ಕೊಡಗು ವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಸಮಾರಂಭದಲ್ಲಿ ಮಕ್ಕಳ ಪಥಸಂಚಲನ ಗಮನ ಸೆಳೆಯಿತು.
ಕ್ರೀಡೆಗಳು ಶಾರೀರಿಕ ಆರೋಗ್ಯದ ಜತೆಗೆ ಮಾನಸಿಕ ಸ್ಥೈರ್ಯ, ಶಿಸ್ತು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು. ಇಲ್ಲಿನ ಕೊಡಗು ವಿದ್ಯಾಲಯದಲ್ಲಿ ಶನಿವಾರ ನಡೆದ ವಾರ್ಷಿಕ ಕ್ರೀಡಾಕೂಟ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಪರಿಶ್ರಮ ಹಾಗೂ ಆತ್ಮವಿಶ್ವಾಸದೊಂದಿಗೆ ಮುಂದುವರಿಯಬೇಕು. ವ್ಯಕ್ತಿತ್ವ ನಿರ್ಮಾಣದಲ್ಲಿ ಗೆಳೆಯರ ಪಾತ್ರ ಮಹತ್ವದ್ದಾಗಿದ್ದು, ವಿಫಲತೆಯನ್ನು ಧೈರ್ಯದಿಂದ ಎದುರಿಸುವುದು ನಾಯಕತ್ವದ ಪ್ರಮುಖ ಗುಣವಾಗಿದೆ. ಒತ್ತಡದ ಸಂದರ್ಭಗಳಲ್ಲಿ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಬೇಕು ಹಾಗೂ ವಿನಯವೇ ವ್ಯಕ್ತಿಯನ್ನು ಎತ್ತರಕ್ಕೆ ಕೊಂಡೊಯ್ಯುವ ಶಾಶ್ವತ ಗುಣವೆಂದು ಹೇಳಿದರು.
ಕೊಡಗು ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ಮಾತನಾಡಿ, ಸಾಮಾಜಿಕ ಮಾಧ್ಯಮಗಳ ಪರಿಣಾಮದಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ವಿದ್ಯಾರ್ಥಿ-ಗುರುಗಳ ನಡುವಿನ ಪರಸ್ಪರ ಗೌರವದಲ್ಲಿ ಉಂಟಾಗುತ್ತಿರುವ ಕುಸಿತದ ಬಗ್ಗೆ ಗಮನ ಸೆಳೆದರು. ಶೈಕ್ಷಣಿಕ ಸಾಧನೆಯಷ್ಟೇ ಜೀವನದಲ್ಲಿ ಯಶಸ್ಸಿಗೆ ಸಾಕಾಗುವುದಿಲ್ಲ. ಜೀವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳಿವೆ. ಉತ್ತಮ ಸ್ನೇಹಿತರ ಆಯ್ಕೆ ಹಾಗೂ ಧನಾತ್ಮಕ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದರು.
ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ ಮಾತನಾಡಿ, ಶಿಕ್ಷಕರ ನಿಷ್ಠಾವಂತ ಸೇವೆ, ಪೋಷಕರು, ಆಡಳಿತ ಮಂಡಳಿಯ ಸಹಕಾರದಿಂದಾಗಿ ಸಮಗ್ರ ಅಭಿವೃದ್ಧಿ ಸಾಧ್ಯವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಗುಣಮಟ್ಟದ ಶಿಕ್ಷಣ, ಶಿಸ್ತು, ಮೌಲ್ಯಾಧಾರಿತ ಬೋಧನೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಹೇಳಿದರು.
ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ಉಪಾಧ್ಯಕ್ಷೆ ಊರ್ವಶಿ ಮುದ್ದಯ್ಯ, ಕ್ರೀಡಾ ಚೇರ್ ಪರ್ಸನ್ ರಘು ಮಾದಪ್ಪ, ಸಲಹಾ ಮಂಡಳಿ ಸದಸ್ಯ ಕುಮಾರ್ ಸುಬ್ಬಯ್ಯ, ಕಾರ್ಯದರ್ಶಿ ಬಿ.ಎಸ್. ಪೂಣಚ್ಚ, ಸಮಿತಿ ಸದಸ್ಯರಾದ ಗುರುದತ್, ನಿಯತ ದೇವಯ್ಯ, ಸೋಮಣ್ಣ, ಆಡಳಿತ ನಿರ್ವಹಣಾಧಿಕಾರಿ ಪಿ. ರವಿ, ಮೇಜರ್ ದಾಮೋದರ್, ಆಪರ್ಚುನಿಟಿ ಶಾಲೆಯ ಸಲಹೆಗಾರ್ತಿ ಮೀನಾ ಕಾರ್ಯಪ್ಪ, ಕಾರ್ಯದರ್ಶಿ ವೀಣಾ ಚಂಗಪ್ಪ ಸಲಹಾ ಮಂಡಳಿಯ ಸದಸ್ಯೆ ಪುಷ್ಪಾ ಕುಟ್ಟಣ್ಣ ಇದ್ದರು.
2025ರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ವೆಂಕಟ್‌ರಾಜ, ದಿನೇಶ್ ಕಾರ್ಯಪ್ಪ, ನೇತ್ರಾ ಗಣಪತಿ ಬಹುಮಾನ ಮತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಪೋಷಕರಿಗಾಗಿ ವಿಶೇಷ ಫನ್ ಸ್ಪೋರ್ಟ್ಸ್ಗಳನ್ನೂ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳ ಪಥಸಂಚಲನ, ಬ್ಯಾಂಡ್ ಪ್ರದರ್ಶನ, ಸ್ವಾಗತ ನೃತ್ಯ ಕಾರ್ಯಕ್ರಮಕ್ಕೆ ಮೆರಗು ನೀಡಿತು. ಕೊಡಗು ವಿದ್ಯಾಲಯದ ಆಪರ್ಚುನಿಟಿ ಶಾಲೆಯ ಮಕ್ಕಳ ನೃತ್ಯ ಪ್ರದರ್ಶನ ಎಲ್ಲರ ಮನ ಸೆಳೆಯಿತು.