ಸೋಮವಾರಪೇಟೆ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ನಡೆದ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಚಾಲನೆ ನೀಡಿದರು. ನಾಗರಾಜು, ಸುಬ್ರಮಣಿ, ಇಸಾಕ್, ರಾಜಪ್ಪ ಇದ್ದರು.
- ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಅಭಿಪ್ರಾಯ
- ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಪಂದ್ಯಾವಳಿ
ಸೋಮವಾರಪೇಟೆ : ಇಂದಿರಾಗಾಂಧಿ ಅಭಿಮಾನಿಗಳ ಬಳಗದ ವತಿಯಿಂದ ಸಾಕಮ್ಮನ ಬಂಗಲೆ ಮುಂಭಾಗದ ಮೈದಾನದಲ್ಲಿ ಭಾನುವಾರ 39ನೇ ವರ್ಷದ ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಪಂದ್ಯಾವಳಿ ನಡೆಯಿತು.
ಪಂದ್ಯಾವಳಿಗೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಕ್ರೀಡೆಗಳು ದಿನೇದಿನೆ ಹೆಚ್ಚು ಪ್ರಚಲಿತವಾಗುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರದ್ದು. ಪ್ರತಿದಿನ ಸ್ವಲ್ಪ ಸಮಯವನ್ನು ಕ್ರೀಡಾ ಚಟುವಟಿಕೆಗಳಿಗೆ ಮೀಸಲಿಟ್ಟರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸಲಿದೆ ಎಂದರು.
ಇಂತಹ ಕ್ರೀಡಾಕೂಟಗಳಿಂದ ಗ್ರಾಮೀಣ ಪ್ರತಿಭೆಗಳು ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ಸಿಗುತ್ತಿದ್ದು, ಹೆಚ್ಚಿನ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಕಲ್ಪಿಸಬೇಕೆಂದು ಮನವಿ ಮಾಡಿದರು. ಸೋಲುಗೆಲುವು ಕ್ರೀಡೆಯ ಅವಿಭಾಜ್ಯ ಅಂಗವಾಗಿದ್ದು, ಕ್ರೀಡಾಪಟುಗಳು ಎಲ್ಲವನ್ನೂ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದರು.
ಭುವನ ಮಂದಾರ ಕಂಪನಿಯ ನಿರ್ದೇಶಕ ಲೋಕೇಶ್ ಮಾತನಾಡಿ, ದೇಶ ಕಂಡ ಅತ್ಯಂತ ಯಶಸ್ವಿ ಪ್ರಧಾನಿಗಳಲ್ಲಿ ಇಂದಿರಾ ಗಾಂಧಿ ಪ್ರಮುಖರಾಗಿದ್ದು, ದೀನದಲಿತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ ಉಕ್ಕಿನ ಮಹಿಳೆ ಎಂದು ಶ್ಲಾಘಿಸಿದರು.
ಸಂಘದ ಅಧ್ಯಕ್ಷ ಎಚ್.ಎ.ನಾಗರಾಜು ಮಾತನಾಡಿ, ಸಂಘ ಸ್ಥಾಪನೆಯಾಗಿ 41 ವರ್ಷಗಳಾಗಿದ್ದು, ಕಳೆದ 38 ವರ್ಷಗಳಿಂದ ನಿರಂತರವಾಗಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಿಕೊಂಡು ಬರುತ್ತಿದ್ದೇವೆ ಎಂದರು.
ಪಂದ್ಯಾವಳಿಯಲ್ಲಿ ಪ್ರಾಥಮಿಕ, ಪ್ರೌಢ, ಕಾಲೇಜು ವಿಭಾಗ, 20 ವರ್ಷದೊಳಗಿನ ಯುವಕರು ಹಾಗೂ ಸಾರ್ವಜನಿಕ ವಿಭಾಗಗಳಲ್ಲಿ ಪಂದ್ಯಗಳು ನಡೆದವು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಸುಬ್ರಮಣಿ, ಕರ್ಕಳ್ಳಿ ಇಸಾಕ್, ಪ್ರಧಾನ ಕಾರ್ಯದರ್ಶಿ ಎಚ್.ಬಿ.ರಾಜಪ್ಪ, ಸಹಕಾರ್ಯದರ್ಶಿ ಎಚ್.ಜಿ.ರವೀಂದ್ರ, ಗೌರವ ಕಾರ್ಯದರ್ಶಿ ಜಗದೀಶ್, ಸಂಚಾಲಕ ಅಜೇಯ, ದಲಿತ ಮುಖಂಡ ಡಿ.ಎಸ್.ನಿರ್ವಾಣಪ್ಪ ಸೇರಿದಂತೆ ಹಲವರು ಇದ್ದರು.