ಸೋಮವಾರಪೇಟೆ ತಾಲ್ಲೂಕಿನ ಆಲೂರುಸಿದ್ದಾಪುರ ಮನೆಹಳ್ಳಿ ಮಠದಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು ಚಾಲನೆ ನೀಡಿದರು. ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀಮಹಾಂತ ಸ್ವಾಮೀಜಿ, ವಕೀಲ ಚಂದ್ರಮೌಳಿ ಇದ್ದರು. 
ಕೊಡಗು

ಮನೆಹಳ್ಳಿ ಮಠದಲ್ಲಿ ದೀಪೋತ್ಸವ ಸಂಭ್ರಮ

ಸೋಮವಾರಪೇಟೆ: ತಾಲೂಕಿನ ಆಲೂರು ಸಿದ್ದಾಪುರ ಸಮೀಪದ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಸೋಮವಾರ ಸಂಜೆ ದೀಪೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಮನೆಹಳ್ಳಿ ಮಠಾಧೀಶ ಶ್ರೀಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಶ್ರೀಕ್ಷೇತ್ರ ಮನೆಹಳ್ಳಿ ಮಠವು ಈ ಹಿಂದೆ ಅಜ್ಞಾತ ಸ್ಥಳವಾಗಿತ್ತು. ಈಗ ವರ್ಷದಿಂದ ವರ್ಷಕ್ಕೆ ಧಾರ್ಮಿಕತೆಯ ಶ್ರದ್ಧಾಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಕಾಡಿನಿಂದ ಕೂಡಿದ್ದ ಈ ಪ್ರದೇಶದಲ್ಲಿ ಶ್ರೀಗುರು ಸಿದ್ಧವೀರೇಶ್ವರ ಸ್ವಾಮೀಜಿಗಳ ಶ್ರಮದಿಂದ ಪೂಜೆ, ದಾಸೋಹ ಕಾಯಕಗಳಿಂದ ತಪೋಕ್ಷೇತ್ರವಾಗಿ ಬೆಳೆದಿದೆ ಎಂದರು.
ಶಿಕ್ಷಣ ತಜ್ಞ ದಾವಣಗೆರೆಯ ಸಾಗರ್ ಮಾತನಾಡಿ, ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದೆ. ಆದರೆ ಕೆಲವರು ದುಶ್ಚಟಗಳಿಗೆ ಬಲಿಯಾಗಿ ಭವಿಷ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಅನೇಕರು ದಾರಿ ತಪ್ಪುತ್ತಿದ್ದಾರೆ. ಆನ್‌ಲೈನ್ ಗೇಮ್‌ಗಳಿಂದ ಹಣ ಕಳೆದುಕೊಳ್ಳುತ್ತಿದ್ದಾರೆ. ನೈತಿಕ ಶಿಕ್ಷಣದ ಅವಶ್ಯಕತೆಯಿದೆ. ಬಸವಣ್ಣ ಅವರ ಅನುಭವ ಮಂಟಪದ ರೀತಿಯ ಶಿಕ್ಷಣ ವ್ಯವಸ್ಥೆ ಬರಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಕೊಡಗು ಮಠಗಳ ನಾಡಾಗಿದೆ. ಉತ್ತರ ಕೊಡಗಿನಲ್ಲಿ ಶ್ರೀಕ್ಷೇತ್ರ ತಪೋವನ ಮನೆಹಳ್ಳಿ ಮಠವು ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳಿಂದ ಭಕ್ತರ ಪಾಲಿಗೆ ಪುಣ್ಯಕ್ಷೇತ್ರವಾಗಿ ರೂಪುಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಹಿರಿಯ ವಕೀಲ ಚಂದ್ರಮೌಳಿ ಅವರು ಕ್ಷೇತ್ರದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ವೇದಿಕೆಯಲ್ಲಿ ಅರಮೇರಿ ಕಳಂಚೇರಿ ಮಠದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕಲ್ಲುಮಠದ ಶ್ರೀಮಹಾಂತ ಸ್ವಾಮೀಜಿ, ಮುಳ್ಳೂರು ಮಠದ ಶ್ರೀಸ್ವತಂತ್ರ ಬಸವಲಿಂಗ ಸ್ವಾಮೀಜಿ, ಕಿರಿಕೊಡ್ಲಿ ಮಠದ ಶ್ರೀಸದಾಶಿವ ಸ್ವಾಮೀಜಿ, ಚಿಲುಮೆ ಮಠದ ಶ್ರೀಜಯದೇವ ಸ್ವಾಮೀಜಿ, ತೊರೆನೂರು ಮಠದ ಶ್ರೀಮಲ್ಲೇಶ ಸ್ವಾಮೀಜಿ, ಶಿಡಿಗಳಲೆ ಮಠದ ಶ್ರೀಇಮ್ಮಡಿ ಶಿವಲಿಂಗ ಸ್ವಾಮೀಜಿ ಹಾಗೂ ವಿವಿಧ ಗಣ್ಯರು ಇದ್ದರು.
ತಪೋವನೇಶ್ವರಿ ಮಹಿಳಾ ತಂಡದವರು ಪ್ರಾರ್ಥನೆ ಮಾಡಿದರು.
ಅಕ್ಕಪಕ್ಕದ ಗ್ರಾಮಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.