ಸೋಮವಾರಪೇಟೆ ತಾಲೂಕಿನ ಯಡೂರು ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಗೆ ಕಾಲೇಜಿನ ಪ್ರಾಂಶುಪಾಲ ಡಾ.ಹರ್ಷ ಚಾಲನೆ ನೀಡಿದರು. ದೀಪಕ್, ಮೋಹನ್, ಕಿರಣ್ ಇದ್ದರು.
- ಯಡೂರು ಬಿಟಿಸಿಜಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಹರ್ಷ ಅಭಿಪ್ರಾಯ
- ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ
ಸೋಮವಾರಪೇಟೆ: ಗ್ರಾಮೀಣ ಭಾಗದಲ್ಲಿ ಆಯೋಜಿಸುವ ಕ್ರೀಡೆಗಳು ಸಾಮರಸ್ಯಕ್ಕೆ ವೇದಿಕೆಯಾಗಿದ್ದು, ಜಾತಿ, ಮತ, ಪಂಥದ ಭೇದವಿಲ್ಲದೇ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಕ್ರೀಡೆಗಿದೆ ಎಂದು ಯಡೂರು ಬಿಟಿಸಿಜಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಹರ್ಷ ಅಭಿಪ್ರಾಯಿಸಿದರು.
ಸಮೀಪದ ಯಡೂರು ಬಿಟಿಸಿಜಿ ಕಾಲೇಜು ಮೈದಾನದಲ್ಲಿ ಯಡೂರಿನ ವೈಸಿಸಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಆಯೋಜಿಸಿರುವ 26ನೇ ವರ್ಷದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯು ಸಕಾರಾತ್ಮಕತೆಯ ಮಾನಸಿಕತೆಯೊಂದಿಗೆ ದೈಹಿಕ ಶಕ್ತಿಯನ್ನು ತುಂಬುತ್ತದೆ. ಹುಮ್ಮಸ್ಸಿನಿಂದ ಜೀವನ ನಡೆಸಲು ಕ್ರೀಡೆ ಸಹಕಾರಿಯಾಗಿದೆ. ಕ್ರೀಡಾಪಟುಗಳು ಸೋಲು ಗೆಲುವಿನ ಲೆಕ್ಕಾಚಾರ ಹಾಕುವ ಬದಲು ಕ್ರೀಡಾ ಸ್ಫೂರ್ತಿಯೊಂದಿಗೆ ಭಾಗವಹಿಸಬೇಕು ಎಂದು ಅಭಿಪ್ರಾಯಿಸಿದರು.
ಯಡೂರು ಗ್ರಾಮ ಸಮಿತಿ ಅಧ್ಯಕ್ಷ ವೈ.ಡಿ.ಮೋಹನ್, ಜಿ.ಪಂ.ಮಾಜಿ ಸದಸ್ಯ ಬಿ.ಜೆ. ದೀಪಕ್, ನಿವೃತ್ತ ಸರ್ಕಾರಿ ನೌಕರ ಸಿ.ಎಚ್.ಚಂದ್ರಪ್ಪ, ಬೆಳೆಗಾರ ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ಮಲ್ಲಪ್ಪ, ಕ್ಲಬ್ ಅಧ್ಯಕ್ಷ ಎಚ್.ಬಿ.ಕಿರಣ್ ಗೌಡ, ಪ್ರಮುಖರಾದ ವಿಜಯಕುಮಾರ್, ವೈ.ಪಿ. ಲೋಕೇಶ್ ಇದ್ದರು.
ಮಾ.15ರಂದು ಫೈನಲ್ ಪಂದ್ಯಾವಳಿ ನಡೆಯಲಿದ್ದು, ಸಂಜೆ 5 ಗಂಟೆಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಶಾಸಕ ಡಾ. ಮಂತರ್ ಗೌಡ, ಉದ್ಯಮಿ ಅರುಣ್ ಕೊತ್ನಳ್ಳಿ, ಗುತ್ತಿಗೆದಾರ ಕೆ.ಟಿ.ಸತೀಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.