ಸೋಮವಾರಪೇಟೆ ಸಮೀಪದ ಯಡೂರು ಗ್ರಾಮದಲ್ಲಿ ನಡೆದ ಶ್ರೀ ಸಬ್ಬಮ್ಮ ಸುಗ್ಗಿ ಉತ್ಸವದಲ್ಲಿ ದೇವರ ಒಡೆಕಾರರು ಪೂಜೆ ಸಲ್ಲಿಸಿದರು.
ಸೋಮವಾರಪೇಟೆ: ಯಡೂರು ಗ್ರಾಮದ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗೆ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ಯಡೂರು ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಸುಗ್ಗಿಕಟ್ಟೆಯಲ್ಲಿ ಮಲೆನಾಡಿನ ಜನರ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಸಾಂಪ್ರದಾಯಿಕ ಪೂಜೆ ಕಾರ್ಯಗಳು ನಡೆದವು. ಶುಕ್ರವಾರ ರಾತ್ರಿ ಸುಗ್ಗಿಕಟ್ಟೆಯಲ್ಲಿ ದೇವಿಗೆ ಮಡೆ ಇಟ್ಟ ಗ್ರಾಮಸ್ಥರು ಊರಿನ ಸಮೃದ್ಧಿ ಹಾಗೂ ಮಳೆ ಬೆಳೆಗಾಗಿ ಸಾಮೂಹಿಕ ಪೂಜೆ ಸಲ್ಲಿಸಿದರು. ಬಳಿಕ ಸಹ ಭೋಜನ ನೆರವೇರಿತು.
ಶನಿವಾರ ಬೆಳಗ್ಗೆ ಗ್ರಾಮದ ದೇವರಬಾವಿಯಲ್ಲಿ ಬಸವಣ್ಣ ದೇವರ ಗಂಗಾಸ್ನಾನ ನಡೆಯಿತು. ಬಸವಣ್ಣ ದೇವರನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಪ್ರತಿ ಮನೆಯವರು ಈಡುಗಾಯಿಯೊಂದಿಗೆ ಪೂಜೆ ಸಲ್ಲಿಸಿದರು. ಅಡ್ಡೆಹೊತ್ತವರ ಕುಣಿತವನ್ನು ಜನರು ವೀಕ್ಷಿಸಿ ಚಪ್ಪಾಳೆಯೊಂದಿಗೆ ಪ್ರೋತ್ಸಾಹಿಸಿದರು. ಸುಗ್ಗಿಕಟ್ಟೆಯಲ್ಲಿ ಗ್ರಾಮಸ್ಥರ ಸಾಮೂಹಿಕ ಕುಣಿತದೊಂದಿಗೆ, ದೇವತಕ್ಕರ ಮೆರವಣಿಗೆ ನಡೆಯಿತು. ಭಾನುವಾರ ಮಲ್ಲಸುಗ್ಗಿ, ಸೋಮವಾರ ಹಗಲು ಸುಗ್ಗಿ, ಮಂಗಳವಾರ ಮಾರಿ ಕಳುಹಿಸುವ ಕಾರ್ಯದೊಂದಿಗೆ 13 ದಿನಗಳ ಸುಗ್ಗಿ ಉತ್ಸವ ಮುಕ್ತಾಯಗೊಳ್ಳಲಿದೆ.
ಯಡೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಿ.ಡಿ.ಮುತ್ತಣ್ಣ, ಕಾರ್ಯದರ್ಶಿ ಸುದೀರ್, ಉಪಾಧ್ಯಕ್ಷ ಲೋಕೇಶ್, ದೇವರ ಒಡೆಕಾರರು ಸುಗ್ಗಿ ಉತ್ಸವದ ಜವಾಬ್ದಾರಿ ವಹಿಸಿದ್ದರು.