ಸೋಮವಾರಪೇಟೆ ತಾಲೂಕಿನ ದೊಡ್ಡಮಳ್ತೆ ಗ್ರಾಮ ವತಿಯಿಂದ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿನಿ ನಂದಿತಾ ಮಾತನಾಡಿದರು. ಗೋಪಾಲಕೃಷ್ಣ, ರಶೀದ, ಮೋಹನ್ ಇದ್ದರು. 
ಕೊಡಗು

ಶಾಲೆಯ ಸಮಸ್ಯೆಗಳನ್ನು ತೆರೆದಿಟ್ಟ ವಿದ್ಯಾರ್ಥಿಗಳು

ಸೋಮವಾರಪೇಟೆ: ನಮ್ಮ ಶಾಲೆಗೆ ಕಂಪ್ಯೂಟರ್ ಸೌಲಭ್ಯ ಒದಗಿಸಬೇಕು, ನಮಗೂ ಡಿಜಿಟಲ್ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕು. ಶಾಲಾ ಶೌಚಗೃಹವನ್ನು ಸ್ವಚ್ಛವಾಗಿ ನಿರ್ವಹಿಸಲು ಒಬ್ಬರು ಆಯಾ ನೇಮಿಸಬೇಕು. ಸರ್ಕಾರಿ ಶಾಲೆಗೆ ಮೂಲ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ದೊಡ್ಡಮಳ್ತೆ ಗ್ರಾಮ ಪಂಚಾಯಿತಿ, ಸಿಎಂಸಿಎ ಸಂಸ್ಥೆ ಬೆಂಗಳೂರು ಹಾಗೂ ನಾವು ಪ್ರತಿಷ್ಠಾನ ಕೊಡಗು ಸಹಯೋಗದಲ್ಲ್ಲಿ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಹಕ್ಕನ್ನು ಮಂಡಿಸಿದರು.
ವಿದ್ಯಾರ್ಥಿನಿಯರಾದ ನಂದಿತಾ, ಹರ್ಷಿತಾ, ಡಿಂಪಲ್ ಮಕ್ಕಳ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿಕೊಂಡು ತಮ್ಮ ಶಾಲೆಗೆ ಬೇಕಾದ ಬೇಡಿಕೆಗಳನ್ನು ಮಂಡಿಸಿದರು.
ಶಾಲಾ ಆವರಣದಲ್ಲಿ ಭದ್ರತೆಗಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು, ಬಿದ್ದು ಹೋಗಿರುವ ಶಾಲೆಯ ಕಾಂಪೌಂಡ್ ಗೋಡೆಯನ್ನು ಮರು ನಿರ್ಮಾಣ ಮಾಡಬೇಕು. ಜತೆಗೆ, ಶೌಚಗೃಹ ಸುತ್ತಮುತ್ತ ಸ್ವಚ್ಛತೆ ಕಾಪಾಡಲು ಗ್ರಾಮ ಪಂಚಾಯಿತಿ ಹಾಗೂ ಆಡಳಿತ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ದೊಡ್ಡಮಳ್ತೆ ಶಾಲೆಯ ಮಕ್ಕಳು ಒತ್ತಾಯಿಸಿದರು.
ಕ್ರೀಡಾಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಹಕಾರವಾಗುವಂತೆ ಶಾಲಾ ಮಕ್ಕಳಿಗೆ ಟ್ರಾೃಕ್ ಸೂಟ್ ಒದಗಿಸಬೇಕೆಂದು ಮಕ್ಕಳು ಮನವಿ ಮಾಡಿದರು. ಈ ಮೂಲಕ ಮಕ್ಕಳು ಕೇವಲ ಓದಿಗೆ ಮಾತ್ರವಲ್ಲದೆ, ಕ್ರೀಡೆ ಹಾಗೂ ಶಿಸ್ತುಬದ್ಧ ಜೀವನಕ್ಕೂ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಅರಿವು ಹೊಂದಿರುವುದು ಗಮನಾರ್ಹವಾಗಿತ್ತು.
ಮಕ್ಕಳ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಭರವಸೆಯನ್ನು ಅಧ್ಯಕ್ಷರು ಮತ್ತು ಪಿಡಿಒ ನೀಡಿದರು. ಮಕ್ಕಳ ಗ್ರಾಮ ಸಭೆ ಮಕ್ಕಳಲ್ಲಿ ನಾಯಕತ್ವ, ಹೊಣೆಗಾರಿಕೆ ಹಾಗೂ ಸಾಮಾಜಿಕ ಜಾಗೃತಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.
ಗ್ರಾಮ ಸಭೆಯಲ್ಲಿ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ಉಪಾಧ್ಯಕ್ಷೆ ರಶೀದ, ಸಿಆರ್‌ಪಿ ದೇವರಾಜೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾವಿತ್ರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್, ಪೊಲೀಸ್ ಇಲಾಖೆಯಿಂದ ಸಹದೇವ್ ಮತ್ತು ಸವಿತಾ, ದಾನಿಗಳಾದ ಪದ್ಮನಾಭ ಕಿರಗಂದೂರು, ನಾವು ಪ್ರತಿಷ್ಠಾನದ ಸುಮನ ಗೌತಮ್, ವನಿತಾ ಇದ್ದರು.