ಸೋಮವಾರಪೇಟೆ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಮಹಿಳಾ ಸಮಾಜದಲ್ಲಿ ಏರ್ಪಡಿಸಿದ್ದ ಆರೋಗ್ಯ ಜಾಗೃತಿ ಶಿಬಿರವನ್ನು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಉದ್ಘಾಟಿಸಿದರು. ವಿಜಯಲಕ್ಷ್ಮೀ, ವೀಣಾ, ಕವಿತಾ, ಮಂಜುಳಾ ಇದ್ದರು.
ಸೋಮವಾರಪೇಟೆ: ಆರೋಗ್ಯವಂತ ಮಹಿಳೆ ಸಮಾಜದ ಆಸ್ತಿಯಾಗಿದ್ದು, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು, ಸೂಕ್ತ ಸಮಯದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಇನ್ನರ್‌ವ್ಹೀಲ್ ಕ್ಲಬ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಸಲಹೆ ನೀಡಿದರು.
ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಪಟ್ಟಣದ ಮಹಿಳಾ ಸಮಾಜ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಆರೋಗ್ಯ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿವಿಧ ಸಂಘ-ಸಂಸ್ಥೆಗಳಿಂದ ಅಲ್ಲಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು ನಡೆಯುತ್ತಿರುತ್ತವೆ. ಅವುಗಳಿಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಅಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆಗಳಿಗೂ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಗರ್ಭಕಂಠ ಕ್ಯಾನ್ಸರ್ ಕುರಿತು ಸಮಾಜದಲ್ಲಿ ಇನ್ನೂ ಸಾಕಷ್ಟು ಅರಿವಿನ ಕೊರತೆಯಿದೆ. ಆರಂಭಿಕ ಹಂತದಲ್ಲೇ ತಡೆಗಟ್ಟಬಹುದಾದ ರೋಗವಾಗಿರುವುದರಿಂದ ಲಸಿಕೆ ಪಡೆಯುವುದು ಅತ್ಯಂತ ಮುಖ್ಯವಾಗಿದೆ. ಈಗ ಸರ್ಕಾರವೇ ಈ ಲಸಿಕೆಯನ್ನು ಉಚಿತವಾಗಿ ನೀಡುತ್ತಿರುವುದರಿಂದ ಸಾಮಾನ್ಯ ಜನರೂ ಸುಲಭವಾಗಿ ಇದರ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ಸ್ತ್ರೀ ರೋಗ ತಜ್ಞೆ ವೈದ್ಯೆ ಡಾ.ಹಿಮಾನಿ ಮಾತನಾಡಿ, ಆರಂಭಿಕ ಹಂತದಲ್ಲಿ ಗರ್ಭಕಂಠ ಕ್ಯಾನ್ಸರ್‌ನ ಯಾವುದೇ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳದ ಕಾರಣ ನಿಯಮಿತ ಆರೋಗ್ಯ ತಪಾಸಣೆ ಮತ್ತು ಪ್ಯಾಪ್ ಸ್ಮಿಯರ್ ಪರೀಕ್ಷೆಗಳು ಅತ್ಯಂತ ಅಗತ್ಯವಾಗಿವೆ. 13ರಿಂದ 15 ವರ್ಷದೊಳಗಿನ ಪ್ರತಿಯೊಂದು ಹೆಣ್ಣುಮಕ್ಕಳೂ ಗರ್ಭಕಂಠ ಕ್ಯಾನ್ಸರ್ ವಿರುದ್ಧದ ಲಸಿಕೆಯನ್ನು ಪಡೆಯಬಹುದು ಎಂದು ಹೇಳಿದರು.
ಆರೋಗ್ಯಕರ ಜೀವನಶೈಲಿ, ವೈಯಕ್ತಿಕ ಸ್ವಚ್ಛತೆ ಮತ್ತು ನಿಯಮಿತ ವೈದ್ಯಕೀಯ ತಪಾಸಣೆಗಳ ಮೂಲಕ ಈ ರೋಗವನ್ನು ಬಹುಮಟ್ಟಿಗೆ ತಡೆಗಟ್ಟಬಹುದು ಎಂದು ವಿವರಿಸಿದರು. ಲಸಿಕೆ ಮಾತ್ರವಲ್ಲದೆ, ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರುವುದು ಅತ್ಯಂತ ಮುಖ್ಯವಾಗಿದೆ ಎಂದರು.
ಡಾ.ವರ್ಷಾ ಅವರು ತ್ವಚೆ ಮತ್ತು ಕೂದಲಿನ ಅರೈಕೆ ಬಗ್ಗೆ ಮಾಹಿತಿ ನೀಡಿದರು. ಕ್ಲಬ್‌ನ ಕಾರ್ಯದರ್ಶಿ ಸುವಿನಾ ಕೃಪಾಲ್, ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ರೋಟರಿ ಅಧ್ಯಕ್ಷೆ ವೀಣಾ ಮನೋಹರ್, ಜೆಸಿಐ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಇನ್ನರ್ ವ್ಹೀಲ್ ಮಾಜಿ ಅಧ್ಯಕ್ಷೆ ಕವಿತಾ ವಿರೂಪಾಕ್ಷ ಇದ್ದರು.