಇದೊಂದು ಬದುಕಿನ ಪಥವಾಗಿದೆ. ಕೊಡವ ಸಂಸ್ಕೃತಿ ಪಾಲಿಸುತ್ತಿರುವ ಜನಾಂಗಗಳು ಎಲ್ಲಿಯೇ ಇದ್ದರೂ ತಮ್ಮ ಸಂಸ್ಕೃತಿ, ಸಾಹಿತ್ಯ ಹಾಗೂ ಭಾಷೆ ಮರೆತು ನಡೆಯಬಾರದೆಂದು ಕಿವಿಮಾತು ಹೇಳಿದರು.
ಕುಡಿಯ ಜನಾಂಗವು ಕೊಡಗಿನಲ್ಲಿ ಮಲೆ ಕುಡಿಯ ಅಥವಾ ಪೂಮಾಲೆ ಕುಡಿಯ ಎಂದು ಗುರುತಿಸಿಕೊಂಡಿದ್ದು ಕೊಡವ ಸಂಸ್ಕೃತಿ, ಭಾಷೆ, ಜಾನಪದಕ್ಕೆ ಅನಾದಿಕಾಲದಿಂದಲೇ ಕೊಡುಗೆ ನೀಡಿದೆ. ಮಲೆ ಕುಡಿಯವು ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಕೊಡವ ಆಚಾರ-ವಿಚಾರ, ಪದ್ಧತಿಯನ್ನು ತಮ್ಮ ಸಂಸ್ಕೃತಿಯಲ್ಲಿ ಅಳವಡಿಸಿಕೊಂಡು ಬರುತ್ತಿರುವುದೇ ಅಲ್ಲದೆ ಒಗ್ಗಟ್ಟಿನಲ್ಲಿ ಬದುಕು ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಸಂಸ್ಕೃತಿ ಎಂಬುದು ಜನಾಂಗ ವ್ಯವಸ್ಥೆ ಇರುವಲ್ಲಿ ಮಾತ್ರ ಉದಯಿಸಲು ಸಾಧ್ಯ. ಭಾಷೆ ಇದ್ದಲ್ಲಿ ಸಂಸ್ಕೃತಿ ಇರುತ್ತದೆ. ಸಂಸ್ಕೃತಿ ಇದ್ದಲ್ಲಿ ಸಂಸ್ಕಾರ ಇರುತ್ತದೆ. ಕೊಡಗಿನಲ್ಲಿರುವ ಎಲ್ಲಾ ಮೂಲ ನಿವಾಸಿಗಳು ಅತಿಥಿ ದೇವೋಭವ ಎಂಬುವುದನ್ನು ಪಾಲಿಸುತ್ತಾ ಬಂದಿದೆ. ನಡಿಕೇರಿಯಂಡ ಚಿಣ್ಣಪ್ಪನವರು ಬರೆದ ಪಟ್ಟೋಲೆ ಪಳಮೆ ಎಂಬ ಗ್ರಂಥವು ಜನಾಂಗ, ಸಂಸ್ಕೃತಿ, ಭಾಷೆಯನ್ನು ಅಜರಾಮರವಾಗಿರಿಸಿದೆ ಎಂದು ಮಹೇಶ್ ನಾಚಯ್ಯ ವಿವರಿಸಿದರು.
ಕಾರ್ಯಕ್ರಮವನ್ನು ತೊಂಬತ್ತರ ಹರೆಯದ ಕುಯಿನಾಲಮಲೆ ಸೀತಮ್ಮ ಕರುಂಬಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ಅಧ್ಯಕ್ಷ ಪಡಿಞಾರಂಡ ಜಿ.ಅಯ್ಯಪ್ಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಯಾವುದೇ ಒಂದು ಜನಾಂಗದ ಅಳಿವು-ಉಳಿವು ಅವರ ಭಾಷೆ, ಸಂಸ್ಕೃತಿಯನ್ನು ಪ್ರೀತಿಸುವುದರ ಮೇಲೆ ನಿಂತಿರುತ್ತದೆ. ಕೊಡವ ಭಾಷೆಗೆ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೂಕ್ತ ಸ್ಥಾನಮಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಈಗಿನ ಅಕಾಡೆಮಿ ಅಧ್ಯಕ್ಷರಿಗೆ ಬಹುತರವಾದ ಜವಾಬ್ದಾರಿಯನ್ನು ಸರ್ಕಾರ ಕೊಟ್ಟಿದೆ. ಇದಕ್ಕೆ ಎಲ್ಲಾ ಜನಾಂಗದವರು ಸಹಕರಿಸಬೇಕು. ಕೊಡವ ಭಾಷೆಗೆ ಸರ್ಕಾರದಿಂದ ಮಾನ್ಯತೆ ದೊರೆತರೆ, ಸರ್ವರಿಗೂ ಮಾನ್ಯತೆ ದೊರೆತಂತೆ ಎಂದರು.
ಪ್ರಮುಖರಾದ ಕುಡಿಯರ ಮುತ್ತಪ್ಪ ಮಾತನಾಡಿ, ಯಾವುದೇ ಭಾಷೆ, ಸಂಸ್ಕೃತಿ, ಸಂಸ್ಕಾರವು ಮನುಷ್ಯನ ಅಂತರಾಳದಲ್ಲಿ ಬೇರೂರಬೇಕಾದರೆ ಮನೆಯೇ ಮೊದಲ ಪಾಠಶಾಲೆಯಾಗಬೇಕು. ಮನೆಯಲ್ಲಿ ಪ್ರತಿಯೊಬ್ಬ ತಾಯಂದಿರು ಮಕ್ಕಳಿಗೆ ಚಿಕ್ಕಂದಿನಿಂದಲೇ ಕೊಡವ ಭಾಷೆ, ಸಂಸ್ಕೃತಿಯನ್ನು ಕಲಿಸಬೇಕು. ಪ್ರತಿಯೊಬ್ಬರೂ ಬಾಲ್ಯದಲ್ಲಿ ತಮ್ಮ ಹೆಗಲಿನಲ್ಲಿ ದುಡಿಯನ್ನು ತೂಗಿಸುವ ಕೆಲಸ ಮಾಡಬೇಕು. ಬಾಳೋಪಾಟ್ ಕಲಿತರೆ ಇಡೀ ಸಂಸ್ಕೃತಿ ಬೆಳಕು ಚೆಲ್ಲುವ ಕೆಲಸ ಮಾಡುತ್ತದೆ. ಇದು ಕೊಡವಾಮೆ ಪ್ರಜ್ವಲಿಸಲು ಅನುವು ಮಾಡಿಕೊಡುತ್ತದೆ ಎಂದರು.
ಮನೆಯಲ್ಲಿ ಸಂಸ್ಕೃತಿ ಇದ್ದರೆ ಮಾತ್ರ ಮುಂದಿನ ಪೀಳಿಗೆಗೆ ಮಾತ್ರ ಸಂಸ್ಕೃತಿ ಬೆಳೆಯಲು ಸಾಧ್ಯ. ಕುಡಿಯರಲ್ಲಿ ಅಡಿಕೆಮಲೆ ಕುಡಿಯ, ತೇಮಲೆ ಕುಡಿಯ ಹಾಗೂ ಪೂಮಲೆ ಕುಡಿಯ ಎಂಬ ಮೂರು ವಿಧಗಳಿದ್ದು, ಪೂಮಲೆ ಕುಡಿಯರು ಕೊಡವ ಆಚಾರ ವಿಚಾರ, ಸಂಸ್ಕೃತಿಯನ್ನು ಪಾಲಿಸುತ್ತ ಬರುತಿರುವ ಜನಾಂಗ ಎಂದರು.
ವೇದಿಕೆಯಲ್ಲಿ ಕುಡಿಯ ಸಮುದಾಯದಲ್ಲಿ ಕೊಡವ ಆಚಾರ-ವಿಚಾರ, ಜನಪದವನ್ನು ಕಲಿತು, ಕಲಿಸುತ್ತ ಕುಡಿಯ ಸಂಸ್ಕೃತಿಯನ್ನು ಬೆಳೆಸುತ್ತಿರುವ: ಗಾಳಿಬೀಡಿನ ಬಾಳೋಪಾಟ್ ಕಲಾವಿದ ನೇರತೊಕ್ಕಡ ರಮೇಶ್, ಯವಕಪಾಡಿಯ ಜಾನಪದ ಕಲಾವಿದ ಪಡಿಯಮಲೆ ಗಣೇಶ್ ಬಿದ್ದಪ್ಪ, ಹಿರಿಯ ಯವಕಪಾಡಿಯ ಜಾನಪದ ಕಲಾವಿದ ಕುಯಿನಾಲಮಲೆ ಪೂಣಚ್ಚ, ಹಿರಿಯ ಜಾನಪದ ಕಲಾವಿದ ಕೋಲಿಂದಮಲೆ ಎಂ.ರಾಜ, ತೋರ ಗ್ರಾಮದ ಯುವ ಜಾನಪದ ಕಲಾವಿದೆ ಕಿಪ್ಪರೆಮಲೆ ಪುಷ್ಪ ಮಾಚಯ್ಯ ಗಾಳಿಬೀಡಿನ ಯುವ ಜಾನಪದ ಕಲಾವಿದೆ ನೇರತೊಕ್ಕಡ ರಾಧಿಕಾ ಇವರುಗಳನ್ನು ಶಾಲು ಹೊದಿಸಿ, ಹಾರ ಹಾಕಿ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.
ಅಕಾಡೆಮಿ ಸದಸ್ಯರಾದ ಕುಡಿಯರ ಕಾವೇರಪ್ಪ, ಮೊಳ್ಳೆಕುಟ್ಟಡ ದಿನು ಬೋಜಪ್ಪ ಸಂಚಾಲಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರಾದ ಕಂಬೆಯಂಡ ಡೀನಾ ಬೋಜಣ್ಣ, ಕೊಂಡಿಜಮ್ಮನ ಎಂ.ಬಾಲಕೃಷ್ಣ, ಪೊನ್ನಿರ ಯು. ಗಗನ್, ಚೆಪ್ಪುಡಿರ ಎಸ್. ಉತ್ತಪ್ಪ, ಚೊಟ್ಟೆಯಂಡ ಸಂಜು ಕಾವೇರಪ್ಪ, ನಾಪಂಡ ಸಿ.ಗಣೇಶ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕಕ್ಕಬೆ ಗ್ರಾ.ಪಂ.ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಮರಂದೋಡ ಪಂಚಾಯಿತಿ ಸದಸ್ಯ ಚೋಯಮಾಡಂಡ ಹರೀಶ್, ಹಿರಿಯರಾದ ಬಾಚಮಂಡ ರಾಜ ಪೂವಣ್ಣ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪ, ಹಿರಿಯ ಜಾನಪದ ಕಲಾವಿದ ಕೋಲಿಂದಮಲೆ ಎ.ಚಿಣ್ಣಪ್ಪ, ಕೋಡಿಮಣಿಯಂಡ ಬೋಪಯ್ಯ, ಆರತೊಕ್ಕಡ ಮಹೇಶ್, ಮಿಥುನ್ ರಂಜಿತ್, ಕೋಪಟ್ಟಿಮಲೆ ಮಹೇಶ್, ಐರಿರ ರೈನ ಕಾರ್ಯಪ್ಪ, ಕಣಿಯರ ನಾಣಯ್ಯ, ಕಬ್ಬೆಮಲೆ ಲೋಲಾವತಿ ಮತ್ತಿತರರು ಉಪಸ್ಥಿತರಿದ್ದರು.