ಗ್ರಾಮದ ಧಾರ್ಮಿಕ ಸಂಸ್ಕೃತಿಯ ಪ್ರತೀಕವಾದ ಬಸವೇಶ್ವರ ದೇವಾಲಯದಲ್ಲಿ ನಡೆಯುವ ದೇವರ ಉತ್ಸವ ಮತ್ತು ಪಲ್ಲಕ್ಕಿ ಮೆರವಣಿಗೆ  ಕರಡಿಗೋಡು
ಕೊಡಗು

ಸೂರು, ಸುರಕ್ಷತೆಗಾಗಿ ಗ್ರಾಮಸ್ಥರ ಪರದಾಟ

ಕಾವೇರಿ ತಟದಲ್ಲಿ ನಿಸರ್ಗ ಸೌಂದರ್ಯದ ತಾಣ ಬಸವೇಶ್ವರನ ನೆಲೆ ಕರಡಿಗೋಡು

ಪಿ. ವಿ. ಅಂತೋಣಿ ಸಿದ್ದಾಪುರ

ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಉಗಮಿಸಿ ಭಾಗಮಂಡಲದಲ್ಲಿ ತನ್ನ ಸ್ವರೂಪ ಪ್ರದರ್ಶಿಸಿ, ನಾಡಿನ ಜೀವನಾಡಿಯಾಗಿ ಹರಿಯುವ ಪವಿತ್ರ ಕಾವೇರಿ ನದಿ ಕೊಡಗಿನ ಅನೇಕ ಗ್ರಾಮಗಳಿಗೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹತ್ವವನ್ನು ತಂದುಕೊಟ್ಟಿದೆ. ಅವುಗಳ ಪೈಕಿ ಕರಡಿಗೋಡು ಗ್ರಾಮವೂ ಒಂದು. ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮ ಕಾವೇರಿ ನದಿ ತಟದಲ್ಲಿದೆ. ನಿಸರ್ಗ ಸೌಂದರ್ಯದಿಂದ ಪ್ರವಾಸಿಗರ ಗಮನ ಸೆಳೆದಿದ್ದರೂ ಗ್ರಾಮದ ಸಾಮಾನ್ಯ ಜನರ ಬದುಕು ಸಂಕಷ್ಟದಿಂದಲೇ ಕೂಡಿದೆ.

*

ಧಾರ್ಮಿಕ ಶ್ರದ್ಧಾಕೇಂದ್ರ: ಕರಡಿಗೋಡು ಗ್ರಾಮದ ಪ್ರಮುಖ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಶ್ರೀ ಬಸವೇಶ್ವರ ದೇವಸ್ಥಾನವೂ ಒಂದು. ಸುಮಾರು 200 ವರ್ಷಗಳ ಇತಿಹಾಸ ಹೊಂದಿದೆ ಎನ್ನಲಾದ ಈ ದೇವಾಲಯಕ್ಕೆ ಪೌರಾಣಿಕ ಮಹತ್ವ ಇದೆ. ಗ್ರಾಮದಲ್ಲಿ ನೆಲೆಸಿರುವ ಕುಕ್ಕುನೂರು ಕುಟುಂಬಸ್ಥರು ಬಸವೇಶ್ವರನನ್ನು ಆರಾಧ್ಯ ದೈವ ಹಾಗೂ ಮನೆದೇವರಾಗಿ ಪೂಜಿಸಿಕೊಂಡು ಬರುತ್ತಿದ್ದಾರೆ. ಧಾರ್ಮಿಕ ಶ್ರದ್ಧೆ, ಕುಟುಂಬದ ಪರಂಪರೆ ಮತ್ತು ಗ್ರಾಮಸ್ಥರ ಒಗ್ಗಟ್ಟಿನ ಪ್ರತೀಕವಾಗಿ ಪ್ರತಿ ವರ್ಷವೂ ದೇವಾಲಯದಲ್ಲಿ ದೇವರ ಉತ್ಸವ ಸಂಪನ್ನಗೊಳ್ಳುತ್ತದೆ. ಇದು ಕರಡಿಗೋಡು ಗ್ರಾಮದ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಎತ್ತಿಹಿಡಿಯುತ್ತದೆ.

*

ಕೊಡಗು ಜಿಲ್ಲೆಯಲ್ಲಿ 25 ಸದಸ್ಯರ ಬಲ ಹೊಂದಿರುವ ಅತಿದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಸಿದ್ದಾಪುರಕ್ಕೆ ಇದೆ. ಈ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕರಡಿಗೋಡಿನಲ್ಲಿ ನಾಲ್ಕು ವಾರ್ಡ್‌ಗಳಿವೆ. ಇಲ್ಲಿ ಸುಮಾರು 5 ಸಾವಿರ ಜನಸಂಖ್ಯೆ ಇದೆ. ಕಾಫಿ, ಕರಿಮೆಣಸು, ಭತ್ತ ಹಾಗೂ ಅಡಕೆ ಇಲ್ಲಿನ ಪ್ರಮುಖ ಬೆಳೆಗಳು. ಹೆಚ್ಚಿನ ಕುಟುಂಬಗಳು ಕೃಷಿ ಮತ್ತು ಕೃಷಿ ಕಾರ್ಮಿಕ ವೃತ್ತಿಯನ್ನೇ ಅವಲಂಬಿಸಿವೆ.

*

ಸವಾಲುಗಳೇ ಹೆಚ್ಚು:ಕರಡಿಗೋಡು ಗ್ರಾಮವು ಜಿಲ್ಲಾ ಕೇಂದ್ರದಿಂಧ 30, ತಾಲೂಕು ಕೇಂದ್ರಕ್ಕೆ 16 ಕಿ.ಮೀ. ದೂರದಲ್ಲಿದೆ. ಕೃಷಿ ಚಟುವಟಿಕೆಗಳ ಮೂಲಕ ಬದುಕು ಕಟ್ಟಿಕೊಂಡಿರುವ ಗ್ರಾಮಸ್ಥರಿಗೆ ಪ್ರಕೃತಿಯ ಸವಾಲುಗಳ ಜತೆಗೆ ವಸತಿ ಹಾಗೂ ಮೂಲಸೌಕರ್ಯಗಳ ಕೊರತೆಯೂ ಎದುರಾಗಿದೆ. 2018-19ರಲ್ಲಿ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಹಾಗೂ ಕಾವೇರಿ ನದಿಯ ಪ್ರವಾಹದಿಂದ ಕರಡಿಗೋಡು ಗ್ರಾಮದ ಹಲವು ಮನೆಗಳು ನೆಲಸಮವಾದವು. ಮನೆ ಕಳೆದುಕೊಂಡ ಕುಟುಂಬಗಳಿಗೆ ನಿವೇಶನ ಮತ್ತು ಶಾಶ್ವತ ಸೂರು ಕಲ್ಪಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ 8 ವರ್ಷವಾದರೂ ನೊಂದ ಕುಟುಂಬಗಳ ವಸತಿ ಸಮಸ್ಯೆ ಬಗೆಹರಿದಿಲ್ಲ ಎಂಬುದು ಗ್ರಾಮಸ್ಥರ ಅಳಲು. ಶಾಶ್ವತ ಸೂರು ದೊರೆಯದ ಕಾರಣ ಕೆಲ ಕುಟುಂಬಗಳು ಇಂದಿಗೂ ಪ್ಲಾಸ್ಟಿಕ್ ಶೆಡ್‌ಗಳಲ್ಲೇ ವಾಸಿಸುತ್ತಿವೆ. ಮಳೆ ಬಂದರೆ ಸೋರಿಕೆ, ಬಿಸಿಲು ಹೆಚ್ಚಾದರೆ ತಾಪ, ಗಾಳಿ ಬೀಸಿದರೆ ಶೆಡ್‌ಗಳೇ ಹಾರಿ ಹೋಗುವ ಆತಂಕ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಶಿಕ್ಷಣ, ಕುಟುಂಬದ ಆರೋಗ್ಯ ಮತ್ತು ದಿನನಿತ್ಯದ ಬದುಕನ್ನು ನಿಭಾಯಿಸುವುದು ಸಂತ್ರಸ್ತರಿಗೆ ದೊಡ್ಡ ಸವಾಲಾಗಿದೆ.

*

ಕಾಡಾನೆಗಳ ಹಾವಳಿ: ಕರಡಿಗೋಡು ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿದೆ. ಕೃಷಿಕರು ಮತ್ತು ಕಾರ್ಮಿಕರು ಆತಂಕದಲ್ಲಿದ್ದಾರೆ. ತೋಟಗಳಿಗೆ ನುಗ್ಗುವ ಕಾಡಾನೆಗಳು ಕಾಫಿ ಸೇರಿದಂತೆ ವಿವಿಧ ಕೃಷಿ ಬೆಳೆಗಳನ್ನು ಹಾನಿಗೊಳಿಸುತ್ತಿವೆ. ಇದರಿಂದ ಈಗಾಗಲೇ ಬೆಲೆ ಏರಿಕೆ, ಕಾರ್ಮಿಕರ ಕೊರತೆ ಮತ್ತು ಉತ್ಪಾದನಾ ವೆಚ್ಚದ ಹೊರೆ ಎದುರಿಸುತ್ತಿರುವ ಬೆಳೆಗಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮಸ್ಥರು ಹಗಲು ಹೊತ್ತಿನಲ್ಲಿಯೂ ಕೆಲವು ರಸ್ತೆಗಳಲ್ಲಿ ನಿರಾತಂಕವಾಗಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

*

ಜನಪ್ರತಿನಿಧಿಗಳು ಸ್ಪಂದಿಸಬೇಕು:

ಕಾವೇರಿ ನದಿಯ ಸೊಬಗು, ಹಸಿರು ಕಾಫಿ ತೋಟಗಳು, ಧಾರ್ಮಿಕ ಪರಂಪರೆ ಮತ್ತು ಪ್ರವಾಸೋದ್ಯಮದ ಕಾರಣದಿಂದ ಕರಡಿಗೋಡು ಗ್ರಾಮಕ್ಕೆ ವಿಶಿಷ್ಟ ಗುರುತು ಇದೆ. ಆದರೆ ಪ್ರವಾಸೋದ್ಯಮದ ಖ್ಯಾತಿಯ ನಡುವೆಯೂ ಸ್ಥಳೀಯರ ಬದುಕಿನ ಮೂಲ ಸಮಸ್ಯೆಗಳು ಪರಿಹಾರ ಕಾಣಬೇಕಿದೆ. ಮನೆ ಕಳೆದುಕೊಂಡವರಿಗೆ ಶಾಶ್ವತ ಸೂರು, ಕಾಡಾನೆ ಹಾವಳಿಗೆ ಪರಿಣಾಮಕಾರಿ ನಿಯಂತ್ರಣ, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಹಾಗೂ ಅಗತ್ಯ ಮೂಲಸೌಲಭ್ಯಗಳ ಅಭಿವೃದ್ಧಿ ಗ್ರಾಮಕ್ಕೆ ತುರ್ತಾಗಿ ಬೇಕಾಗಿದೆ.ಜನರ ಸಂಕಷ್ಟಗಳಿಗೆ ಸಂಬಂಧಪಟ್ಟ ಇಲಾಖೆಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸಿದಾಗ ಮಾತ್ರ ಕರಡಿಗೋಡಿನ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ.

ಕರಡಿಗೋಡು ಗ್ರಾಮದ ಬಸವೇಶ್ವರ ದೇವರ ಉತ್ಸವಕ್ಕೆ 200 ವರ್ಷಗಳ ಇತಿಹಾಸವಿದೆ. ನಮ್ಮ ಕುಟುಂಬದ ಪೂರ್ವಜರ ಆಚರಣೆಯನ್ನು ನಾವು ಇಂದಿಗೂ ಮುಂದುವರಿಕೊಂಡು ಬಂದಿದ್ದೇವೆ. ಕುಕ್ಕುನೂರು ಕುಟುಂಬಸ್ಥರ ಮನೆ ದೇವರಾದ ಬಸವೇಶ್ವರನಿಗೆ ವಿಶೇಷ ಶಕ್ತಿಯಿದೆ. ಭಕ್ತರು ತಮ್ಮ ಹರಕೆ ಹೊತ್ತು ಈ ಸನ್ನಿಧಿಯಲ್ಲಿ ಫಲಗಳನ್ನು

ಪಡೆದಿದ್ದಾರೆ. ಪ್ರತಿ ವರ್ಷ ಸಾವಿರಾರು ಭಕ್ತರು ಉತ್ಸವ ಸಂದರ್ಭ ಸಂಗಮ ಗೊಳ್ಳುತ್ತಾರೆ.

ಸೂರಜ್

ಕರಡಿಗೋಡು ಗ್ರಾಮಸ್ಥ

****

ಕರಡಿಗೋಡು ಗ್ರಾಮವು ಅರಣ್ಯದಂಚಿನ ಹಳ್ಳಿಯಾಗಿದೆ. ಕಸ್ತೂರಿರಂಗನ್ ವರದಿಯಲ್ಲಿ ಮುಂಚೂಣಿಯಲ್ಲಿ ಇರುವ ಪ್ರದೇಶಕ್ಕೆ ಸೇರಿದೆ. ಹಸಿರು ಪಟ್ಟಿಯಲ್ಲಿ ಇರುವುದರಿಂದ ಯಥಾಸ್ಥಿತಿ ಕಾಪಾಡಬೇಕಾಗಿದೆ. ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಇಲ್ಲಿ ನಿರ್ವಹಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. 2018ರಲ್ಲಿ ಪ್ರವಾಹ ಬಂದು ನೂರಕ್ಕೂ ಅಧಿಕ ಮನೆಗಳು ನೆಲಸಮವಾಗಿದ್ದವು. ಇಂದಿಗೂ ಈ ಗ್ರಾಮದಲ್ಲಿ ಪರಿಹಾರ ಕಾರ್ಯಾಚರಣೆ ಆಗಿಲ್ಲ. ಹಲವರು ಪ್ಲಾಸ್ಟಿಕ್ ಶೆಡ್‌ಗಳಲ್ಲೇ

ವಾಸಿಸುತ್ತಿದ್ದಾರೆ.

ಕೃಷ್ಣ

ಕರಡಿಗೋಡು ಗ್ರಾಮಸ್ಥ