ಪೊನ್ನಂಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್‌ಗೆ ಭಗವತಿ ಸ್ನೇಹಿತರ ಯುವಕ ಸಂಘದಿಂದ ಸುಣ್ಣ ಬಣ್ಣ ಬಳಿದಿರುವುದು. ಸಂದೀಪ್, ಮನು, ಕಾವೇರಪ್ಪ, ಸಂದೀಪ್ ರಾಮು, ಸಂದೇಶ್,ಮಧು, ಶಿವು ರಾಜೇಶ್, ಮಹಾದೇವ ಇದ್ದರು.
- ತಮ್ಮ ಸ್ವಂತ ಖರ್ಚಿನಲ್ಲಿ
- ಶ್ರೀ ಭಗವತಿ ಸ್ನೇಹಿತರ ಯುವಕ ಸಂಘ
- ಕುಂದ ರಸ್ತೆಯಲ್ಲಿರುವ ಸುಮಾರು 15 ಸಮಾನ ಮನಸ್ಕ ಯುವಕರು
ಪೊನ್ನಂಪೇಟೆ: ತಮ್ಮ ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲೆಯ ಕಾಂಪೌಂಡ್‌ಗೆ ಸುಣ್ಣ-ಬಣ್ಣ ಬಳಿಸುವ ಮೂಲಕ ಶ್ರೀ ಭಗವತಿ ಸ್ನೇಹಿತರ ಯುವಕ ಸಂಘದ ಸದಸ್ಯರು ಮಾದರಿಯಾಗಿದ್ದಾರೆ.
ಪಟ್ಟಣದ ಕುಂದ ರಸ್ತೆಯಲ್ಲಿರುವ ಸುಮಾರು 15 ಸಮಾನ ಮನಸ್ಕ ಯುವಕರು ಕಳೆದ ಒಂದು ವರ್ಷದ ಹಿಂದೆ ಸ್ಥಾಪಿಸಿದ ಭಗವತಿ ಸ್ನೇಹಿತರ ಯುವಕ ಸಂಘ ಪೊನ್ನಂಪೇಟೆಯಾದ್ಯಂತ ಮನೆ ಮಾತಾಗಿದೆ. ಇತ್ತೀಚಿಗೆ ಪಟ್ಟಣದ ಮುಖ್ಯ ರಸ್ತೆಯ ಗುಂಡಿಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಸಿಮೆಂಟ್ ಹಾಗೂ ಜಲ್ಲಿಯನ್ನು ಹಾಕಿ ಮುಚ್ಚಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು.
ಮನು, ಕಾವೇರಪ್ಪ, ಸಂದೀಪ್, ಸಂದೇಶ್, ಸಂದೇಶ್ ರಾಮು, ಮಧು, ಶಿವು, ರಾಜೇಶ್, ಮಹಾದೇವ ಎಂಬ ಭಗವತಿ ಸ್ನೇಹಿತರ ಯುವಕ ಸಂಘದ ಸದಸ್ಯರು ಭಾನುವಾರ ಸುಮಾರು 17,000 ರೂ. ವೆಚ್ಚದಲ್ಲಿ ಸುಣ್ಣ ಬಣ್ಣವನ್ನು ಖರೀದಿಸಿ ತಾವೇ ಖುದ್ದಾಗಿ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್‌ಗೆ ಬಣ್ಣ ಬಳಿಯುವ ಮೂಲಕ ತಾವು ಓದಿದ ಶಾಲೆ ಋಣ ತೀರಿಸಿದ್ದಾರೆ.
ಅರ್ವತೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ತೀತಮಾಡ ಸುಗುಣ ಸೋಮಯ್ಯ ಮತ್ತು ತೀತಮಾಡ ಗಗನ್ ಗಣಪತಿ ಸಮಾಜಮುಖಿ ಕೆಲಸಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಸ್ಥಿತಿವಂತರಲ್ಲದಿದ್ದರೂ ಯುವಕರು ತಾವು ದುಡಿಯುವ ಹಣದಿಂದಲೇ ಅಲ್ಪಸಲ್ಪ ಉಳಿಸಿ ಇಂತಹ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಸಾರ್ವಜನಿಕರ ಪ್ರಸಂಶಕ್ಕೆ ಒಳಗಾಗಿದ್ದಾರೆ.