ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಮುಖಂಡರ ಜೊತೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸಮಾಲೋಚನೆ ನಡೆಸಿದರು. ರಾಬಿನ್ ದೇವಯ್ಯ, ತೆನ್ನಿರ ಮೈನಾ ಇತರರಿದ್ದರು. 
ಕೊಡಗು

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ

ಪ್ರಮುಖ ಮುಖ್ಯಾಂಶಗಳು

  • ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ
  • ರಾಜಕೀಯ ಪಕ್ಷಗಳ ಮುಖಂಡರ ಜೊತೆ ಜಿಲ್ಲಾಧಿಕಾರಿ ಸಭೆ
ಮಡಿಕೇರಿ; ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯನ್ನು ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ಪೂರ್ಣಗೊಳಿಸಲು ಪಕ್ಷದ ಮುಖಂಡರುಗಳು ಸಹಕಾರ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕೋರಿದರು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಮುಖಂಡರ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗವು ವಿಶೇಷ ಸಮಗ್ರ ಪರಿಷ್ಕರಣೆಗೆ ಅರ್ಹತಾ ದಿನಾಂಕ ೨೦೨೬ ಅ.೧ ನ್ನು ಘೋಷಿಸಿದೆ. ಜೂ.೨೦ ರಿಂದ ೨೯ರ ವರೆಗೆ ಪೂರ್ವತಯಾರಿ, ತರಬೇತಿ ಮತ್ತು ಮುದ್ರಣಕ್ಕೆ ಅವಕಾಶ ಕಲ್ಪಿಸಿದೆ. ಜೂ.೩೦ ರಿಂದ ಜು.೨೯ರ ವರೆಗೆ ಮತಗಟ್ಟೆ ಅಧಿಕಾರಿಯಿಂದ ಮನೆಮನೆ ಭೇಟಿ ಹಾಗೂ ಮತಗಟ್ಟೆಗಳ ಪುನರ್ ವಿಂಗಡಣೆ ಕಾರ್ಯ, ಆ.೫ ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಆ.೫ ರಿಂದ ಸೆ.೪ರ ವರೆಗೆ ಹಕ್ಕು ಮತ್ತು ಆಕ್ಷೇಪಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದೆ. ಜೊತೆಗೆ ಆ.೫ ರಿಂದ ಅ.೩ ರವರೆಗೆ ಸೂಚನೆ ಹಂತ/ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ. ಅ.೭ ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಎಸ್.ಜೆ.ಸೋಮಶೇಖರ್ ಮಾಹಿತಿ ನೀಡಿದರು.
ಪೂರ್ವ ಪರಿಷ್ಕರಣೆ ಚಟುವಟಿಕೆಗಳ ಸಮಯದಲ್ಲಿ ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ಈ ಸಮಯದಲ್ಲಿ ಸಾರ್ವಜನಿಕರು ಯಾವುದೇ ರೀತಿಯ ತಿದ್ದುಪಡಿಗಳು, ಹೆಸರು ನೋಂದಣಿ, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳ ತೆಗೆದು ಹಾಕುವಿಕೆ ಮತ್ತು ಮುಂಬರುವ ಅರ್ಹತಾ ದಿನಾಂಕಗಳಂತೆ ೧೮ ವರ್ಷ ತುಂಬುವ ಯುವ ಮತದಾರರ ಹೆಸರು ಸೇರ್ಪಡೆ ಕುರಿತು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
ಈಗಾಗಲೇ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜಿಲ್ಲಾ ಚುನಾವಣಾಧಿಕಾರಿಗಳು, ತಹಶೀಲ್ದಾರರು ಮತ್ತು ತಾಂತ್ರಿಕ ಸಿಬ್ಬಂದಿಗೆ ಐಟಿ ಅಪ್ಲಿಕೇಶನ್‌ಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಬೂತ್ ಮಟ್ಟದ ಅಧಿಕಾರಿಗಳಿಗೆ ಮತದಾರರ ನೋಂದಣಾಧಿಕಾರಿಗಳಿಂದ ತರಬೇತಿ ನೀಡಲಾಗುತ್ತದೆ. ಪೂರ್ವ ಮಾಹಿತಿಯುಳ್ಳ ಗಣತಿ ನಮೂನೆಗಳನ್ನು ಮುದ್ರಿಸಿ ಸರಬರಾಜು ಮಾಡಲಾಗುತ್ತದೆ. ಮನೆ-ಮನೆ ಭೇಟಿ ಹಂತ ಸಂದರ್ಭ ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ, ಪೂರ್ವ ಮಾಹಿತಿಯುಳ್ಳ ಗಣತಿ ನಮೂನೆಯನ್ನು ದ್ವಿಪ್ರತಿಯಲ್ಲಿ ವಿತರಿಸಿ, ಅವುಗಳನ್ನು ಭರ್ತಿ ಮಾಡಲು ಮಾರ್ಗದರ್ಶನ ನೀಡುತ್ತಾರೆ ಎಂದರು.
ಗಣತಿ ಸಮಯದಲ್ಲಿ ಮನೆಗೆ ಬೀಗ ಹಾಕಿದ್ದರೆ, ಅಧಿಕಾರಿಗಳು ಕನಿಷ್ಠ ಮೂರು ಬಾರಿ ಆ ಮನೆಗೆ ಭೇಟಿ ನೀಡಲು ಪ್ರಯತ್ನಿಸುತ್ತಾರೆ. ಈ ಸಂದರ್ಭ ಭರ್ತಿ ಮಾಡಿದ ನಮೂನೆಯನ್ನು ಮತದಾರರು ಕಡ್ಡಾಯವಾಗಿ ಬೂತ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಬೇಕು. ಅಧಿಕಾರಿಗಳು ಭರ್ತಿ ಮಾಡಿದ ನಮೂನೆ ಮತ್ತು ಅಗತ್ಯ ದಾಖಲೆಗಳನ್ನು ಪಡೆದು, ಒಂದು ಪ್ರತಿಗೆ ಸ್ವೀಕೃತಿ ನೀಡುತ್ತಾರೆ. ಜೊತೆಗೆ ಮತದಾರರು ದಾಖಲೆಗಳೊಂದಿಗೆ ಭರ್ತಿ ಮಾಡಿದ ನಮೂನೆಯನ್ನು ಆನ್‌ಲೈನ್ ಮೂಲಕವೂ ಅಪ್‌ಲೋಡ್ ಮಾಡಬಹುದು ಎಂದು ತಿಳಿಸಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಕಾರ್ಯದ ಹಿನ್ನಲೆಯಲ್ಲಿ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡುವುದು ಕಡ್ಡಾಯವಾಗಿದೆ. ಮಾನ್ಯತೆ ಪಡೆದಿರುವ ಎಲ್ಲಾ ರಾಜಕೀಯ ಪಕ್ಷಗಳು ಮತಗಟ್ಟೆ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು, ಮತಗಟ್ಟೆ ಅಧಿಕಾರಿಗಳ ಕಾರ್ಯ ಪರಿವೀಕ್ಷಿಸಲು ಹಾಗೂ ನ್ಯೂನತೆ ರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಅನುಕೂಲವಾಗುವಂತೆ ತಮ್ಮ ಪಕ್ಷದ ವತಿಯಿಂದ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡಿ ಪಟ್ಟಿಯನ್ನು ಸಲ್ಲಿಸುವಂತೆ ಚುನಾವಣಾಧಿಕಾರಿ ಹೇಳಿದರು.
ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರತಿನಿಧಿ ತೆನ್ನಿರ ಮೈನಾ ಮಾತನಾಡಿ, ಕೊಡಗಿನಲ್ಲಿ ೨೦೦೨ ಮತ್ತು ಅದಕ್ಕಿಂತ ಹಿಂದೆ ಮನೆತನದ ಹೆಸರಿನೊಂದಿಗೆ ಮತದಾರ ಹೆಸರು ನೋಂದಣಿಯಾಗಿದ್ದು, ಪ್ರಸ್ತುತ ಇನ್ಸಿಯಲ್ ನೊಂದಿಗೆ ನೊಂದಣಿ ಇದೆ. ಇದರಿಂದ ಸಮಸ್ಯೆಯಾಗದ ಹಾಗೆ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಾತನಾಡಿ, ಈ ಸಮಸ್ಯೆ ಗಣನೆಗೆ ಬಂದಿದ್ದು, ಜಾಗೃತಿ ವಹಿಸುವ ಭರವಸೆ ನೀಡಿದರು. ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರಾದ ರಾಬಿನ್ ದೇವಯ್ಯ, ಸಜಿಲ್ ಕೃಷ್ಣ, ಜೆಡಿಎಸ್ ಪಕ್ಷದ ಮುಖಂಡರಾದ ತೆಕ್ಕಡೆ ಗುಲಾಬಿ ಜನಾರ್ಧನ್, ಬಿಎಸ್‌ಪಿ ಮುಖಂಡರಾದ ದಿವಿಲ್ ಕುಮಾರ್, ಮಾಚಿಮಂಡ ರಮೇಶ್ ಪೂವಯ್ಯ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ರಮೇಶ್, ಸಿಪಿಐ ಕಾರ್ಯದರ್ಶಿ ರಮೇಶ್ ಮಾಯಮುಡಿ ಇತರರು ಇದ್ದರು.
ಮ್ಯಾಪಿಂಗ್‌ನಲ್ಲಿ ಪ್ರಗತಿ
ಪ್ರಸ್ತುತ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯ ಪೂರ್ವಭಾವಿ ಕಾರ್ಯವಾಗಿ ೨೦೨೫ರ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು ೨೦೦೨ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ ಮಾಡಿ, ಲಭ್ಯವಿರುವ ಮತದಾರರನ್ನು ಹಾಗೂ ಅವರ ಸಂತತಿ ವಿವರಗಳನ್ನು ಜೋಡಣೆ ಮಾಡಲಾಗಿದೆ. ಈ ಕಾರ್ಯದಲ್ಲಿ ೪,೬೮,೫೪೬ ಮತದಾರರಲ್ಲಿ ೪,೬೦,೬೦೨ ಮತದಾರರನ್ನು ಮ್ಯಾಪಿಂಗ್ ಮಾಡುವ ಮೂಲಕ ಜಿಲ್ಲೆಯು ಶೇ.೯೮.೩೦ ಪ್ರಗತಿ ಸಾಧಿಸಲಾಗಿದ್ದು, ಉಳಿದ ಮತದಾರರನ್ನು ಜೋಡಣೆ ಮಾಡುವ ಕಾರ್ಯವು ಪ್ರಗತಿಯಲ್ಲಿದೆ ಎಂದು ಎಸ್.ಜೆ.ಸೋಮಶೇಖರ್ ತಿಳಿಸಿದರು.
ನೋಂದಣಾಧಿಕಾರಿಗಳ ನೇಮಕ
ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಕ್ಕೆ ಮತದಾರರ ನೋಂದಣಾಧಿಕಾರಿಗಳ ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ೨೦೮-ಮಡಿಕೇರಿ ಕ್ಷೇತ್ರಕ್ಕೆ ಉಪ ವಿಭಾಗಧಿಕಾರಿ ನಿತೀನ್ ಚಕ್ಕಿ, ೨೦೯-ವಿರಾಜಪೇಟೆ ಕ್ಷೇತ್ರಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಆರ್.ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದೆ. ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿ ತಾಲೂಕು ತಹಶೀಲ್ದಾರ್‌ಗಳನ್ನು ನೇಮಕ ಮಾಡಲಾಗಿದೆ. ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯಲ್ಲಿ ಜಿಲ್ಲೆಯಲ್ಲಿ ೫೫೨ ಬಿಎಲ್‌ಒಗಳು ಹಾಗೂ ೯೬ ಬಿಎಲ್‌ಒ ಮೇಲ್ವಿಚಾರಕರನ್ನು ನೇಮಕ ಮಾಡಿರುವುದಾಗಿ ಜಿಲ್ಲಾ ಚುನಾವಣಾಧಿಕಾರಿ ಮಾಹಿತಿ ನೀಡಿದರು.