ಸೋಮವಾರಪೇಟೆ ತಾಲೂಕು ಕೇಂದ್ರ ಸಾಹಿತ್ಯ ವೇದಿಕೆ ವತಿಯಿಂದ ಐಗೂರಿನ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕವನ ವಾಚನ ಮತ್ತು ಭಾವಗೀತೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಕೆ.ಎನ್.ದೀಪಕ್, ನಂಗಾರು ಕೀರ್ತಿಪ್ರಸಾದ್, ವಸಂತ್, ಕೆ.ಎ.ಪ್ರಕಾಶ್, ಪದ್ಮಾವತಿ, ಎಸ್.ಎ.ಮುರಳೀಧರ್, ಶರ್ಮಿಳಾ ರಮೇಶ್ ಇತರರಿದ್ದರು.
ಸೋಮವಾರಪೇಟೆ: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರತರಲು ಶಾಲಾ ಹಂತದಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್ ತಿಳಿಸಿದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕದಿಂದ ಐಗೂರಿನ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡಿ ಸಾಧನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಐಗೂರು ಹೋಬಳಿ ಘಟಕದ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್, ಕೆಟಿಡಿಒ ತಾಲೂಕು ಅಧ್ಯಕ್ಷ ವಸಂತ್, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕೆ.ಎ.ಪ್ರಕಾಶ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕದ ಉಪಾಧ್ಯಕ್ಷೆ ಪದ್ಮಾವತಿ, ಎಸ್.ಎ.ಮುರಳೀಧರ್, ಘಟಕದ ತಾಲೂಕು ಅಧ್ಯಕ್ಷೆ ಶರ್ಮಿಳಾ ರಮೇಶ್, ಮುಖ್ಯ ಶಿಕ್ಷಕ ಯಶವಂತಕುಮಾರ್ ಇದ್ದರು.
ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಭಾವಗೀತೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕವನ ವಾಚನ ಸ್ಪರ್ಧೆ ಆಯೋಜಿಸಲಾಗಿತ್ತು. ಭಾವಗೀತೆ ಸ್ಪರ್ಧೆಯಲ್ಲಿ ಡಿಂಪಲ್ ಪ್ರಥಮ, ಅನು ದ್ವಿತೀಯ ಮತ್ತು ಪವಿತ್ರ ತೃತೀಯ ಸ್ಥಾನ ಪಡೆದರು. ಕವನ ವಾಚನ ಸ್ಪರ್ಧೆಯಲ್ಲಿ ಮ್ಯಾಥ್ಯೂ ಪ್ರಥಮ, ನಂದಿತ ದ್ವಿತೀಯ, ಯಶಸ್ವಿ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.