ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಲೋಕೇಶ್, ಮೇದಪ್ಪ, ರವೀಂದ್ರ ಇದ್ದರು.
ಸೋಮವಾರಪೇಟೆ: ಸಮೀಪದ ಶಾಂತಳ್ಳಿ ಗ್ರಾಮದಲ್ಲಿರುವ ಶ್ರೀಕುಮಾರಲಿಂಗೇಶ್ವರ ದೇವಾಲಯದ 67ನೇ ವರ್ಷದ ಮಹಾ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಸಮಾರೋಪ ಶನಿವಾರ ಭಕ್ತಿಭಾವ ಹಾಗೂ ಸಂಭ್ರಮದೊಂದಿಗೆ ನೆರವೇರಿತು.
ಕಾರ್ಯಕ್ರಮವನ್ನು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಜಾತ್ರೆಗಳು ಧಾರ್ಮಿಕ ಆಚರಣೆಯ ಜತೆಗೆ ಸಾಮಾಜಿಕ ಸೌಹಾರ್ದತೆಯನ್ನು ಬೆಳೆಸುವ ಮಹತ್ವದ ವೇದಿಕೆಗಳಾಗಿವೆ ಎಂದು ಹೇಳಿದರು.
ಇಂತಹ ಪರಂಪರೆಯ ಉತ್ಸವಗಳು ಮುಂದಿನ ಪೀಳಿಗೆಗೆ ಸಂಸ್ಕೃತಿಯ ಮೌಲ್ಯಗಳನ್ನು ಸಾರುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮಾತನಾಡಿ, ಶ್ರೀಕುಮಾರಲಿಂಗೇಶ್ವರ ದೇವಾಲಯದ ಜಾತ್ರೋತ್ಸವ ವರ್ಷದಿಂದ ವರ್ಷಕ್ಕೆ ಇನ್ನಷ್ಟು ಭಕ್ತರನ್ನು ಆಕರ್ಷಿಸುತ್ತಿದ್ದು, ಶಾಂತಳ್ಳಿಯ ಸಾಂಸ್ಕೃತಿಕ ಗುರುತಾಗಿ ಬೆಳೆದಿದೆ ಎಂದು ಅಭಿಪ್ರಾಯಪಟ್ಟರು.
ದೇವಾಲಯ ಧರ್ಮದರ್ಶಿ ಸಮಿತಿ ಅಧ್ಯಕ್ಷ ಕೆ.ಎಂ.ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕೆ.ಕೆ.ಮುತ್ತಣ್ಣ, ಎಸ್.ಆರ್.ಉತ್ತಯ್ಯ, ಜಿ.ಎಸ್.ಮಧು ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಧರ್ಮದರ್ಶಿ ಕೆ.ಕೆ.ಪೊನ್ನಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಡಿ.ಪಿ.ಜೋಯಪ್ಪ, ನಿವೃತ್ತ ನೀರುಗಂಟಿ ಎಸ್.ಜೆ. ರಾಜು ಹಾಗೂ ಶೈಕ್ಷಣಿಕವಾಗಿ ಸಾಧನೆಗೈದ ಬೆಟ್ಟದಳ್ಳಿ ಗ್ರಾಮದ ಕೆ.ಜಿ.ನಿಧಿ ಮತ್ತು ಬೆಂಕಳ್ಳಿ ಗ್ರಾಮದ ಸಿ.ಎಸ್.ಆದ್ವಿ ಅವರನ್ನು ಸನ್ಮಾನಿಸಲಾಯಿತು. ಫಲಪುಷ್ಪ, ವಸ್ತು ಪ್ರದರ್ಶನ ಹಾಗೂ ವಿಶೇಷ ವಸ್ತುಗಳ ಸ್ಪರ್ಧೆಯಲ್ಲಿ ವಿಜೇತರಾದ ಕೃಷಿಕರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.