ಕೂಡುಗದ್ದೆ ಗ್ರಾಮದ ಸುತ್ತಮುತ್ತ ಇರುವ ಭತ್ತದ ಗದ್ದೆಗಳ ನೋಟ
ಪ್ರತಿಯೊಂದು ಗ್ರಾಮಕ್ಕೂ ತನ್ನದೇ ಆದ ಇತಿಹಾಸವಿರುತ್ತದೆ. ಕೆಲವೊಮ್ಮೆ ಆ ಗ್ರಾಮದ ಹೆಸರೇ ಅದರ ಹಿನ್ನೆಲೆಯನ್ನು ಹೇಳುತ್ತದೆ. ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದಲ್ಲಿರುವ ಕೂಡುಗದ್ದೆ ಗ್ರಾಮವೂ ಅಂತಹದೇ ವಿಶೇಷತೆಯನ್ನು ಹೊಂದಿದೆ.
ಶತಮಾನಗಳ ಹಿಂದಿನ ಕಥೆಯನ್ನು ತನ್ನ ಹೆಸರಿನಲ್ಲೇ ಹೊತ್ತುಕೊಂಡಿರುವ ಈ ಗ್ರಾಮ, ಕೃಷಿ ಸಂಸ್ಕೃತಿ ಹಾಗೂ ಸಹಜ ಸೌಂದರ್ಯವನ್ನು ತನ್ನಲ್ಲಿ ಅಡಗಿಸಿ ಇಟ್ಟುಕೊಂಡಿರುವ ಜೊತೆಗೆ, ಇಂದಿಗೂ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಕೂಡುಗದ್ದೆ ಎಂಬ ಹೆಸರಿನ ಹುಟ್ಟಿಗೆ ಆಸಕ್ತಿದಾಯಕ ಹಿನ್ನೆಲೆ ಇದೆ. ಅಂದಿನ ಕಾಲದಲ್ಲಿ ಕೊಡವ ಜನಾಂಗದ ಕಲಿಯಂಡ ಕುಟುಂಬದ ಹಿರಿಯರಾದ ಮಾದಪ್ಪ ಅವರು ಈ ಪ್ರದೇಶದಲ್ಲಿ ವ್ಯವಸಾಯಕ್ಕೆ ಯೋಗ್ಯವಾದ ಜಮೀನು ಗುರುತಿಸಿ ಗದ್ದೆ ನಿರ್ಮಿಸಲು ಆರಂಭಿಸಿದರು. ಅದೇ ಸಮಯದಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಸವಿದ್ದ ತಿಪ್ಪೇಗೌಡ ಮನೆತನದ ಗೌಡ ಕುಟುಂಬಸ್ಥರೂ ತಮ್ಮ ಭಾಗದಿಂದ ಭೂಮಿಯನ್ನು ಹದಗೊಳಿಸುತ್ತಾ ಕೃಷಿ ಚಟುವಟಿಕೆಗಳನ್ನು ಮುಂದುವರಿಸಿದರು. ಈ ಎರಡೂ ಕುಟುಂಬಗಳು ವಿಭಿನ್ನ ದಿಕ್ಕುಗಳಿಂದ ಗದ್ದೆಗಳನ್ನು ನಿರ್ಮಿಸುತ್ತಾ ಸಾಗಿದಾಗ, ಕೊನೆಗೆ ಎರಡೂ ಕಡೆಯ ಗದ್ದೆಗಳು ಒಂದೇ ಸ್ಥಳದಲ್ಲಿ ಸೇರಿಕೊಂಡವು. ಕೂಡುವ ಗದ್ದೆ ಎಂಬ ಅರ್ಥದಲ್ಲಿ ಆ ಸ್ಥಳವನ್ನು ಕೂಡುಗದ್ದೆ ಎಂದು ಕರೆಯಲಾಯಿತು. ಕಾಲಕ್ರಮೇಣ ಇದೇ ಹೆಸರು ಜನಪ್ರಿಯವಾಗಿ, ಸರ್ಕಾರಿ ದಾಖಲೆಗಳಲ್ಲಿಯೂ ಸ್ಥಾನ ಪಡೆದು ಇಂದಿಗೂ ಬಳಕೆಯಲ್ಲಿದೆ ಎಂಬುದೇ ಗಮನೀಯ ಸಂಗತಿ.
ಕಾವೇರಿ ನದಿಯ ದಡದಲ್ಲಿ ನೆಲೆಗೊಂಡಿರುವ ಕೂಡುಗದ್ದೆ ಗ್ರಾಮವು ಗ್ರಾಮೀಣ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದು, ಹಸಿರು ಹೊಲಗಳಿಂದಾಗಿಯೇ ಹಿರಿಮೆ ಮತ್ತು ಗರಿಮೆಗಳನ್ನು ಪಡೆದಿದೆ.
ಕೂಡುಗದ್ದೆ ಸುತ್ತಮುತ್ತಲ ಪ್ರದೇಶದಲ್ಲಿ ವರ್ಷಪೂರ್ತಿ ಕೃಷಿ ನಡೆಯುವುದು ವಿಶೇಷತೆ. ಭತ್ತದ ಬೆಳೆ ಇಲ್ಲಿ ಪ್ರಮುಖವಾಗಿದೆ. ಕಾವೇರಿ ನೀರಾವರಿ ಸೌಕರ್ಯದಿಂದ ಹಚ್ಚ ಹಸಿರಿನಿಂದ ಕಂಗೊಳಿಸುವ ಹೊಲಗಳು ಗ್ರಾಮಕ್ಕೆ ವಿಶಿಷ್ಟ ಸೌಂದರ್ಯವನ್ನು ತಂದುಕೊಟ್ಟಿವೆ. ಸುಮಾರು 60 ಎಕರೆ ವಿಸ್ತೀರ್ಣ ಹೊಂದಿರುವ ಈ ಗ್ರಾಮದ ಸುತ್ತ ಮುತ್ತಲೂ ಇರುವ ಗದ್ದೆಗಳಲ್ಲಿ ಭತ್ತದ ಕೃಷಿ ನಡೆಯುತ್ತಿದೆ. ಜತೆಗೆ ಕಾಫಿ, ಕರಿಮೆಣಸು, ಅಡಕೆ ಬೆಳೆಗಳೂ ಇಲ್ಲಿನ ಆರ್ಥಿಕತೆಗೆ ಬೆಂಬಲವಾಗಿವೆ.
ಪ್ರಾರಂಭದಲ್ಲಿ ಒಂದೇ ಗೌಡ ಕುಟುಂಬದಿಂದ ಆರಂಭವಾದ ಈ ಗ್ರಾಮ, ಇಂದಿಗೆ ವಿವಿಧ ಸಮುದಾಯಗಳ ಆಶ್ರಯ ತಾಣವಾಗಿರುವುದು ಮಹತ್ವದ ಸಂಗತಿ.
ಈಗ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸವಾಗಿವೆ. ಇವುಗಳಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ಜನರೂ ಇದ್ದಾರೆ. ಎಲ್ಲರೂ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದ್ದಾರೆ. ಕನ್ನಡ, ಕೊಡವ, ಮಲೆಯಾಳಂ ಹಾಗೂ ತಮಿಳು ಭಾಷೆಗಳು ಇಲ್ಲಿನ ಜನಜೀವನವನ್ನು ರೂಪಿಸಿದೆ.
ಭಾಷೆ ಮತ್ತು ಸಂಸ್ಕೃತಿ ಪಾಲನೆಯಲ್ಲಿ ಸಮನ್ವಯ ಸಾಧಿಸಿರುವ ಗ್ರಾಮವು ಸೌಹಾರ್ದತೆಯಿಂದಲೇ ಮಾದರಿಯಾಗಿರುವುದು ಬಹು ವಿಶೇಷ.
ಈ ಹಸಿರು ಗ್ರಾಮದ ಬದುಕು ಸವಾಲುಗಳಿಂದ ಮುಕ್ತವಾಗಿಲ್ಲ. 2018-2019ರಲ್ಲಿ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ, ಕೂಡುಗದ್ದೆಯ ನದಿ ದಡದ ಅನೇಕ ಮನೆಗಳು ನೆಲಸಮವಾಗಿದ್ದವು. ಅನೇಕ ಕುಟುಂಬಗಳು ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಸರ್ಕಾರದಿಂದ ನಿವೇಶನ ಹಾಗೂ ಮನೆ ನೀಡುವುದಾಗಿ ಆ ಸಂದರ್ಭದಲ್ಲಿ ಭರವಸೆ ನೀಡಲಾಗಿದ್ದರೂ, ಹಲವು ವರ್ಷಗಳು ಕಳೆದರೂ ಆ ಭರವಸೆಗಳು ಸಾಕಾರವಾಗಿಲ್ಲ ಎಂಬುದು ಸ್ಥಳೀಯರ ಅಳಲು.ಇಂದಿಗೂ ನದಿ ದಡದ ಅನೇಕ ಕುಟುಂಬಗಳು ತಾತ್ಕಾಲಿಕ ವಾಸಸ್ಥಳಗಳಲ್ಲಿ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ.
ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆಯೂ ಗಂಭೀರ ಸಮಸ್ಯೆಯಾಗಿದೆ. ರಸ್ತೆ, ಕುಡಿಯುವ ನೀರು, ಸಮರ್ಪಕ ವಸತಿ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹಲವು ವರ್ಷಗಳಿಂದ ಗ್ರಾಮಸ್ಥರು ಜಿಲ್ಲಾಡಳಿತದ ಗಮನ ಸೆಳೆಯಲು ನಿರಂತರವಾಗಿ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆಗಳು ಇಂದಿಗೂ ಬಗೆಹರಿಯದೆ ಉಳಿದಿವೆ ಎಂದು ಜನರು ಆರೋಪಿಸುತ್ತಾರೆ.
ಶಾಶ್ವತ ಪರಿಹಾರದ ನಿರೀಕ್ಷೆ :
ಹೆಸರಲ್ಲೇ ಇತಿಹಾಸವನ್ನು ಹೊತ್ತಿರುವ, ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಕೂಡುಗದ್ದೆ ಗ್ರಾಮ ಇಂದು ಹತ್ತು ಹಲವು ನಿಟ್ಟಿನಲ್ಲಿ ಅಭಿವೃದ್ಧಿಗಾಗಿ ಕಾಯುತ್ತಿದೆ. ಈ ಹಸಿರು ನೆಲದ ಜನರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಸಿಗುವ ದಿನಕ್ಕಾಗಿ ಗ್ರಾಮಸ್ಥರು ಇನ್ನೂ ನಿರೀಕ್ಷೆಯಲ್ಲಿದ್ದಾರೆ.
ಗ್ರಾಮದ ಇತಿಹಾಸಕ್ಕೆ ಗದ್ದೆಗಳೇ ಸಾಕ್ಷಿಯಾಗಿವೆ. ಹಿರಿಯರಿಂದ ಬಳುವಳಿಯಾಗಿ ಬಂದ ಗದ್ದೆಗಳನ್ನು ನಾವುಗಳು ಇಂದಿಗೂ ಉಳಿಸಿಕೊಂಡು ಬಂದಿದ್ದೇವೆ. ಗ್ರಾಮದಲ್ಲಿ ಕೃಷಿಗೆ ಪೂರಕವಾದ ಜಮೀನು ಹಾಗೂ ಗದ್ದೆಗಳು ಕಾವೇರಿ ನದಿ ತೀರದಲ್ಲೇ ಇರುವುದರಿಂದ ಮಳೆಗಾಲದ ಪ್ರವಾಹ ಬರುತ್ತದೆ. ಈ ಸಂದರ್ಭ ಬೆಳೆ ನಾಶವಾದರೆ ಅಧಿಕಾರಿಗಳು ಯಾವುದೇ ಪರಿಹಾರ ನೀಡುತ್ತಿಲ್ಲ. ಮುಂದಿನ ಪೀಳಿಗೆಗೆ ಈ ಗದ್ದೆಗಳು ಉಳಿಯುವಂತಾಗಲು ಇಲಾಖೆ ಗಮನಹರಿಸಬೇಕು