ಸೋಮವಾರಪೇಟೆ ತಾಲೂಕಿನ ಕುಂಬೂರು ಗ್ರಾಮದ ಪೈಸಾರಿ ಜಾಗದಲ್ಲಿ ನಿವೇಶನ ರಹಿತರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಶಾಸಕ ಡಾ.ಮಂತರ್‌ಗೌಡ ಭೇಟಿ ನೀಡಿ ಬೇಡಿಕೆ ಆಲಿಸಿದರು. ಕೃಷ್ಣಮೂರ್ತಿ ಇದ್ದರು. 
ಕೊಡಗು

53ನೇ ದಿನಕ್ಕೆ ಕಾಲಿಟ್ಟ ಕುಂಬೂರು ಗ್ರಾಮಸ್ಥರ ಧರಣಿ

ಸೋಮವಾರಪೇಟೆ: ನಿವೇಶನರಹಿತ ಬಡವರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಕುಂಬೂರು ಗ್ರಾಮದಲ್ಲಿ ನಡೆಸುತ್ತಿರುವ ಧರಣಿ ಮಂಗಳವಾರ 52ನೇ ದಿನಕ್ಕೆ ಕಾಲಿಟ್ಟಿದೆ.
ಮಾದಾಪುರ ಗ್ರಾಮ ಪಂಚಾಯಿತಿ ಕುಂಬೂರು ಗ್ರಾಮದ ಸರ್ವೇ ನಂ.125/1, 22/1-2ರ ಸರ್ಕಾರಿ ಜಾಗದಲ್ಲಿ ಧರಣಿ ನಡೆಸುತ್ತಿದ್ದರು. ಜನಪ್ರತಿನಿಧಿಗಳಿಂದ, ಅಧಿಕಾರಿಗಳಿಂದ ಯಾವುದೇ ಪೂರಕ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಜೂ.25ರಿಂದ ಸೋಮವಾರಪೇಟೆಯ ಶಾಸಕರ ಮನೆಯ ಮುಂದೆ ಅಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದರು.
ಸೋಮವಾರ ಸಂಜೆ ಧರಣಿ ಸ್ಥಳಕ್ಕೆ ತೆರಳಿದ ಶಾಸಕ ಡಾ.ಮಂತರ್‌ಗೌಡ ಅವರು, ಬಡ ನಿವೇಶನರಹಿತರ ಬೇಡಿಕೆಗಳನ್ನು ಆಲಿಸಿದರು. ಧರಣಿನಿರತರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪೈಸಾರಿ ಜಾಗವನ್ನು ಗುರುತಿಸುವಂತೆ ತಹಸೀಲ್ದಾರ್ ಕೃಷ್ಣಮೂರ್ತಿ ಅವರಿಗೆ ಸೂಚಿಸಿದರು.
ಮೂರು ದಿನಗಳ ಒಳಗೆ ಪೈಸಾರಿ ಜಾಗವನ್ನು ಗುರುತಿಸಿ ನಂತರ ಸರ್ವೇ ಮಾಡಿಸಿ, ಸೂಕ್ತ ಜಾಗದಲ್ಲಿ ನಿವೇಶನ ನೀಡುವುದಕ್ಕೆ ಕ್ರಮ ಜರುಗಿಸಲಾಗುವುದು ಎಂದು ಧರಣಿ ನಿರತರಿಗೆ ಶಾಸಕರು ಭರವಸೆ ನೀಡಿದರು.
ಧರಣಿಯಲ್ಲಿ ಭಾಗವಹಿಸಿರುವ ನಿವೇಶನರಹಿತರ ಪಟ್ಟಿಯನ್ನು ತೆಗೆದುಕೊಂಡು ಪಿಡಿಒಗಳು ಮುಂದಿನ ಸಭೆಯಲ್ಲಿ ಭಾಗವಹಿಸಬೇಕು ಎಂದು ಶಾಸಕರು ಸೂಚಿಸಿದರು.
ಧರಣಿ ನೇತೃತ್ವ ವಹಿಸಿದ್ದ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಕೆ.ಮೊಣ್ಣಪ್ಪ, ನಿವೇಶನ ರಹಿತರ ಸಂಕಷ್ಟದ ಬದುಕನ್ನು ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.