ಸ್ವಾತಂತ್ರ್ಯ ದಿನಾಚರಣೆ 
ಕೊಡಗು

15ರಂದು ಸ್ಪಿರಿಟ್ ಆಫ್ ಫ್ರೀಡಂ ರನ್

ಗೋಣಿಕೊಪ್ಪ:

ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 48ನೇ ವರ್ಷದ ಸ್ಪಿರಿಟ್ ಆಫ್ ಫ್ರೀಡಂ ರನ್ ಆಯೋಜಿಸಲಾಗಿದೆ ಎಂದು ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಪಟ್ರಂಗಡ ಶ್ರೀಮಂತ್ ಮುತ್ತಣ್ಣ ತಿಳಿಸಿದರು.

ಪೊನ್ನಂಪೇಟೆಯಿಂದ ಗೋಣಿಕೊಪ್ಪವರೆಗೆ ಫ್ರೀಡಂ ರನ್ ಓಟ ನಡೆಯಲಿದ್ದು, 6 ವಿಭಾಗಗಳಲ್ಲಿ ಸ್ಪರ್ಧಿಗಳು ಭಾಗವಹಿಸಬಹುದು. ಗೋಣಿಕೊಪ್ಪ ಉಮಾಮಹೇಶ್ವರಿ ಪೆಟ್ರೋಲ್ ಪಂಪ್ ಆವರಣದಲ್ಲಿ ಸ್ಪರ್ಧೆ ಕೊನೆಗೊಳ್ಳಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1 ರಿಂದ 4ನೇ ತರಗತಿ, 5 ರಿಂದ 7ನೇ ತರಗತಿ, 8 ರಿಂದ 10 ನೇ ತರಗತಿ, ಪ್ರಥಮ ಪಿಯುಸಿಯಿಂದ ಪದವಿ ವಿಭಾಗದ ಬಾಲಕ, ಬಾಲಕಿಯರು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಮಹಿಳೆ ಮತ್ತು ಪುರುಷರು, ಹಿರಿಯರ ವಿಭಾಗದಲ್ಲಿ ಮಹಿಳೆ ಮತ್ತು ಪುರುಷರ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಬೆಳಗ್ಗೆ 6 ಗಂಟೆಗೆ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಹೆಸರು ನೋಂದಾಯಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಯಸ್ಸಿನ ದೃಢೀಕರಣಕ್ಕಾಗಿ ವಿದ್ಯಾರ್ಥಿಗಳು ಆಧಾರ್ ಪ್ರತಿ ಮತ್ತು ಶಿಕ್ಷಣ ಸಂಸ್ಥೆಯ ಪತ್ರ ನೀಡಬೇಕಿದೆ. ಸ್ಪರ್ಧಿಗಳಿಗೆ ಸಾರಿಗೆ ವೆಚ್ಚ ಮತ್ತು ಕಾಡು ಗಿಡಗಳನ್ನು ನೀಡಲಾಗುವುದು. ಗೋಣಿಕೊಪ್ಪ ಉಮಾಮಹೇಶ್ವರಿ ಪೆಟ್ರೋಲ್ ಪಂಪ್ ಆವರಣದಲ್ಲಿ ಬೆಳಗ್ಗಿನ ಉಪಾಹಾರ ನೀಡಲಾಗುವುದು ಎಂದು ತಿಳಿಸಿದರು.
ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪಟ್ಟಡ ಧನು ಉತ್ತಯ್ಯ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೊಳ್ಳಿಮಾಡ ಎ.ಕರುಂಬಯ್ಯ, ಖಜಾಂಚಿ ಎ.ಬಿ.ಮಾದಪ್ಪ ಉಪಸ್ಥಿತರಿದ್ದರು.