ಕಾರ್ಗಿಲ್ ವಿಜಯ್ ದಿವಸ್ ಸಂದರ್ಭ ಕುಶಾಲನಗರದ ನಿವತ್ತ ಯೋಧ ದಂಪತಿಯಾದ ಬೈತಡ್ಕ ಜಗದೀಶ್ ಮತ್ತು ನೀಲವೇಣಿ ಅವರನ್ನು ರೋಟರಿ ವುಡ್ಸ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ರವೀಂದ್ರ ಭಟ್, ಹೆಚ್.ಟಿ.ಅನಿಲ್, ಎಂ.ಡಿ.ರಂಗಸ್ವಾಮಿ ಇತರರಿದ್ದರು. 
ಕೊಡಗು

ಸೈನಿಕರಿಗೆ ಸಾರ್ವಜನಿಕ ಗೌರವ ಅಗತ್ಯ

ಆದರ್ಶ್. ಎಂ.ಕೆ.

ಪ್ರಮುಖ ಮುಖ್ಯಾಂಶಗಳು

  • ಸೈನಿಕರಿಗೆ ಸಾರ್ವಜನಿಕ ಗೌರವ ಅಗತ್ಯ
  • ಯೋಧ ನಮನ ಕಾರ್ಯಕ್ರಮದಲ್ಲಿ ರವೀಂದ್ರ ಭಟ್
ಮಡಿಕೇರಿ: ಭಾರತದ ರಕ್ಷಣೆಗೆ ಕಂಕಣಬದ್ಧರಾಗಿರುವ ಸೈನಿಕರ ದೇಶಸೇವೆ ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ರೋಟರಿ ಸೇರಿದಂತೆ ಸಮಾಜದ ಎಲ್ಲಾ ಸಂಘಸಂಸ್ಥೆಗಳು ಒಟ್ಟಾಗಬೇಕೆಂದು ರೋಟರಿ ಜಿಲ್ಲೆ ೩೧೮೧ನ ಮಾಜಿ ಗವರ್ನರ್ ರವೀಂದ್ರ ಭಟ್ ಕರೆ ನೀಡಿದರು.
ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ವುಡ್ಸ್ ವತಿಯಿಂದ ಭಾನುವಾರ ಆಯೋಜಿತ ೫ನೇ ವರ್ಷದ ಯೋಧ ನಮನ ಕಾರ್ಯಕ್ರಮ ಉದ್ಘಾಟಿಸಿ ರವೀಂದ್ರ ಭಟ್ ಮಾತನಾಡಿದರು.
ಓರ್ವ ಪೊಲೀಸ್ ೫ ಸಾವಿರ ಜನರನ್ನು ನಿಯಂತ್ರಿಸಬಲ್ಲ ಸಾಮರ್ಥ್ಯ ಹೊಂದಿದ್ದರೆ ಓರ್ವ ಸೈನಿಕ ೨೫ ಸಾವಿರ ಜನರನ್ನು ನಿಯಂತ್ರಿಸಬಲ್ಲ ಶಕ್ತಿ ಸಾಮರ್ಥ್ಯ ಹೊಂದಿರುತ್ತಾನೆ. ದೇಶಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟುಕೊಂಡ ಇಂಥ ಸೈನಿಕರನ್ನು ವರ್ಷಕ್ಕೊಮ್ಮೆ ಮಾತ್ರವಲ್ಲದೇ ಪ್ರತೀ ನಿತ್ಯವೂ ಗೌರವಿಸುವ ಆರಾಧಿಸುವ ಕಾರ್ಯವಾಗಬೇಕೆಂದು ರವೀಂದ್ರ ಭಟ್ ಅಭಿಪ್ರಾಯಪಟ್ಟರು.
ರೋಟರಿ ಜಿಲ್ಲೆ ೩೧೮೧ನ ಸದಸ್ಯತ್ವ ವಿಸ್ತರಣಾ ಸಮಿತಿ ಅಧ್ಯಕ್ಷ ಹೆಚ್.ಟಿ.ಅನಿಲ್ ಮಾತನಾಡಿ, ೨೭ ವರ್ಷಗಳ ಹಿಂದೆ ಕಾರ್ಗಿಲ್ನಲ್ಲಿ ನಡೆದ ಸಮರ ಭಾರತೀಯರಲ್ಲಿ ದೇಶಪ್ರೇಮವನ್ನು ತೀವ್ರವಾಗಿಸಲು ಸಹಕಾರಿಯಾಯಿತು. ಕಾರ್ಗಿಲ್ನಲ್ಲಿ ೫೨೭ ಸೈನಿಕರು ಹುತಾತ್ಮರಾಗಿದ್ದು ಅಂಥವರ ವೀರನಾರಿಯರನ್ನು ಕೂಡ ಸಮಾಜ ಗುರುತಿಸುವಂತಾಗಬೇಕೆಂದು ಸಲಹೆ ನೀಡಿದರು.
ಕಾರ್ಗಿಲ್ ಕದನ ಭಾರತೀಯ ಮನೋಸ್ಥೆರ್ಯದ ಸಮರ ಕೂಡ ಆಗಿತ್ತು ಎಂದು ನುಡಿದ ಅನಿಲ್, ಇಂದಿನ ಜೆನ್ ಜೀ ಪೀಳಿಗೆಗೆ ಹಿರಿಯರು ಕಾರ್ಗಿಲ್ ಕದನದಲ್ಲಿ ಭಾರತೀಯ ಯೋಧರ ಶ್ರಮ, ತ್ಯಾಗ, ಬಲಿದಾನವನ್ನು ತಿಳಿಸುವ ಕೆಲಸ ಮಾಡಬೇಕೆಂದು ನುಡಿದರು. ೨ ತಿಂಗಳು ೩ ವಾರ ೨ ದಿನಗಳ ಕಾರ್ಗಿಲ್ ಕದನದಿಂದ ಪಾಕಿಸ್ತಾನದ ನಿಜಬಣ್ಣ ಜಗತ್ತಿಗೆ ತಿಳಿಯುವಂತಾಯಿತಲ್ಲದೇ ಭಾರತದ ಸೇನಾ ಸಾಮರ್ಥ್ಯವೂ ಕೂಡ ವಿಶ್ವದ ಅರಿವಿಗೆ ಬಂದಿತ್ತು ಎಂದೂ ಅನಿಲ್ ಮಾಹಿತಿ ನೀಡಿದರು.
ರೋಟರಿ ವಲಯ ೬ರ ಸಹಾಯಕ ಗವರ್ನರ್ ಎಂ.ಡಿ.ರಂಗಸ್ವಾಮಿ ಮಾತನಾಡಿ, ಸರ್ಕಾರಿ ಇಲಾಖೆಗಳು ಮಾಜಿ ಸೈನಿಕರ ಅಹವಾಲನ್ನು ಮೊದಲು ಕೇಳುವಂತಾಗಬೇಕು. ಸರ್ಕಾರಿ ಕಚೇರಿಗಳಲ್ಲಿ ಮಾಜಿ ಸೈನಿಕರಿಗೆ, ಸೈನಿಕರ ಕುಟುಂಬಗಳಿಗೆ ಕೆಲಸ ಕಾರ್ಯಗಳಲ್ಲಿ ಮನ್ನಣೆ ದೊರಕಬೇಕು ಎಂದು ಒತ್ತಾಯಿಸಿದರು.
ವಲಯ ಸೇನಾನಿ ವಸಂತ ಕುಮಾರ್ ಮಾತನಾಡಿ, ಸಮರದಲ್ಲಿ ಅಸಾದಾರಣ ಶೌರ್ಯ ಮೆರೆದವರನ್ನು ಕಾರ್ಗಿಲ್ ವಿಜಯ್ ದಿವಸ್ ಸಂದರ್ಭ ರೋಟರಿ ಸಂಸ್ಥೆಗಳು ಗುರುತಿಸಿ ಗೌರವಿಸುವ ಉತ್ತಮ ಸಂಪ್ರದಾಯ ಹೊಂದಿದೆ ಎಂದರಲ್ಲದೇ, ೭೬ ದಿನಗಳ ಕಾರ್ಗಿಲ್ ಸಮರ ಭಾರತೀಯ ಸೇನೆಯ ಇತಿಹಾಸದಲ್ಲಿಯೇ ಅಜರಾಮರವಾಗಿ ದಾಖಲಾಗಿದೆ ಎಂದು ಶ್ಲಾಘಿಸಿದರು.
ರೋಟರಿ ವುಡ್ಸ್ ಅಧ್ಯಕ್ಷೆ ಪ್ರಮೀಳಾ ಶೆಟ್ಟಿ ಮಾತನಾಡಿ, ಕಳೆದ ೫ ವರ್ಷಗಳಿಂದ ರೋಟರಿ ವುಡ್ಸ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್‌ನ್ನು ಯೋಧ ನಮನ ಕಾರ್ಯಕ್ರಮವಾಗಿ ರೂಡಿಸಿಕೊಂಡು ಬರಲಾಗಿದೆ. ಯೋಧರನ್ನು ಗೌರವಿಸುವ ಮೂಲಕ ಸಮಾಜ ತನ್ನನ್ನು ತಾನೇ ಗೌರವಿಸಿಕೊಂಡಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಡಿವೈಎಸ್ಪಿ ಐ.ಪಿ.ಮೇದಪ್ಪ, ಪೊಲೀಸ್ ವತ್ತ ನಿರೀಕ್ಷಕ ಚಂದ್ರಶೇಖರ್ ವೇದಿಕೆಯಲ್ಲಿದ್ದರು. ರೋಟರಿ ವುಡ್ಸ್ ಕಾರ್ಯದರ್ಶಿ ಸ್ಮಿತಾಚಂಗಪ್ಪ ವಂದಿಸಿದ ಕಾರ್ಯಕ್ರಮದಲ್ಲಿ ಪಿ.ರವಿ ದೇಶಭಕ್ತಿ ಗೀತೆ ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್, ನಗರಸಭೆ ಸದಸ್ಯೆ ಅನಿತಾಪೂವಯ್ಯ, ವಲಯ ಸೇನಾನಿ ಲಲಿತಾರಾಘವನ್, ಮಿಸ್ಟಿ ಹಿಲ್ಸ್ ಸದಸ್ಯರಾದ ಮೋಹನ್ ಪ್ರಭು, ಎ.ಕೆ.ವಿನೋದ್, ರೋಟರಿ ವುಡ್ಸ್ ಮಾಜಿ ಅಧ್ಯಕ್ಷರಾದ ಹರೀಶ್ ಕಿಗ್ಗಾಲು, ಕಿರಣ್ ಕುಂದರ್, ವುಡ್ಸ್ ಸದಸ್ಯರು ಹಾಜರಿದ್ದರು. ಕಾರ್ಗಿಲ್ ಸ್ಮಾರಕಕ್ಕೆ ರೋಟರಿ ಸದಸ್ಯರು ಪುಪ್ಪ ನಮನ ಸಲ್ಲಿಸಿದರು.
ಯೋಧ ದಂಪತಿಗೆ ಸನ್ಮಾನ
ಕಾರ್ಗಿಲ್ ವಿಜಯ್ ದಿವಸ್ ಸಂದರ್ಭ ಕುಶಾಲನಗರದ ನಿವತ್ತ ಯೋಧ ದಂಪತಿಯಾದ ಬೈತಡ್ಕ ಜಗದೀಶ್ ಮತ್ತು ನೀಲವೇಣಿ ಅವರನ್ನು ರೋಟರಿ ವುಡ್ಸ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಲೀಲವೇಣಿ, ಕಾರ್ಗಿಲ್ ಕದನದಲ್ಲಿ ಭಾರತೀಯ ವಾಯುಸೇನೆಯನ್ನು ಮುನ್ನಡೆಸಿದ್ದ ಮಹಿಳಾ ಪೈಲಟ್‌ಗಳಾದ, ಗುಂಜನ್ ಸೆಕ್ಸೆನಾ, ವಿದ್ಯಾರಾಜನ್, ಯಶಿಕಾ ಮುಂತಾದ ಮಹಿಳೆಯರ ಸಾಮರ್ಥ್ಯ ಪ್ರೇರಣಾದಾಯಕವಾಗಿದೆ. ಮಹಿಳೆಯರೂ ಸೇನಾ ಪಡೆಗಳಲ್ಲಿ ಅತ್ಯುತ್ತಮ ವೀರಸಾಧನೆಯನ್ನು ತೋರಬಲ್ಲರು ಎಂಬುದಕ್ಕೆ ೨೭ ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಸಮರವೇ ಅತ್ಯುತ್ತಮ ನಿದರ್ಶನ ಎಂದು ಹೆಮ್ಮೆಯಿಂದ ನುಡಿದರು.