ಸೋಮವಾರಪೇಟೆ ಬಿಟಿಜಿಸಿ ಕಾಲೇಜು ಮೈದಾನದಲ್ಲಿ ಅಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಗೆ ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಚಾಲನೆ ನೀಡಿದರು. ಜಗದೀಶ್, ಮಿಲ್‌ರೆಡ್ ಗೋನ್ಸಾಲ್ವೆಸ್ ಇದ್ದರು. 
ಕೊಡಗು

ಶಿಸ್ತು, ಸಮಯಪ್ರಜ್ಞೆಗೆ ಕ್ರೀಡೆ ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಎ.ಆರ್.ಮುತ್ತಣ್ಣ ಅಭಿಪ್ರಾಯ
  • ತಾಲೂಕು ಮಟ್ಟದ ಕಬಡ್ಡಿ ಕ್ರೀಡಾಕೂಟ
ಸೋಮವಾರಪೇಟೆ: ಕ್ರೀಡೆ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಹೇಳಿದರು.
ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಪದವಿ ಪೂರ್ವ ಕಾಲೇಜು ವೈದಾನದಲ್ಲಿ ಆಯೋಜಿಸಿದ್ದ ಪದವಿ ಪೂರ್ವ ವಿಭಾಗದ ತಾಲೂಕು ಮಟ್ಟದ ಕಬಡ್ಡಿ ಕ್ರೀಡಾಕೂಟಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಕಬಡ್ಡಿಯಂತಹ ಗ್ರಾಮೀಣ ಸೊಗಡಿನ ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಧೈರ್ಯ, ಶಿಸ್ತು, ಸಮಯಪ್ರಜ್ಞೆ, ತಂಡದ ಮನೋಭಾವ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತವೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಕ್ರೀಡೆ ಕಲಿಸುತ್ತದೆ. ಇಂದಿನ ವಿದ್ಯಾರ್ಥಿಗಳು ಪಠ್ಯ ಶಿಕ್ಷಣದ ಜತೆಗೆ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಸದೃಢತೆ ಮಾತ್ರವಲ್ಲದೆ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಕಬಡ್ಡಿ ಆಟಗಾರರು ಕ್ರೀಡಾ ನಿಯಮಗಳನ್ನು ಪಾಲಿಸಿ, ಕ್ರೀಡಾಸ್ಫೂರ್ತಿಯಿಂದ ಆಟವಾಡಬೇಕು ಎಂದು ಹೇಳಿದರು.
ಸಂಸ್ಥೆಯ ಕರೆಸ್ಪಾಂಡೆಂಟ್ ಕೆ.ಎಂ. ಜಗದೀಶ್ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಣದ ಜತೆಗೆ ಕ್ರೀಡೆಗೂ ಮಹತ್ವದ ಸ್ಥಾನವಿದೆ. ಕಬಡ್ಡಿ ಕೇವಲ ದೈಹಿಕ ಸಾಮರ್ಥ್ಯದ ಆಟವಲ್ಲ ಎದುರಾಳಿಯ ತಂತ್ರವನ್ನು ಅರಿತುಕೊಂಡು ಕ್ಷಣಾರ್ಧದಲ್ಲಿ ನಿರ್ಧಾರ ಕೈಗೊಳ್ಳುವ ಕೌಶಲವನ್ನು ಬೆಳೆಸುವ ಕ್ರೀಡೆಯಾಗಿದೆ. ವಿದ್ಯಾರ್ಥಿಗಳು ಸೋಲು-ಗೆಲುವನ್ನು ಲೆಕ್ಕಿಸದೆ ಉತ್ತಮ ಕ್ರೀಡಾಸ್ಫೂರ್ತಿಯಿಂದ ಸ್ಪರ್ಧಿಸಬೇಕು. ತಾಲೂಕು ಮಟ್ಟದ ಈ ಕ್ರೀಡಾಕೂಟವು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಮಿಲ್‌ರೆಡ್ ಗೋನ್ಸಾಲ್ವೆಸ್, ಕೀಡಾಕೂಟದ ಕ್ರೀಡಾ ಸಂಯೋಜಕರಾದ ಅಶೋಕ್, ರಂಗಸ್ವಾಮಿ, ಉಪನ್ಯಾಸಕರಾದ ಸೌಮ್ಯಾ, ಮೌನ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಗೌಡಳ್ಳಿ ಪ್ರವೀಣ್, ಮಧು, ಆದರ್ಶ್ ಇತರರಿದ್ದರು.