ಕೂಡಿಗೆಯ ಕೊಡಗು ಸೈನಿಕ ಶಾಲೆಯಲ್ಲಿ ನಡೆದ ದಕ್ಷಿಣ ವಲಯದ ಅಂತರ ಗುಂಪು ಫುಟ್‌ಬಾಲ್ ಪಂದ್ಯಾವಳಿಯಲ್ಲಿ ರೋಚಕ ಕಾದಾಟವೊಂದರ ದೃಶ್ಯ
ಫುಟ್‌ಬಾಲ್ ಕ್ರೀಡೆ ಸಮನ್ವಯತೆ, ನಂಬಿಕೆ ಮತ್ತು ಸಾಂಘಿಕ ಹೋರಾಟದ ಗುಣಗಳನ್ನು ಕಲಿಸುತ್ತದೆ ಎಂದು ಕೂಡಿಗೆಯ ಕೊಡಗು ಸೈನಿಕ ಶಾಲೆ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಹೇಳಿದರು. ಸೈನಿಕ ಶಾಲೆಯಲ್ಲಿ ಸೋಮವಾರ ನಡೆದ ದಕ್ಷಿಣ ವಲಯದ ಅಂತರ ಗುಂಪು ಫುಟ್‌ಬಾಲ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ತಂಡದ ಕೆಲಸ, ನಾಯಕತ್ವ ಮತ್ತು ಸ್ಥಿತಿಸ್ಥಾಪಕತ್ವವನ್ನು ಬೆಳೆಸುವಲ್ಲಿ ಕ್ರೀಡೆಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಾಂಶುಪಾಲರು ವಿದ್ಯಾರ್ಥಿಗಳು ಪ್ರಾಮಾಣಿಕತೆಯಿಂದ ಸ್ಪರ್ಧಿಸಬೇಕು. ಕ್ರೀಡಾ ಮನೋಭಾವದ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದರಲ್ಲದೆ ಸಂಘಟನಾ ತಂಡದ ಪ್ರಯತ್ನಗಳನ್ನು ಪ್ರಶಂಸಿಸಿದರು.
ದಿವ್ಯಾ ಸಿಂಗ್, ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್, ಉಪಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರು, ಶಾಲಾ ವೈದ್ಯಾಧಿಕಾರಿಗಳು, ವಿವಿಧ ತಂಡಗಳ ಮೇಲ್ವಿಚಾರಕರು, ವ್ಯವಸ್ಥಾಪಕರು, ತರಬೇತುದಾರರು, ತೀರ್ಪುಗಾರರು, ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ, ಎನ್‌ಸಿಸಿ ಪಿಐ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಸ್ಪರ್ಧಾಳುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಸೋಹಮ್ ಪ್ರತಿಜ್ಞಾವಿಧಿ ಬೋಧಿಸಿದರು. ಭಾಗವಹಿದ ಕ್ರೀಡಾಪಟುಗಳು ಕ್ರೀಡಾ ಮನೋಭಾವ ಮತ್ತು ನ್ಯಾಯಸಮ್ಮತ ಆಟದ ನಿಯಮಗಳನ್ನು ಎತ್ತಿಹಿಡಿಯುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಆತಿಥೇಯ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ರೋಮಾಂಚನಕಾರಿಯಾದ ಚಂಡೆ-ಮದ್ದಳೆ ಪ್ರದರ್ಶನ ನಡೆಯಿತು.
ಸೈನಿಕ ಶಾಲೆ ಅಮರಾವತಿನಗರ (ತಮಿಳುನಾಡು), ಸೈನಿಕ ಶಾಲೆ ಕಲಿಕಿರಿ (ಆಂಧ್ರಪ್ರದೇಶ), ಸೈನಿಕ ಶಾಲೆ ಕಝಕೂಟಂ(ಕೇರಳ), ಮಧುರೈನ ವಲ್ಲಭ ವಿದ್ಯಾಲಯ (ತಮಿಳುನಾಡು), ಮತ್ತು ಟ್ಯೂಟಿಕೋರಿನ್‌ನ ವಿಕಾಸ ಶಾಲೆ (ತಮಿಳುನಾಡು) ಹಾಗೂ ಆತಿಥೇಯ ಕೂಡಿಗೆ ಸೈನಿಕ ಶಾಲೆಯ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. 15 ವರ್ಷದೊಳಗಿನ ಬಾಲಕರು, 17 ವರ್ಷದೊಳಗಿನ ಬಾಲಕರು ಮತ್ತು 17 ವರ್ಷದೊಳಗಿ ಬಾಲಕಿಯರು ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಮಧುರೈ ವಲ್ಲಭ ವಿದ್ಯಾಲಯ 15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಭಾಗವಹಿಸುತ್ತಿದ್ದರೆ, ಟ್ಯೂಟಿಕೋರಿನ್‌ನ ವಿಕಾಸ ಶಾಲೆ 17 ವರ್ಷದೊಳಗಿನ ಬಾಲಕರ ವಿಭಾಗಗಳಲ್ಲಿ ಸ್ಪರ್ಧಿಸಿತು.