ಸೋಮವಾರಪೇಟೆ ಪಟ್ಟಣದಲ್ಲಿರುವ ಹೋಟೆಲ್ ಹಾಗೂ ಬೇಕರಿ ಗಳಿಗೆ ಆಹಾರ ನಿರೀಕ್ಷಕರಾದ ಯಶಸ್ವಿನಿ ಭೇಟಿ ನೀಡಿ ಪರಿಶೀಲಿಸಿದರು.
ಸೋಮವಾರಪೇಟೆ: ಅಡುಗೆ ಅನಿಲ ವ್ಯತ್ಯಯದ ಹಿನ್ನೆಲೆಯಲ್ಲಿ ಪಟ್ಟಣದ ಹೋಟೆಲ್ ಹಾಗೂ ಬೇಕರಿಗಳ ಮೇಲೆ ಆಹಾರ ನಿರೀಕ್ಷಕರು ಮಂಗಳವಾರ ದಿಢೀರ್ ದಾಳಿ ನಡೆಸಿದರು.
ಆಹಾರ ನಿರೀಕ್ಷಕರಾದ ಯಶಸ್ವಿನಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ವಿವಿಧ ಹೋಟೆಲ್‌ಗಳು ಮತ್ತು ಬೇಕರಿಗಳಲ್ಲಿ ಬಳಸುತ್ತಿರುವ ಅನಿಲ ಸಿಲಿಂಡರ್‌ಗಳನ್ನು ಪರಿಶೀಲಿಸಿದರು.
ಯಶಸ್ವಿನಿ ಮಾತನಾಡಿ, ಅವರು, ವಾಣಿಜ್ಯ ಉದ್ದೇಶಗಳಿಗೆ ಕಾರ್ಯನಿರ್ವಹಿಸುವ ಹೋಟೆಲ್ ಹಾಗೂ ಬೇಕರಿಗಳು ಕಡ್ಡಾಯವಾಗಿ ವಾಣಿಜ್ಯ ಬಳಕೆಯ ಅಡುಗೆ ಅನಿಲವನ್ನು ಮಾತ್ರ ಬಳಸಬೇಕು ಎಂದು ಸೂಚಿಸಿದರು.
ಗೃಹ ಬಳಕೆಗೆ ಮೀಸಲಾದ ಅನಿಲವನ್ನು ವಾಣಿಜ್ಯ ಚಟುವಟಿಕೆಗೆ ಬಳಸುವುದು ಕಾನೂನುಬಾಹಿರವಾಗಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪರಿಶೀಲನೆಯ ಸಂದರ್ಭದಲ್ಲಿ ಕೆಲವು ಸ್ಥಳಗಳಲ್ಲಿ ಅಗತ್ಯ ಸೂಚನೆಗಳನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ನಿಯಮ ಪಾಲನೆಗೆ ವಿಶೇಷ ಗಮನ ಹರಿಸುವಂತೆ ತಿಳಿಸಲಾಯಿತು.
ಕಾರ್ಯಾಚರಣೆಯಲ್ಲಿ ಇಲಾಖೆಯ ಸಿಬ್ಬಂದಿ ವಿನೋದ್, ಮುರಳಿ ಸೇರಿದಂತೆ ಇತರರು ಇದ್ದರು.